
ಬೆಳ್ತಂಗಡಿ: ಹಲ್ಲೆ ಪ್ರಕರಣ ಸಂಬಂಧ 36 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ತಾಲ್ಲೂಕಿನ ಚಾರ್ಮಾಡಿ ಗ್ರಾಮದ ಚಾರ್ಮಾಡಿ ಗೇಟ್ ಬಳಿ ಮೋಹನ್ ಎಂಬಾತನಿಗೆ 1989ರಲ್ಲಿ ಕೊರಗಪ್ಪ ಗೌಡ ಮತ್ತು ರವೀಂದ್ರ ಸೇರಿ ಹಲ್ಲೆ ಮಾಡಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಚಾರ್ಮಾಡಿ ಗ್ರಾಮದ ಬೊಮ್ಮಣ್ಣ ಎಂಬುವರ ಪುತ್ರ ರವೀಂದ್ರ (56) ತಲೆಮರೆಸಿಕೊಂಡಿದ್ದ. ಸಹ ಆರೋಪಿ ಕೊರಗಪ್ಪ ಗೌಡ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಪ್ರಕರಣದಿಂದ ಖುಲಾಸೆಯಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಾಲಯದಿಂದ ಆರೋಪಿ ಪತ್ತೆಗಾಗಿ ವಾರಂಟ್ ಜಾರಿ ಮಾಡಿದ್ದರು. ಧರ್ಮಸ್ಥಳ ಪೊಲೀಸ್ ಪಿಎಸ್‌ಐ ಸಮರ್ಥ್ ಆರ್.ಗಾಣಿಗೇರ ತಂಡದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದರು.
ರವೀಂದ್ರ 12 ವರ್ಷ ಪುಣೆಯಲ್ಲಿ, ಬಳಿಕ ಬೆಳಗಾವಿಯಲ್ಲಿ 5 ವರ್ಷ ಕೆಲಸ ಮಾಡಿದ್ದ. ಈ ಮಧ್ಯೆ ಮದುವೆಯಾಗಿ ಗಂಡು ಮತ್ತು ಒಂದು ಹೆಣ್ಣು ಮಗುವಿನೊಂದಿಗೆ ಇದ್ದ. ಮಗಳಿಗೆ ಮದುವೆ ಆಗಿದ್ದು, ಮಗ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಪತ್ನಿ ಅನಾರೋಗ್ಯದಿಂದ ಮೃತಪಟ್ಟ ಬಳಿಕ ರವೀಂದ್ರ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ನಲ್ಲೂರಿನಲ್ಲಿ ಮನೆ ನಿರ್ಮಿಸಿ ಡಿ.5ಕ್ಕೆ ಗೃಹಪ್ರವೇಶ ಮಾಡಿ ವಾಸವಾಗಿದ್ದ ಎನ್ನಲಾಗಿದೆ.
ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ಸಿ.ಕೆ.ರೋಹಿಣಿ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಸಿಪಿಐ ರವಿ ಬಿ.ಎಸ್.ನೇತೃತ್ವದಲ್ಲಿ ಸಮರ್ಥ್ ಆರ್.ಗಾಣಿಗೇರ ತಂಡದ ಸಿಬ್ಬಂದಿ ವೃಷಭ, ಚರಣ್ ರಾಜ್, ಯೋಗರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.