ಮಂಗಳೂರು: ಶಾಲಾ ಮಕ್ಕಳಿಗೆ ವಾರ್ಷಿಕ ಪರೀಕ್ಷೆ ಮುಗಿದಿದ್ದು, ಇನ್ನೇನು ಬೇಸಿಗೆ ರಜೆ ಆರಂಭವಾಗಲಿದೆ. ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಜಿಲ್ಲೆಯ ಕಡಲತೀರಗಳಲ್ಲಿ ಸಹಜವಾಗಿ ಜನದಟ್ಟಣೆ ಹೆಚ್ಚಲಿದೆ. ಕಡಲತೀರಕ್ಕೆ ಬರುವ ಪ್ರವಾಸಿಗರು ನೀರಾಟದ ಮೋಜು–ಮಸ್ತಿಯಲ್ಲಿ ಮೈಮರೆಯದಂತೆ ಎಚ್ಚರಿಸುವ ಜೊತೆಗೆ ಅವರ ಸುರಕ್ಷತೆಗೆ ಆದ್ಯತೆ ನೀಡುವ ಜನಸ್ನೇಹಿ ಪ್ರವಾಸೋದ್ಯಮದ ವಾತಾವರಣ ಕಲ್ಪಿಸಬೇಕಾಗಿದೆ. ಇದಕ್ಕೆ ಅಗತ್ಯವಾಗಿ ಬೇಕಿರುವುದು ಜೀವ ರಕ್ಷಕರ ಬಲ.
ಮಂಗಳೂರು ಸುತ್ತಮುತ್ತ ತಣ್ಣೀರುಬಾವಿ ಬೀಚ್, ಪಣಂಬೂರು, ಸುರತ್ಕಲ್, ಸಸಿಹಿತ್ಲು, ಬೆಂಗ್ರೆ, ಚಿತ್ರಾಪುರ, ಇಡ್ಯಾ, ಉಳ್ಳಾಲ, ಸೋಮೇಶ್ವರ ಹೀಗೆ ಹಲವಾರು ಕಡಲತೀರಗಳು ಇವೆ. ಇವುಗಳಲ್ಲಿ ತಣ್ಣೀರುಬಾವಿ ಫಸ್ಟ್ ಬೀಚ್, ಬ್ಲ್ಯೂ ಫ್ಲಾಗ್ ಬೀಚ್, ಪಣಂಬೂರು, ಸೋಮೇಶ್ವರ, ಉಳ್ಳಾಲ, ಸುರತ್ಕಲ್ ಕಡಲತೀರಗಳು ಪ್ರವಾಸಿಗರ ನೆಚ್ಚಿನ ತಾಣಗಳು. ದಿನನಿತ್ಯ ಸಂಜೆ ಬೀಚ್‌ಗಳಲ್ಲಿ ಜನದಟ್ಟಣೆ ಕಂಡು ಬಂದರೂ, ವಾರದ ಕೊನೆಯಲ್ಲಿ, ಹಬ್ಬ ಹರಿದಿನಗಳು, ದೀರ್ಘ ರಜಾ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ದುಪ್ಪಟ್ಟಾಗುತ್ತದೆ. ಈ ಸಂದರ್ಭಗಳಲ್ಲಿ ಸಮುದ್ರ ತಟವನ್ನು ಕಾಯುವ ಜೀವ ರಕ್ಷಕ ಸಿಬ್ಬಂದಿಗೆ ಜನರನ್ನು ನಿಯಂತ್ರಿಸುವುದೇ ಹರಸಾಹಸ.
‘ಸಸಿಹಿತ್ಲು ಬೀಚ್‌ನಲ್ಲಿ ಒಬ್ಬರು ಜೀವರಕ್ಷಕ ಸಿಬ್ಬಂದಿ, ಒಬ್ಬರು ಪ್ರವಾಸಿ ಮಿತ್ರ, ತಣ್ಣೀರುಬಾವಿ ಫಸ್ಟ್ ಬೀಚ್‌ನಲ್ಲಿ ಐವರು ಜೀವ ರಕ್ಷಕ ಸಿಬ್ಬಂದಿ, ಬ್ಲ್ಯೂ ಫ್ಲಾಗ್ ಬೀಚ್‌ನಲ್ಲಿ ಇಬ್ಬರು ಜೀವ ರಕ್ಷಕ ಸಿಬ್ಬಂದಿ ಇದ್ದಾರೆ. ಸೋಮೇಶ್ವರ, ಉಳ್ಳಾಲ ಕಡಲತೀರದಲ್ಲಿ ತಲಾ ಒಬ್ಬರು ಪ್ರವಾಸಿ ಮಿತ್ರ ಇರುತ್ತಾರೆ. ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಿರುವ ಎಲ್ಲ ಕಡಲತೀರಗಳಲ್ಲಿ ತಲಾ ಒಬ್ಬರು ಪ್ರವಾಸಿ ಮಿತ್ರ ಇರುತ್ತಾರೆ. ಇಲಾಖೆಯಿಂದ ತರಬೇತಿ ನೀಡಿ ಅವರನ್ನು ಅಣಿಗೊಳಿಸಲಾಗುತ್ತದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪಣಂಬೂರು ಕಡಲತೀರವನ್ನು ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದು, ಅವರೇ ಜೀವ ರಕ್ಷಕ ಸಿಬ್ಬಂದಿ ನೇಮಿಸಿಕೊಂಡಿದ್ದಾರೆ. ಇಲ್ಲಿ ವಾಟರ್ ಗೇಮ್ಸ್‌ಗಳು ಇವೆ. ಇವುಗಳ ಚಾಲಕರೂ ಸೇರಿ 20ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ.
‘ತರಬೇತಿ ನೀಡಿದ ಮೇಲೆ ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಿಕೊಳ್ಳುವ ಜೀವ ರಕ್ಷಕ ಸಿಬ್ಬಂದಿಗೆ ದಿನಕ್ಕೆ ₹600 ಸಂಬಳ ದೊರೆಯುತ್ತದೆ. ಹಲವಾರು ಜನರಿಗೆ ಇಲಾಖೆಯಿಂದ ತರಬೇತಿ ನೀಡಲಾಗಿದೆ. ಆದರೆ, ಇಲ್ಲಿ ತರಬೇತಿ ಪಡೆದವರು ಕೆಲವು ದಿನ ಕೆಲಸ ಮಾಡಿ ಬೇರೆ ಕಡೆಗಳಿಗೆ ಹೆಚ್ಚಿನ ಸಂಬಳಕ್ಕೆ ಉದ್ಯೋಗಕ್ಕೆ ಹೋಗುತ್ತಾರೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಇಲಾಖೆಯ ಸಿಬ್ಬಂದಿಯೊಬ್ಬರು.
‘ವಾರದ ದಿನಗಳಲ್ಲಿ ಅಷ್ಟೊಂದು ಜನದಟ್ಟಣೆ ಇರುವುದಿಲ್ಲ. ವಾರದ ಕೊನೆ ಹಾಗೂ ಹಬ್ಬದ ಸಂದರ್ಭಗಳಲ್ಲಿ, ಸರ್ಕಾರಿ ರಜಾ ದಿನಗಳಲ್ಲಿ ವಿಪರೀತ ಜನದಟ್ಟಣೆ ಇರುತ್ತದೆ. ಈ ವೇಳೆ ಇರುವ ಸಿಬ್ಬಂದಿಯಿಂದ ನಿರ್ವಹಣೆ ಕಷ್ಟ. ನೀರಿಗೆ ನುಗ್ಗುವ ಪ್ರವಾಸಿಗರನ್ನು ತಡೆದರೆ, ಅವರು ಸ್ವಲ್ಪ ಮುಂದೆ ಹೋಗಿ ಇನ್ನೊಂದು ಕಡೆಯಲ್ಲಿ ನೀರಿಗೆ ಇಳಿಯಲು ಪ್ರಯತ್ನಿಸುತ್ತಾರೆ. ಸಾಧ್ಯವಾದಷ್ಟು ನಿಯಂತ್ರಿಸಲು ಶ್ರಮಪಡುತ್ತೇವೆ’ ಎಂದು ಜೀವ ರಕ್ಷಕ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.
‘ಜೀವ ರಕ್ಷಕ ಸಿಬ್ಬಂದಿಗೆ ಪ್ರಮುಖ ಬೀಚ್‌ಗಳಲ್ಲಿ ಲೈಫ್ ಬೊಯ್ (ರಿಂಗ್) ಒದಗಿಸಲಾಗಿದೆ. ಇನ್ನು ಕೆಲವು ಬೀಚ್‌ಗಳಲ್ಲಿ ಅದೂ ಇಲ್ಲ. ಜೀವ ರಕ್ಷಕ ಸಿಬ್ಬಂದಿಗೆ ವಿಮೆ ಸೌಲಭ್ಯ ಇಲ್ಲ. ಬಿಡುವಿನ ವೇಳೆಯಲ್ಲಿ ಕುಳಿತುಕೊಳ್ಳಲು ನೆರಳಿನ ಆಶ್ರಯವೂ ಇಲ್ಲ. ಸುಡು ಬಿಸಿಲಿನಲ್ಲೇ ನಿಲ್ಲಬೇಕಾದ ಪರಿಸ್ಥಿತಿ. ಪಣಂಬೂರಿನಲ್ಲಿ ಖಾಸಗಿಯವರು ನಿರ್ವಹಣೆ ಮಾಡುತ್ತಿದ್ದು, ಜೀವ ರಕ್ಷಕ ಸಿಬ್ಬಂದಿ, ವಾಟರ್ ಗೇಮ್ಸ್ ಚಾಲಕರೂ ಸೇರಿ 20ಕ್ಕೂ ಹೆಚ್ಚು ಕೆಲಸಗಾರರು ಇದ್ದಾರೆ. ಜೀವ ರಕ್ಷಕರಿಗೇ ಜೀವ ಭದ್ರತೆ ಇಲ್ಲ’ ಎಂದು ಇನ್ನೊಬ್ಬರು ಜೀವ ರಕ್ಷಕ ಸಿಬ್ಬಂದಿ ಬೇಸರಿಸಿದರು.
‘ಈಜು ಬರುವವರನ್ನು ಜೀವ ರಕ್ಷಕ ಸಿಬ್ಬಂದಿಯಾಗಿ ನೇಮಿಸಿಕೊಳ್ಳಬೇಕು. ಸಮುದ್ರ ದಡದಲ್ಲಿ ನಿಂತು ಎಚ್ಚರಿಕೆ ನೀಡುವುದು ಮಾತ್ರ ಅವರ ಹೊಣೆಯಲ್ಲ, ಅಪಾಯದಲ್ಲಿ ಸಿಲುಕಿದವರ ರಕ್ಷಣೆಯೂ ಅವರ ಜವಾಬ್ದಾರಿ. ಸಸಿಹಿತ್ಲು ಬೀಚ್‌ಗೆ ಭೇಟಿ ನೀಡಿದ ಅನೇಕ ಅನುಭವ ಇದು. ತಣ್ಣೀರುಬಾವಿ ಫಸ್ಟ್ ಬೀಚ್‌ಗೆ ಭೇಟಿ ನೀಡುವವರ ಪ್ರಮಾಣ ಗಮನಿಸಿದರೆ, ವಾರಾಂತ್ಯದ ವೇಳೆ ಕನಿಷ್ಠ 15 ಮಂದಿ ಜೀವ ರಕ್ಷಕರು ಅಲ್ಲಿಗೆ ಅಗತ್ಯವಿದೆ’ ಎಂದು ಮೀನುಗಾರ ಮುಖಂಡರೊಬ್ಬರು ಹೇಳಿದರು.
ಸುರತ್ಕಲ್ ಲೈಟ್ ಹೌಸ್, ಚಿತ್ರಾಪುರ, ಇಡ್ಯಾ, ಬೆಂಗರೆ ಬೀಚ್‌ಗಳಲ್ಲಿ ಜೀವ ರಕ್ಷಕರು ಅಥವಾ ಗೃಹ ರಕ್ಷಕ ಸಿಬ್ಬಂದಿ ಇಲ್ಲ. ಯಾರಾದರೂ ಅಪಾಯಕ್ಕೆ ಸಿಲುಕಿದರೆ, ಸ್ಥಳೀಯ ಮೀನುಗಾರರು ರಕ್ಷಣೆಗೆ ಧಾವಿಸುತ್ತಾರೆ. ಎಂದು ಅವರು ಹೇಳಿದರು.
ಪೂರಕ ಮಾಹಿತಿ: ಮೋಹನ್ ಕುತ್ತಾರ್
ಪ್ರವಾಸಿಗರು ಜೀವ ರಕ್ಷಕ ಸಿಬ್ಬಂದಿ ನೀಡುವ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಮ್ಮನ್ನು ನಿರ್ಲಕ್ಷಿಸಿ ನೀರಿಗಿಳಿದು ಅಪಾಯಕ್ಕೆ ಸಿಲುಕುತ್ತಾರೆ. ಇದು ಬೇಸರದ ಸಂಗತಿ.ದಿನಕರ್ ಜೀವ ರಕ್ಷಕ ಸಿಬ್ಬಂದಿ
ಮೋಜು ಮಸ್ತಿಯ ಮೂಡ್‌ನಲ್ಲಿ ಬರುತ್ತಾರೆ. ಕೆಲವರು ವಿಪರೀತ ಕುಡಿದು ಬಂದು ನೀರಿಗಿಳಿಯುತ್ತಾರೆ. ನಾವು ತಿಳಿ ಹೇಳಿದರೆ ನಮ್ಮ ಮೇಲೆ ತಿರುಗಿ ಬೀಳುತ್ತಾರೆ. ನಾವು ಹೇಳುವ ಸುರಕ್ಷತೆ ಸೂಚನೆ ಪಾಲಿಸಬೇಕು.ರಾಹುಲ್ ಜೀವ ರಕ್ಷಕ ಸಿಬ್ಬಂದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.