ADVERTISEMENT

ರೆಮೋನಾ ವಿಶ್ವ ದಾಖಲೆ | 170 ತಾಸು ಭರತನಾಟ್ಯ ಪ್ರದರ್ಶನ, ಪ್ರೇಕ್ಷಕರು ನಿಬ್ಬೆರಗು

ದೇಹ ದಣಿದರೂ ಮಾಸದ ನಗು

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 6:41 IST
Last Updated 29 ಜುಲೈ 2025, 6:41 IST
ರೆಮೋನಾ
ರೆಮೋನಾ   

ಮಂಗಳೂರು: ಎಲ್ಲರ ಲಕ್ಷ್ಯವೂ ಸೇಂಟ್ ಅಲೋಶಿಯಸ್ ಕಾಲೇಜಿನ ಎಲ್‌ಸಿಆರ್‌ಐ ಸಭಾಂಗಣದತ್ತ ನೆಟ್ಟಿತ್ತು. ಕಲಾವಿದೆ ರೆಮೋನಾ ಇವೆಟ್ ಪಿರೇರಾ ಯಶಸ್ವಿಯಾಗಿ, 170 ತಾಸು ಭರತನಾಟ್ಯ ಪ್ರದರ್ಶನ ನೀಡಿ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ದಾಖಲಿಸುವ ಅಪೂರ್ವ ಕ್ಷಣಕ್ಕೆ ಕಾತರರಾಗಿದ್ದರು.

ಸೋಮವಾರ ಮಧ್ಯಾಹ್ನ 12.30ಕ್ಕೆ ರೆಮೋನಾ ಅವರ ಭರತನಾಟ್ಯ ಪ್ರದರ್ಶನ 170 ತಾಸು ಪೂರ್ಣಗೊಂಡಾಗ, ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಕರತಾಡನದ ಪ್ರಶಂಸೆ. ಎಲ್ಲರಿಗೂ ತಲೆಬಾಗಿ ನಮಸ್ಕರಿಸಿದ ರೆಮೋನಾ, ಭರತನಾಟ್ಯದ ಧಿರಿಸಿನಲ್ಲಿ ಅಂತಿಮ ಪ್ರದರ್ಶನಕ್ಕೆ ಅಣಿಯಾಗಿ ಬಂದರು.

ಅವರ ಸಹಪಾಠಿಗಳು, ಒಡನಾಡಿಗಳು ಮೆರವಣಿಗೆಯಲ್ಲಿ ಅವರನ್ನು ವೇದಿಕೆಗೆ ಕರೆತಂದರು. ಶಿವನನ್ನು ಸ್ತುತಿಸಿದ ರೆಮೋನಾ, ವಂದೇ ಮಾತರಂನೊಂದಿಗೆ ಪ್ರದರ್ಶನಕ್ಕೆ ಮಂಗಲ ಹಾಡಿದರು. ಸೇಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಫಾ. ಮೆಲ್ವಿನ್ ಪಿಂಟೊ ರೆಮೋನಾ ಅವರನ್ನು ಸನ್ಮಾನಿಸಿದರು. ನೃತ್ಯ ಗುರು ಶ್ರೀವಿದ್ಯಾ ಮುರಳೀಧರ್ ನಟರಾಜ ಮೂರ್ತಿ ನೀಡಿ, ಬೆನ್ನುತಟ್ಟಿದರು.

ADVERTISEMENT

‘ಸಾಧನೆಗೆ ಆಕಾಶವೇ ಗುರಿ ಎಂಬುದನ್ನು ರೆಮೋನಾ ನಿರೂಪಿಸಿದ್ದಾರೆ. ಏಳು ದಿನ ನಿದ್ರೆಯಿಲ್ಲದೆ ರಾತ್ರಿ ಕಳೆಯುವುದು, ನಿರಂತರ ಭರತನಾಟ್ಯ ಪ್ರದರ್ಶಿಸುವುದು ಸುಲಭದ ಮಾತಲ್ಲ, ಇದು ಬರೀ ಪ್ರದರ್ಶನವಲ್ಲ, ಇದೊಂದು ಧ್ಯಾನ, ತಪಸ್ಸು. ಜಾತ್ರೆಯಂತೆ ಜನರು ಬಂದು ಅವರನ್ನು ಬೆಂಬಲಿಸಿದ್ದಾರೆ, ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು, ಆಕೆಯ ಸ್ನೇಹಿತೆಯರು ಹಗಲು–ರಾತ್ರಿ ಕುಳಿತು, ಚಪ್ಪಾಳೆ ಮೂಲಕ ಆಕೆಯಲ್ಲಿ ವಿಶ್ವಾಸ ತುಂಬಿದ್ದಾರೆ’ ಎಂದು ಮೆಲ್ವಿನ್ ಪಿಂಟೊ ಹೇಳಿದರು.

ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಕುಲಪತಿ ಫಾ. ಪ್ರವೀಣ್ ಮಾರ್ಟಿಸ್ ಮಾತನಾಡಿ, ‘ದೈವಿಕ ಶಕ್ತಿ ರೆಮೋನಾಳ ಬೆನ್ನಿಗಿದೆ, ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಸಾಧಕಿ ಅವರು’ ಎಂದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಏಷ್ಯಾ ಮುಖ್ಯಸ್ಥ ಮನೀಷ್ ವಿಷ್ಣೋಯಿ ಇದ್ದರು.

ಪ್ರಯತ್ನಕ್ಕೆ ಫಲ

‘ಮಗಳ ಪ್ರತಿ ಹೆಜ್ಜೆಯಲ್ಲೂ ನಾನು ಅವಳ ಜೊತೆಯಾಗಿದ್ದೆ. ನನ್ನ ಮಗಳ ಕನಸು ನನಸಾಗಿರುವುದಕ್ಕೆ ಹೃದಯ ತುಂಬಿ ಬಂದಿದೆ. ಅವಳ ಪ್ರಯತ್ನಕ್ಕೆ ಫಲ ದೊರೆತಿದೆ. ನಾನು ಇನ್ನು ಹೆಚ್ಚೇನೂ ಅವಳಿಂದ ಬಯಸುವುದಿಲ್ಲ’ ಎಂದು ರೆಮೋನಾ ತಾಯಿ ಗ್ಲಾಡಿಸ್ ಸೆಲೀನ್ ಹೇಳಿದರು.

ಇಡೀ ಕರ್ನಾಟಕವೇ ಹೆಮ್ಮೆಪಡುವ ದಾಖಲೆ ಮಾಡಿದ್ದಾರೆ ರೆಮೋನಾ. ಇನ್ನು ಮುಂದೆ ನಿಮ್ಮ ದಾಖಲೆಯನ್ನು ನೀವೇ ಮುರಿಯಬೇಕು.
- ಐವನ್ ಡಿಸೋಜ, ವಿಧಾನ ಪರಿಷತ್ ಸದಸ್ಯ
ಅಮ್ಮ ನೃತ್ಯಗುರು ಸೇಂಟ್ ಅಲೋಶಿಯಸ್ ಕಾಲೇಜಿನವರು ನೀಡಿದ ಬೆಂಬಲ ಈ ದಾಖಲೆ ಬರೆಯಲು ಸಾಧ್ಯವಾಗಿದೆ.
-ರೆಮೋನಾ ಪಿರೇರಾ, ಸಾಧಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.