ADVERTISEMENT

ದಿ.ಕೆ.ವಸಂತ ಬಂಗೇರ ಅವರ 80ನೇ ಜನ್ಮದಿನಾಚರಣೆ| ಜ.15ರಂದು ಕಬಡ್ಡಿ ಟೂರ್ನಿ: ಬಿನುತ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 3:05 IST
Last Updated 9 ಜನವರಿ 2026, 3:05 IST
ಬಿನುತ ಬಂಗೇರ
ಬಿನುತ ಬಂಗೇರ   

ಬೆಳ್ತಂಗಡಿ: ‘ಮಾಜಿ ಶಾಸಕ ದಿ.ಕೆ.ವಸಂತ ಬಂಗೇರ ಅವರ 80ನೇ ಜನ್ಮದಿನದ ಅಂಗವಾಗಿ ಬಂಗೇರ ಬ್ರಿಗೇಡ್ ಬೆಳ್ತಂಗಡಿ ಆಶ್ರಯದಲ್ಲಿ ಹೊನಲು ಬೆಳಕಿನ 65 ಕೆ.ಜಿ ವಿಭಾಗದ ಪುರುಷರ ಅಂತರ ಜಿಲ್ಲಾ ಮಟ್ಟದ ಹಾಗೂ ಪ್ರೌಢಶಾಲಾ ವಿಭಾಗದ ಬಾಲಕ–ಬಾಲಕಿಯರ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಟೂರ್ನಿ ಜ.15ರಂದು ಮದ್ದಡ್ಕದ ಬಂಡೀಮಠ ಮೈದಾನದಲ್ಲಿ ನಡೆಯಲಿದೆ’ ಎಂದು ಬಂಗೇರ ಬ್ರಿಗೇಡ್ ಅಧ್ಯಕ್ಷೆ ಬಿನುತ ಬಂಗೇರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತಮ ಕಬಡ್ಡಿ ಆಟಗಾರರಾಗಿದ್ದ ದಿ.ಕೆ.ವಸಂತ ಬಂಗೇರ ಅವರು ಕ್ರೀಡಾ ಪ್ರೇಮಿಯಾಗಿದ್ದವರು. ಹಾಗಾಗಿ ಅವರ ಜನ್ಮದಿನವನ್ನು ಕಬಡ್ಡಿ ಟೂರ್ನಿ ಆಯೋಜನೆಯ ಮೂಲಕ ಆಚರಿಸಿ ಕಬಡ್ಡಿ ಆಟಗಾರರನ್ನು ಪ್ರೋತ್ಸಾಹಿಸಲಾಗುತ್ತಿದೆ’ ಎಂದರು.

‘40 ತಂಡಗಳಿಗೆ ಭಾಗವಹಿಸಲು ಅವಕಾಶವಿದ್ದು, ಈಗಾಗಲೇ ತಂಡಗಳ ನೋಂದಣಿ ನಡೆಯುತ್ತಿದೆ. ಪುರುಷರ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ವಿಜೇತ ತಂಡಗಳಿಗೆ ನಗದು ಹಾಗೂ ಫಲಕ ನೀಡಲಾಗುವುದು. ಉತ್ತಮ ರೈಡರ್‌, ಉತ್ತಮ ಕ್ಯಾಚರ್‌, ಆಲ್‌ರೌಂಡರ್‌ ಆಟಗಾರ ಹಾಗೂ ಶಿಸ್ತಿನ ತಂಡಕ್ಕೆ ಪ್ರಶಸ್ತಿ ನೀಡಲಾಗುವುದು. ಪಂದ್ಯಾವಳಿಯಲ್ಲಿ ಭಾಗವಹಿಸುವ ಪ್ರೌಢಶಾಲಾ ತಂಡಗಳಿಗೆ ಶಾಶ್ವತ ಫಲಕ ಹಾಗೂ ಸೆಮಿಪೈನಲ್ ತಲುಪಿದ ತಂಡಗಳ ಸದಸ್ಯರಿಗೆ ಪ್ರಶಸ್ತಿ ಪತ್ರ ನೀಡಲಾಗುತ್ತದೆ’ ಎಂದರು.

ADVERTISEMENT

ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ದಿ.ಕೆ.ವಸಂತ ಬಂಗೇರ ಅವರ ಪತ್ನಿ ಸುಜಿತಾ ವಿ.ಬಂಗೇರ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ, ಅರಿಕೋಡಿ ಧರ್ಮದರ್ಶಿ ಹರೀಶ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ರಮಾನಾಥ ರೈ, ಅಭಯಚಂದ್ರ ಜೈನ್, ಗಂಗಾಧರ ಗೌಡ, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆ ಅಧ್ಯಕ್ಷ ರಾಕೇಶ್ ಮಲ್ಲಿ, ಸತ್ಯಜಿತ್ ಸುರತ್ಕಲ್, ಪದ್ಮರಾಜ್ ಆರ್. ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಬಂಗೇರ ಬ್ರಿಗೇಡ್‍ನ ಉಪಾಧ್ಯಕ್ಷ ಅನೂಪ್ ಎಂ.ಬಂಗೇರ, ಪ್ರಧಾನ ಕಾರ್ಯದರ್ಶಿ ಸಲೀಂ ಗುರುವಾಯನಕೆರೆ, ಕೋಶಾಧಿಕಾರಿ ರಾಜಶ್ರೀ ರಮಣ್, ಜತೆ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ ಭಾಗವಹಿಸಿದ್ದರು.

ಪುರುಷರ 65 ಕೆ.ಜಿ ವಿಭಾಗದ ವಿಜೇತ ತಂಡಗಳಿಗೆ ಪ್ರಥಮ ₹ 30 ಸಾವಿರ, ದ್ವಿತೀಯ ₹ 20 ಸಾವಿರ, ತೃತೀಯ ಹಾಗೂ ನಾಲ್ಕನೇ ಬಹುಮಾನವಾಗಿ ₹ 10 ಸಾವಿರ ನಗದು, ಎಲ್ಲ ವಿಜೇತ ತಂಡಗಳಿಗೆ ಬಂಗೇರ ಬ್ರಿಗೇಡ್ ಟ್ರೋಫಿ, ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ತಂಡಗಳಿಗೆ ಪ್ರಥಮ ₹ 10 ಸಾವಿರ, ದ್ವಿತೀಯ ₹ 7 ಸಾವಿರ, ತೃತೀಯ ಹಾಗೂ ನಾಲ್ಕನೇ ಬಹುಮಾನವಾಗಿ ₹ 5 ಸಾವಿರ ನಗದು ಬಹುಮಾನದ ಜತೆ ಬಂಗೇರ ಬ್ರಿಗೇಡ್ ಟ್ರೋಫಿ ಇರಲಿದೆ‌ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.