ಮಂಗಳೂರು: ನಗರದ ಸನಾತನ ನಾಟ್ಯಾಲಯದ ವಿದುಷಿಯರಾದ ಶಾರದಾಮಣಿ ಶೇಖರ್ ಮತ್ತು ಶ್ರೀಲತಾ ನಾಗರಾಜ್ ಅವರ ಶಿಷ್ಯೆ ವಿದುಷಿ ಸಿಂಚನಾ ಎಸ್.ಕುಲಾಲ್ ಅವರ ಭರತನಾಟ್ಯ ರಂಗಪ್ರವೇಶ ಅ.12ರಂದು ಸಂಜೆ 5 ಗಂಟೆಗೆ ಪುರಭವನದಲ್ಲಿ ನಡೆಯಲಿದೆ.
ಕ್ರೀಡಾಪಟುವಾಗಿದ್ದು ನೃತ್ಯದತ್ತ ಒಲವು ತೋರಿದ ಸಿಂಚನಾ ಪಾಂಡೇಶ್ವರ ಶಿವನಗರ ನಿವಾಸಿಗಳಾದ ಸದಾಶಿವ ಕುಲಾಲ್ ಮತ್ತು ಚಂದ್ರಪ್ರಭಾ ಕುಲಾಲ್ ದಂಪತಿಯ ಪುತ್ರಿ.
ನಗರದ ಪ್ರೆಸಿಡೆನ್ಸಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಓದಿದ ಅವರು ಧರ್ಮಸ್ಥಳ ಮಂಜುನಾಥೇಶ್ವರ ವ್ಯವಹಾರ ಆಡಳಿತ ಕಾಲೇಜಿನಿಂದ ಈಚೆಗೆ ಬಿಬಿಎ ಪದವಿ ಗಳಿಸಿದ್ದಾರೆ. ಶಾಲಾ ದಿನಗಳಲ್ಲಿ ಈಜು ಮತ್ತು ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡಿದ್ದ ಎನ್‌ಎಸ್‌ಎಸ್‌ನಲ್ಲೂ ಸೇವೆ ಸಲ್ಲಿಸಿದ್ದಾರೆ.
ಮೂರನೇ ವಯಸ್ಸಿನಲ್ಲೇ ನೃತ್ಯ ಕಲಿಯತೊಡಗಿದ್ದ ಅವರು ಆರಂಭದಲ್ಲಿ ಚಕ್ರಪಾಣಿ ನೃತ್ಯಕಲಾ ಕೇಂದ್ರದ ಸುರೇಶ್ ಅತ್ತವರ್ ಅವರ ಶಿಷ್ಯೆ ಆಗಿದ್ದು ಜೂನಿಯರ್ ಪರೀಕ್ಷೆ ತೇರ್ಗಡೆ ಹೊಂದಿದ್ದರು. ಸನಾತನ ಸೇರಿದ ನಂತರ ಸೀನಿಯರ್ ಗ್ರೇಡ್ ತೇರ್ಗಡೆಯಾದರು. ಅತ್ಯುನ್ನತ ಶ್ರೇಣಿಯಲ್ಲಿ ‘ವಿದ್ವತ್’ ಗಳಿಸಿದರು. ಅಯೋಧ್ಯೆಯ ರಾಮಮಂದಿರ ಸೇರಿದಂತೆ ಹಲವು ವೇದಿಕೆಗಳಲ್ಲಿ ನೃತ್ಯ ಪ್ರದರ್ಶಿಸಿರುವ ಅವರು ಪ್ರಸಿದ್ಧ ಕಲಾವಿದರಾದ ರಮಾ ವೈದ್ಯನಾಥನ್, ಜಾನಕಿ ರಂಗರಾಜನ್, ಪಾರ್ಶ್ವನಾಥ್ ಉಪಾಧ್ಯೆ ಮುಂತಾದವರು ನಡೆಸಿಕೊಟ್ಟ ಕಾರ್ಯಾಗಾರಗಳಲ್ಲಿ ಪಾಲ್ಗೊಂಡಿದ್ದಾರೆ.
ರಾಷ್ಟ್ರದೇವೋಭವ, ಪುಣ್ಯಭೂಮಿ ಭಾರತ, ಸತ್ಯನಾಪುರತ ಸಿರಿ ಮತ್ತು ಪುಣ್ಯಲಹರಿ ಮುಂತಾದ ರೂಪಕಗಳ ಭಾಗವಾಗಿರುವ ಅವರು ಸದ್ಯ ಪ್ರದರ್ಶನ ನೀಡುವುದರ ಜೊತೆಯಲ್ಲಿ ಪಾಠವನ್ನೂ ಮಾಡುತ್ತಿದ್ದಾರೆ.
ರಂಗಪ್ರವೇಶ ಕಾರ್ಯಕ್ರಮದ ಹಾಡುಗಾರಿಕೆ ವಿನೀತ್ ಪುರವಂಕರ ಅವರದು. ಮೃದಂಗದಲ್ಲಿ ರಾಜನ್ ಪಯ್ಯನ್ನೂರು ಮತ್ತು ಕೊಳಲಿನಲ್ಲಿ ನಿತೀಶ್ ಅಮ್ಮಣ್ಣಾಯ ಭಾಗವಹಿಸಲಿದ್ದಾರೆ. ನಾಟ್ಯಗುರು ಉಳ್ಳಾಲ ಮೋಹನ್ ಕುಮಾರ್ ಉದ್ಘಾಟಿಸಲಿದ್ದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಮತ್ತು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಭಾಗವಹಿಸಲಿದ್ದಾರೆ ಎಂದು ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.