ADVERTISEMENT

ಜೇನು ಕೃಷಿ ರೈತರಿಗೆ ಲಾಭದಾಯಕ

ಪರಿಶಿಷ್ಟ ಫಲಾನುಭವಿಗಳಿಗೆ ಮಾಹಿತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 6:38 IST
Last Updated 21 ಅಕ್ಟೋಬರ್ 2022, 6:38 IST
ನರಸಿಂಹರಾಜಪುರ ತಾಲ್ಲೂಕು ಮುಳುವಳ್ಳಿಯ ಲಕ್ಷ್ಮೀನಾರಾಯಣ ಅವರ ತೋಟದಲ್ಲಿ ಜೇನು ಕೃಷಿ ಸಾಕಾಣಿಕೆಯ ಬಗ್ಗೆ ತರಬೇತಿ ನೀಡಲಾಯಿತು.
ನರಸಿಂಹರಾಜಪುರ ತಾಲ್ಲೂಕು ಮುಳುವಳ್ಳಿಯ ಲಕ್ಷ್ಮೀನಾರಾಯಣ ಅವರ ತೋಟದಲ್ಲಿ ಜೇನು ಕೃಷಿ ಸಾಕಾಣಿಕೆಯ ಬಗ್ಗೆ ತರಬೇತಿ ನೀಡಲಾಯಿತು.   

ಮುಳುವಳ್ಳಿ(ಎನ್.ಆರ್.ಪುರ): ಜೇನು ಸಾಕಾಣಿಕೆ ಉದ್ದಿಮೆಯಾಗಿ ಬೆಳೆದರೆ ರೈತರಿಗೆ ಅದು ಲಾಭಾದಾಯಕ ಕೃಷಿಯಾಗಿದೆ ಎಂದು ಪ್ರಗತಿಪರ ಹಾಗೂ ಜೇನು ಕೃಷಿಕ ಲಕ್ಷ್ಮೀನಾರಾಯಣ ತಿಳಿಸಿದರು.

ಇಲ್ಲಿನ ಮುಳಿವಳ್ಳಿಯ ತಮ್ಮ ಜಮೀನಿನಲ್ಲಿ ಜೇನು ಕೃಷಿ ಹಾಗೂ ಸಾಕಾಣಿಕೆಯ ವೀಕ್ಷಣೆಗೆ ಬಂದ ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ಜೇನು ಕೃಷಿ ಬಗ್ಗೆ ಅವರು ಮಾಹಿತಿ ನೀಡಿದರು.

ಪ್ರತಿಯೊಬ್ಬ ರೈತ ತಮ್ಮ ಜಮೀನಿನ ತೋಟದಲ್ಲಿ ಜೇನುಕೃಷಿ ಮಾಡಬಹುದು. ಇದೊಂದು ಉಪಕಸುಬಾಗಿದೆ. ಇದರಿಂದ ಆದಾಯ ಬರುತ್ತದೆ. ಜನವರಿಯಿಂದ ಮೇ ತಿಂಗಳವರೆಗೆ ಗಿಡ ಮರಗಳು ಹೂ ಬಿಟ್ಟಾಗ ಜೇನು ನೊಣಗಳಿಗೆ ಉತ್ತಮ ಮಕರಂದ ಸಿಗುತ್ತದೆ. ಈ ಅವಧಿಯಲ್ಲಿ ಒಂದು ಪೆಟ್ಟಿಗೆಯಿಂದ 20ರಿಂದ 30 ಕೆ.ಜಿ ಜೇನುತುಪ್ಪ ಸಂಗ್ರಹಿಸಬಹುದಾಗಿದೆ.ಕಾಫಿ ಹೂಗಳಲ್ಲಿ ಹೆಚ್ಚು ಮಕರಂದ ಸಿಗುತ್ತದೆ ಎಂದರು.

ADVERTISEMENT

ತರಬೇತುದಾರ ರಂಜಿತ್ ಮಾಹಿತಿ ನೀಡಿ, ‘ಜೇನು ಸಾಕಾಣಿಕೆ ಅದ್ಭುತವಾದ ಕೃಷಿಯಾಗಿದೆ. ಜೇನುತುಪ್ಪದಲ್ಲಿ ಔಷಧ ಗುಣವಿದೆ. ಇದನ್ನು ಎಲ್ಲರೂ ಸೇವಿಸಬಹುದಾಗಿದೆ. ಜೇನು ಪೆಟ್ಟಿಗೆಗಳನ್ನು ತೋಟದಲ್ಲಿ ಇಡುವಾಗ 8ರಿಂದ 10 ಅಡಿಗಳ ಅಂತರವಿರಬೇಕು. ಜಾಗ ಸ್ವಚ್ಛತೆಯಿಂದ ಕೂಡಿದ್ದು, ನೆಲದಿಂದ ಒಂದೂವರೆ ಅಡಿ ಎತ್ತರದಲ್ಲಿರಬೇಕು. ನಾಯಿ, ಇರುವೆ, ಇನ್ನಿತರ ಕಾಡುಪ್ರಾಣಿಗಳಿಂದ ರಕ್ಷಿಸಬೇಕು. ಜೇನು ನೊಣಗಳಿಗೆ ಪ್ರಕೃತಿಯಲ್ಲಿ ಆಹಾರ ಸಿಗದೆ ಇದ್ದಾಗ ಅವು ಗೂಡು ಬಿಟ್ಟು ಬೇರೆಡೆಗೆ ವಲಸೆ ಹೋಗುತ್ತವೆ. ಅಂತಹ ಸಂದರ್ಭದಲ್ಲಿ ರೈತರು ಸಕ್ಕರೆ ಪಾಕವನ್ನು ಪೆಟ್ಟಿಗೆಯಲ್ಲಿ ಇಡಬೇಕು. ಇದರಿಂದ ಅವುಗಳಿಗೆ ಆಹಾರ ಸಿಕ್ಕಿ ಬೇರೆಡೆ ವಲಸೆ ಹೋಗುವುದಿಲ್ಲ ಎಂದರು. ಜೇನು ಕೃಷಿಯನ್ನು ಆಸಕ್ತಿಯಿಂದ ಎಲ್ಲರೂ ಮಾಡಬಹುದಾಗಿದೆ ಎಂದರು.

ಲಕ್ಷ್ಮೀನಾರಾಯಣ ಅವರ ತೋಟದಲ್ಲಿನ ಜೇನು ಪೆಟ್ಟಿಗಳನ್ನು ವೀಕ್ಷಣೆ ಮಾಡಿ ಗೂಡುಕಟ್ಟುವ, ನೊಣಗಳನ್ನು ಬಿಡುವ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಲಾಯಿತು.

ರಬ್ಬರ್ ಮಂಡಳಿಯ ತಾಲ್ಲೂಕು ವಿಸ್ತರಣಾಧಿಕಾರಿ ಟೋನಿ, ಶೆಟ್ಟಿಕೊಪ್ಪದ ಚೈತನ್ಯ ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ಪ್ರೇಮ್ ಜೀ, ಕಾರ್ಯದರ್ಶಿ ಎಲ್ದೋ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶೆಟ್ಟಿಕೊಪ್ಪ ಎಂ. ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.