
ಉಜಿರೆ: ‘ಶಾಸಕರು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಹಾಗೂ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಂಗ್ರೆಸ್ ಸರ್ಕಾರ ಬೆಳ್ತಂಗಡಿಯಲ್ಲಿ ಪೊಲೀಸ್ ಉಪವಿಭಾಗ ಆರಂಭಿಸಿ ಡಿವೈಎಸ್ಪಿ ಅವರನ್ನು ನೇಮಕ ಮಾಡಿರುವುದು ಸರಿಯಲ್ಲ ’ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈಗ ಎಲ್ಲಾ ತಾಲ್ಲೂಕಿನ ಆಗು–ಹೋಗುಗಳು, ಚಲನವಲನಗಳು ಪೊಲೀಸ್ ಉಪವಿಭಾಗದ ನಿಯಂತ್ರಣದಲ್ಲಿ ಇರುತ್ತವೆ. ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ದಿವಾಳಿಯಾಗಿದ್ದು ಪ್ರತಿ ಪೊಲೀಸ್ ಠಾಣೆಗೆ ದಿನಕ್ಕೆ ಇಂತಿಷ್ಟು ಪ್ರಕರಣ ದಾಖಲಿಸಿ ದಂಡ ವಸೂಲು ಮಾಡುವಂತೆ ನಿರ್ದೇಶನವಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ನಿತ್ಯ ದುಡಿಯುವ ವಾಹನ ಚಾಲಕರಿಗೆ, ದ್ವಿಚಕ್ರ ವಾಹನ ಸವಾರರಿಗೆ, ಟೆಂಪೊ ಚಾಲಕರಿಗೆ ಪೊಲೀಸರು ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡುತ್ತಿದ್ದಾರೆ. ಇದಕ್ಕಿಂತ ಸರ್ಕಾರ ತಟ್ಟೆ ಹಿಡಿದು ಭಿಕ್ಷೆ ಬೇಡಬಹುದು ಎಂದು ವ್ಯಂಗ್ಯವಾಡಿದರು.
ಶಿಬಾಜೆ, ಮಲವಂತಿಗೆ ಹಾಗೂ ಕಳೆಂಜದಲ್ಲಿ ಅರಣ್ಯ ಇಲಾಖೆಯ ದೌರ್ಜನ್ಯ ಹೆಚ್ಚಾಗುತ್ತಿದ್ದು, ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ. ಹಾಗಾಗಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಿ ಸಮಸ್ಯೆ ಪರಿಹರಿಸಬೇಕು. ಈ ವಿಚಾರವನ್ನು ಜಿಲ್ಲಾಧಿಕಾರಿ ಗಮನಕ್ಕೂ ತರಲಾಗುವುದು. ಸರ್ವೆ ಬಳಿಕವೇ ಅರಣ್ಯ ಇಲಾಖೆ ಜಾಗ ಒತ್ತುವರಿ ತೆರವು ಪ್ರಕ್ರಿಯೆ ನಡೆಸಬೇಕು. ನಿಡ್ಲೆಯ ಸರ್ವೆ ನಂಬರ್ 309ರಲ್ಲಿ ಜಂಟಿ ಸರ್ವೆ ಇದೇ 17 ರಂದು ಆರಂಭವಾಗಲಿದೆ ಎಂದು ಅವರು ಹೇಳಿದರು.
ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ ಹೆದ್ದಾರಿ ನಿರ್ಮಾಣಕ್ಕೆ ₹616 ಕೋಟಿ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗುವುದು. ಬೆಳ್ತಂಗಡಿ ತಾಲ್ಲೂಕಿನ ಎಲ್ಲಾ ರಸ್ತೆಗಳೂ ತೀರಾ ಹದಗೆಟ್ಟಿದ್ದು ರಸ್ತೆಗಳ ಗುಂಡಿ ಮುಚ್ಚಲು ಸರ್ಕಾರದಲ್ಲಿ ಹಣವಿಲ್ಲ ಎಂದು ಆರೋಪಿಸಿದರು.
ರಸ್ತೆ ನಿರ್ವಹಣೆಗೆ ಮಂಜೂರಾದ ₹12 ಕೋಟಿ ಅನುದಾನವನ್ನು ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಬಳಸಲಾಗುವುದು. ಬೆಳ್ತಂಗಡಿಯಲ್ಲಿ ಹುಣ್ಸೆಕಟ್ಟೆ-ಮಲ್ಲೊಟ್ಟು ರಸ್ತೆ ದುರಸ್ತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ತಮ್ಮ ರಾಜ್ಯಸಭಾ ನಿಧಿಯಿಂದ ₹2 ಕೋಟಿ ನೀಡಿದ್ದಾರೆ ಎಂದು ಶಾಸಕರು ಹೇಳಿದರು.
ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾಕಿರಣ್ ಕಾರಂತ, ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ, ಧರ್ಮಸ್ಥಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್, ಧರ್ಮಸ್ಥಳ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.