ADVERTISEMENT

ನಾರಾಯಣಗುರು ಜೀವನ ಚರಿತ್ರೆಗೆ ಕತ್ತರಿ: ಸಚಿವ ಕೋಟ, ಸುನಿಲ್ ಮೌನಕ್ಕೆ ಬೇಸರ

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣಗುರು ಜೀವನ ಚರಿತ್ರೆಗೆ ಕತ್ತರಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 3:46 IST
Last Updated 24 ಜೂನ್ 2022, 3:46 IST
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಸಮೀಪದ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿದರು.
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಸಮೀಪದ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿದರು.   

ಬಂಟ್ವಾಳ: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯು ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಹತ್ತನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಕೈ ಬಿಟ್ಟಿರುವ ಬಗ್ಗೆ ಜಿಲ್ಲೆಯ ಬಿಲ್ಲವ ಸಮುದಾಯಕ್ಕೆ ಸೇರಿದ ಇಬ್ಬರು ಸಚಿವರು ಮೌನವಾಗಿದ್ದಾರೆ ಎಂದು ಸೋಲೂರು ಬಿಲ್ಲವ-ಆರ್ಯ-ಈಡಿಗ ಮಹಾ ಸಂಸ್ಥಾನ ಘಟಕದ ಬಂಟ್ವಾಳ ತಾಲ್ಲೂಕು ಘಟಕ ಅಧ್ಯಕ್ಷ ಬೇಬಿ ಕುಂದರ್ ಆರೋಪಿಸಿದರು.

ಇಲ್ಲಿನ ಬಿ.ಸಿ.ರೋಡು ಸಮೀಪದ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೌನ ಮುರಿದು ಸರ್ಕಾರದ ಕಣ್ಣು ತೆರೆಸಬೇಕು ಎಂದರು.

ADVERTISEMENT

ನಾರಾಯಣ ಗುರುಗಳ ಜೀವನ ಚರಿತ್ರೆ ಸಮಾಜ ವಿಜ್ಞಾನ ಪಠ್ಯದಿಂದ ಐಚ್ಛಿಕ ಕನ್ನಡ ಪಠ್ಯಕ್ಕೆ ಸೇರ್ಪಡೆಗೊಳಿಸುವ ಮೂಲಕ ಸರ್ಕಾರ ಜನರ ಕಣ್ಣಿಗೆ ಮಣ್ಣು ಎರಚುವ ಪ್ರಯತ್ನ ನಡೆಸಿದೆ ಎಂದು ಅವರು ಟೀಕಿಸಿದರು.

ಈಗಾಗಲೇ ಭಗತ್ ಸಿಂಗ್, ಬಸವಣ್ಣ, ಕುವೆಂಪು, ಅಂಬೇಡ್ಕರ್ ಜೀವನ ಚರಿತ್ರೆ ಕುರಿತು ಪಠ್ಯದಲ್ಲಿ ಉಂಟಾದ ಲೋಪ -ದೋಷಗಳ ಬಗ್ಗೆ ನಡೆದ ಹೋರಾಟ ಮತ್ತು ಎಚ್ಚರಿಕೆಗೆ ಮಣಿದ ಸರ್ಕಾರ ಪಠ್ಯ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿದೆ. ಗುರುಗಳ ಬಗ್ಗೆ ಪಠ್ಯದಲ್ಲಿ ಸೇರ್ಪಡೆಗೊಳಿಸದಿದ್ದಲ್ಲಿ ಈಡಿಗರು ಮಾತ್ರವಲ್ಲದೆ ನಾಮಧಾರಿ ಸಹಿತ 26 ಪಂಗಡ ಒಟ್ಟುಗೂಡಿಸಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್, ಪ್ರಮುಖರಾದ ಕೆ.ಮಾಯಿಲಪ್ಪ ಸಾಲ್ಯಾನ್, ವಾಸು ಪೂಜಾರಿ, ಜಗದೀಶ್ ಕೊಯಿಲ, ದಿನೇಶ್ ಸುಂದರ ಶಾಂತಿ, ಸುಂದರ ಪೂಜಾರಿ, ರಂಜಿತ್ ಪೂಜಾರಿ, ನಾರಾಯಣ ಸಾಲ್ಯಾನ್, ಲೋಕೇಶ್ ಸುವರ್ಣ, ಅಶೋಕ ಪೂಜಾರಿ, ಪ್ರೇಮನಾಥ್, ಜಯಂತಿ ಪೂಜಾರಿ, ಶೈಲಜಾ ರಾಜೇಶ್ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.