ಬಂಟ್ವಾಳ (ದಕ್ಷಿಣ ಕನ್ನಡ): ಬಿ.ಸಿ.ರೋಡ್ ವೃತ್ತದ ಬಳಿ ಶುಕ್ರವಾರ ರಾತ್ರಿ ಸರಕು ಸಾಗಿಸುವ ಲಾರಿ ಡಿಕ್ಕಿಯಾಗಿ ದ್ವಿಚಕ್ರ ವಾಹನದ ಸಹ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟರು.
ಬೈಕ್ ಸಹಸವಾರ ಬೆಂಗ್ರೆ ನಿವಾಸಿ ಮೊಯಿದ್ದೀನ್ ರಮೀಜ್ (20) ಮೃತರು ಎಂದು ಗುರುತಿಸಲಾಗಿದೆ. ಅವರು ಸ್ನೇಹಿತ ಅಬ್ದುಲ್ ಸಜಾದ್ ಅವರ ಜೊತೆ ಅಜಿಲಮೊಗರು ಮಸೀದಿಯ ಉರೂಸ್ ಕಾರ್ಯಕ್ರಮಕ್ಕೆ ತೆರಳುವಾಗ ಅಪಘಾತ ಸಂಭವಿಸಿತ್ತು. ಡಿಕ್ಕಿ ಹೊಡೆದ ಲಾರಿ ಸಹಿತ ಚಾಲಕ ಪರಾರಿಯಾಗಿದ್ದಾನೆ. ಬಳಿಕ ಲಾರಿಯನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಬೈಕ್ ಆಯತಪ್ಪಿ ಸವಾರರಿಬ್ಬರೂ ರಸ್ತೆಗೆ ಬಿದ್ದಿದ್ದರು. ಸಹ ಸವಾರ ರಮೀಜ್ ಅವರ ಮೇಲೆ ಲಾರಿಯ ಚಕ್ರ ಹರಿದಿತ್ತು. ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಸವಾರ ಅಬ್ದುಲ್ ಸಜಾದ್ ಅವರೂ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ಬಿ.ಮೂಡಾ ಗ್ರಾಮದ ಅಬ್ದುಲ್ ಸಮದ್ ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು. ಬಂಟ್ವಾಳ ಸಂಚಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.