ADVERTISEMENT

ಬೆಳ್ತಂಗಡಿ: ಪರಿಶಿಷ್ಟ ಜಾತಿ–ಪಂಗಡಗಳ ಕುಂದುಕೊರತೆ ಆಲಿಸುವ ಸಭೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:39 IST
Last Updated 24 ಫೆಬ್ರುವರಿ 2026, 7:39 IST
ಬೆಳ್ತಂಗಡಿ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ರೋಹಿಣಿ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ –ಪಂಗಡಗಳ ಮಾಸಿಕ ಕುಂದುಕೊರತೆಗಳ ಸಭೆ ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು
ಬೆಳ್ತಂಗಡಿ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ರೋಹಿಣಿ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ –ಪಂಗಡಗಳ ಮಾಸಿಕ ಕುಂದುಕೊರತೆಗಳ ಸಭೆ ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು   

ಬೆಳ್ತಂಗಡಿ: ‘ಶಿಬಾಜೆಯ ಎಸ್ಟೇಟ್‌ನಲ್ಲಿ ನಡೆದ ಶ್ರೀಧರ್ ಮುಗೇರ ಕೊಲೆ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸಿದಂತೆ ಕಳಿಯ ಗ್ರಾಮದಲ್ಲಿ ವರ್ಷಗಳ ಹಿಂದೆ ನಡೆದ ಶ್ರೀಧರ್ ಮುಗೇರರ ಅಸಹಜ ಸಾವಿನ ಬಗ್ಗೆಯೂ ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂಬ ಆಗ್ರಹ ವ್ಯಕ್ತವಾಯಿತು.

ಬೆಳ್ತಂಗಡಿ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ರೋಹಿಣಿ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ –ಪಂಗಡಗಳ ಕುಂದುಕೊರತೆ ಆಲಿಸುವ ಮಾಸಿಕ ಸಭೆಯಲ್ಲಿ ಮಾತನಾಡಿದ ಮುಖಂಡ ಸಂಜೀವ ಆರ್., ‘2022ರಲ್ಲಿ ನಡೆದ ಶಿಬಾಜೆಯ ಶ್ರೀಧರ್ ಮುಗೇರ ಕೊಲೆ ಪ್ರಕರಣದಲ್ಲಿ ಕೆಲವು ಬಲಾಢ್ಯರಿದ್ದು, ತನಿಖೆ ಹಾದಿ ತಪ್ಪಲು ಕಾರಣವಾಗಿತ್ತು. ಆ ಬಳಿಕ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ ಬಳಿಕ ರಾಜ್ಯ ಸರ್ಕಾರ ಸಿಐಡಿ ತನಿಖೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಇದೀಗ ಹೈಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಎಸ್ಐಟಿ ತನಿಖೆ ನಡೆಸಲು ಆದೇಶಿಸಿರುವುದು ಸ್ವಾಗತಾರ್ಹ‌. ಈ ಬಗ್ಗೆ ಸರಿಯಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ’ ಎಂದು ಒತ್ತಾಯಿಸಿದರು.

‘ವರ್ಷಗಳ ಹಿಂದೆ ಕಳಿಯ ಗ್ರಾಮದಲ್ಲಿ ಶ್ರೀಧರ್ ಮುಗೇರ ಎಂಬುವರ ಶವ ಸಂಶಯಾಸ್ಪದವಾಗಿ ಕೆರೆಯಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದ್ದರೂ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಲಿಲ್ಲ’ ಎಂದು ಸಂಜೀವ ಆರ್.ಹೇಳಿದಾಗ ಧ್ವನಿಗೂಡಿಸಿದ ದಲಿತ ಮುಖಂಡ ಶೇಖರ್ ಲಾಯಿಲ, ‘ಶಿಬಾಜೆ ಪ್ರಕರಣದ ಆರೋಪಿಗಳಿಗೆ ಪೋಲಿಸರು ರಕ್ಷಣೆ ನೀಡಿದ್ದಾರೆ. ಶಾಸಕರ ಪೋನ್ ಕರೆಗಳ ಬಗ್ಗೆ ಎಸ್ಐಟಿ ಪರಿಶೀಲಿಸಬೇಕು’ ಎಂದರು.

ADVERTISEMENT

ಈ ವೇಳೆ ಮಾತನಾಡಿದ ಬೆಳ್ತಂಗಡಿ ಇನ್‌ಸ್ಪೆಕ್ಟರ್‌ ಬಿ.ಜಿ.ಸುಬ್ಬಾಪುರ್ ಮಠ್, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಸಹಜ ಪ್ರಕರಣ ದಾಖಲಾಗಿದ್ದು, ವೈದ್ಯಕೀಯ ತಾಂತ್ರಿಕ ಪರೀಕ್ಷೆಯ ವರದಿಯ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ತಿಂಗಳಲ್ಲಿ ತನಿಖೆಯಲ್ಲಿ ಪ್ರಗತಿ ಸಾಧಿಸಲಿದ್ದೇವೆ ಎಂದರು.

ವಾಹನ ಚಾಲನಾ ಪರವಾನಗಿ ಪಡೆಯದ ಮಕ್ಕಳು ವಾಹನ ಚಲಾಯಿಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಲಾಯಿಲ ಗ್ರಾಮದ ದರ್ಪಿಂಜೆ ಸೇತುವೆ ಸುತ್ತಮುತ್ತ ಅಕ್ರಮ ಚಟುವಟಿಕೆ ನಡೆಯುತ್ತಿದ್ದು, ಲಾಯಿಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ ಅವರು ಮುತುವರ್ಜಿಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಅದರ ಸಹಾಯದಿಂದ ಅಕ್ರಮ ಚಟುವಟಿಕೆಯಲ್ಲಿ ನಿರತರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬೆಳ್ತಂಗಡಿ ಬಸ್ ನಿಲ್ದಾಣ ಸೇರಿದಂತೆ ಕೆಲವು ಕಡೆ ಮಾನಸಿಕ ಅಸ್ವಸ್ಥರು ಓಡಾಡುತ್ತಿದ್ದು, ಕ್ರಮ ಕೈಗೊಳ್ಳಬೇಕು ಎಂದು ಶೇಖರ ಲಾಯಿಲ ಒತ್ತಾಯಿಸಿದರು.

ಶೀನ ಪಿಲ್ಯ ಮಾತನಾಡಿ, ಮಾರಿಗುಡಿ ಬಳಿ ಅಪಘಾತಗಳು ಸಂಭವಿಸುತ್ತಿದ್ದು, ಬ್ಯಾರಿಕೇಡ್ ಅಳವಡಿಸಬೇಕು. ನಾರಾವಿಯ ಕೃಷ್ಣಪ್ಪ ಅವರು ಮಾತನಾಡಿ, ಈಚೆಗೆ ನಾರಾವಿಯಲ್ಲಿ ದಲಿತ ವ್ಯಕ್ತಿಯೊಬ್ಬರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಕ್ಕಳ ಎದುರಿನಲ್ಲೇ ಹಲ್ಲೆ ನಡೆಸಿದ ಘಟನೆ ಬಗ್ಗೆ ಪ್ರಸ್ತಾಪಿಸಿ, ಪೋಲಿಸ್ ಇಲಾಖೆ ಒತ್ತಡಕ್ಕೆ ಮಣಿಯದೆ ಕಾನೂನಿನಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಚೆನ್ನಕೇಶವ, ವೆಂಕಪ್ಪ ನಾಯ್ಕ ಉಪ್ಪಿನಂಗಡಿ, ರಾಮಣ್ಣ, ಬೆಳ್ತಂಗಡಿ ಪೊಲಿಸ್ ಉಪ ವಿಭಾಗ ವ್ಯಾಪ್ತಿಯ ಠಾಣೆಗಳ ಪಿಎಸ್‌ಐಗಳು ಭಾಗವಹಿಸಿದ್ದರು.

ಡಿವೈಎಸ್ಪಿ ಕಚೇರಿಯ ಮನೋಹರ್ ಹಿಂದಿನ ಸಭೆಯ ನಡಾವಳಿಗಳನ್ನು ಸಭೆಯ ಮುಂದಿಟ್ಟರು. ಉಪ್ಪಿನಂಗಡಿ ಸರ್ಕಲ್ ಇನ್‌ಸ್ಪೆಕ್ಟರ್‌ ನಾಗರಾಜ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.