ಮಂಗಳೂರು: ಇಸ್ಲಾಂ ಧರ್ಮಕ್ಕೆ ಮೊಹಮ್ಮದ್ ಪೈಗಂಬರ್ ಗುರು, ಕುರಾನ್ ಧರ್ಮ ಗ್ರಂಥ. ಕ್ರಿಶ್ಚಿಯನ್ನರಿಗೆ ಯೇಸುಕ್ರಿಸ್ತ ಧರ್ಮಗುರು ಬೈಬಲ್ ಧರ್ಮಗ್ರಂಥ ಇದ್ದಂತೆ, ಲಿಂಗಾಯತರಿಗೆ ಬಸವಣ್ಣ ಧರ್ಮಗುರು, ವಚನ ಸಾಹಿತ್ಯವೇ ಧರ್ಮ ಗ್ರಂಥ. ಇವೆರಡರ ಪ್ರಕಾರ ನಡೆದುಕೊಳ್ಳುವವರು ಲಿಂಗಾಯತರು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು ಹೇಳಿದರು.
ಇಲ್ಲಿನ ಸಹಮತ ವೇದಿಕೆಯು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಇಲ್ಲಿ ಬಸವ ಸಂಸ್ಕೃತಿ ಅಭಿಯಾನದ ಭಾಗವಾಗಿ ನಡೆದ ವಿದ್ಯಾರ್ಥಿಗಳ ಜೊತೆಗಿನ ವಚನ ಸಂವಾದದಲ್ಲಿ ಅವರು ಮಾತನಾಡಿದರು. ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧ. ಹಾಗೆಯೇ ಲಿಂಗಾಯತ ಧರ್ಮದ ಸಂಸ್ಥಾಪಕ ಬಸವಣ್ಣನವರು. ಅನುಭವ ಮಂಟಪದ ಮೂಲಕ ಮೌಲಿಕ ಆಡಳಿತವನ್ನು ಕೊಟ್ಟ ವಿಶ್ವಗುರು ಬಸವಣ್ಣ ಎಂದರು.
10ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ ಸಂವಾದದಲ್ಲಿ ಹಲವಾರು ವಿದ್ಯಾರ್ಥಿಗಳು ಪ್ರಶ್ನೆ ಕೇಳಿದರು.
‘ಜಾತ್ಯತೀತ ಸಮಾಜ ನಿರ್ಮಾಣ ಆಗಬೇಕು ಎನ್ನುತ್ತೇವೆ. ಮತ್ತೆ ಜಾತಿ ಸಮೀಕ್ಷೆ ಯಾಕೆ ಬೇಕು’ ಎಂದು ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆಗೆ ಮಠಾಧೀಶರು ತಬ್ಬಿಬ್ಬಾದರು. ‘ಜಾತಿ ವ್ಯವಸ್ಥೆ ಯಾರಿಗೂ ಬೇಕಿಲ್ಲ. ಕೆಲವರ ಉಳಿವಿಗಾಗಿ ಈ ವ್ಯವಸ್ಥೆ ಇಂದಿಗೂ ಉಳಿದಿದೆ. ಯುವ ಮನಸ್ಸುಗಳು ಸಿದ್ಧವಾದರೆ, ಭವಿಷ್ಯದ ಭಾರತವನ್ನು ಜಾತ್ಯತೀತ ಮಾಡಲು ಸಾಧ್ಯವಿದೆ. ಇಂತಹ ಪ್ರಶ್ನೆಗಳು ಸಂಸತ್‌ನಲ್ಲಿ, ವಿಧಾನ ಸೌಧದಲ್ಲಿ ಚರ್ಚೆಯಾಗಬೇಕು’ ಎಂದು ಹುಲಸೂರು ಮಠದ ಶಿವಾನಂದ ಸ್ವಾಮೀಜಿ ಉತ್ತರಿಸಿದರು.
‘ಬಸವಣ್ಣ ಸರ್ವಧರ್ಮ ಸಮನ್ವಯ ಬೋಧಿಸಿದವರು, ಮತ್ತೆ ಲಿಂಗಾಯತ ಧರ್ಮ ಅಂತ ಯಾಕೆ ಬೇಕಿತ್ತು’ ಎಂಬ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ, ‘ಲಿಂಗಾಯತ ಎಂದರೆ ಜಾತಿ ಅಲ್ಲ, ಇದು ಪರಿಪೂರ್ಣ ಧರ್ಮ. ಜಾತಿ ಬೇರೆ ಧರ್ಮ ಬೇರೆ, ಜಾತಿ ಹುಟ್ಟಿನಿಂದ ಬರುವುದು, ಧರ್ಮ ಸಂಸ್ಕಾರದಿಂದ ಬರುತ್ತದೆ. ಜಾತಿ ಕತ್ತಲೆಯಂತೆ ಧರ್ಮ ಜ್ಯೋತಿಯಂತೆ. ಜಾತಿ ರೋಗ ಇದ್ದಂತೆ ಧರ್ಮ ಔಷಧ ಇದ್ದಂತೆ’ ಎಂದು ಭಾಲ್ಕಿ ಶ್ರೀ ಪ್ರತಿಕ್ರಿಯಿಸಿದರು.
ನವಲಗುಂದ ಮಠದ ಬಸವಲಿಂಗ ಸ್ವಾಮೀಜಿ, ಹಂದಿಗುಂದದ ಶಿವಾನಂದ ಸ್ವಾಮೀಜಿ, ಬೆಳಗಾವಿಯ ಶಿವಬಸವ ದೇವರು, ಕಲಬುರಗಿಯ ವೀರಸಿದ್ಧ ದೇವರು, ಮಮ್ಮಿಗಟ್ಟಿಯ ಬಸವಾನಂದ ದೇವರು, ರಾಯಚೂರಿನ ವೀರಭದ್ರ ಸ್ವಾಮೀಜಿ, ಬಸವಕಲ್ಯಾಣದ ಬಸವರಾಜ ದೇವರು, ಗಡಹಿಂಗ್ಲಜದ ಮಹಾಂತ ಸಿದ್ದೇಶ್ವರ ಸ್ವಾಮೀಜಿ, ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಇದ್ದರು.
ಬೆಳಗಾವಿ ಸೇಗುಣಸಿಯ ಮಹಾಂತ ಪ್ರಭು ಸ್ವಾಮೀಜಿ ದಿಕ್ಸೂಚಿ ಭಾಷಣಮಾಡಿ, ಸಂವಾದ ನಡೆಸಿಕೊಟ್ಟರು. ಸಹಮತ ವೇದಿಕೆ ಅಧ್ಯಕ್ಷ ಪ್ರೊ. ಕೆ.ಎಸ್.ಜಯಪ್ಪ ಸ್ವಾಗತಿಸಿದರು. ಬಸವ ಸಂಸ್ಕೃತಿ ಅಭಿಯಾನದ ಜಿಲ್ಲಾ ಸಂಚಾಲಕ ಉಮರ್ ಯು.ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಮೀನಾಕ್ಷಿ ರಾಮಚಂದ್ರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.