ಮಂಗಳೂರಿನಲ್ಲಿ ಭಾರತ್ ಫೌಂಡೇಷನ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಮಂಗಳೂರು ಸಾಹಿತ್ಯ ಉತ್ಸವದ ಏಳನೇ ಆವೃತ್ತಿಯಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್‌ದೀಪ್ ಸಿಂಗ್ ಪುರಿ ಮಾತನಾಡಿದರು
–ಪ್ರಜಾವಾಣಿ ಚಿತ್ರ
ಮಂಗಳೂರು: ‘ದೇಶದ ಒಟ್ಟು ಇಂಧನ ಬಳಕೆಯಲ್ಲಿ ಜೈವಿಕ ಇಂಧನದ ಬಳಕೆ ಪ್ರಮಾಣವನ್ನು ಈ ವರ್ಷದ ಅಕ್ಟೋಬರ್ ವೇಳೆಗೆ ಶೇ 20ರಷ್ಟಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದನ್ನು ಈ ಗಡುವಿಗಿಂತ ಮುನ್ನವೇ ಸಾಧಿಸಲಿದ್ದೇವೆ’ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್‌ದೀಪ್ ಸಿಂಗ್ ಪುರಿ ತಿಳಿಸಿದರು.
ಮಂಗಳೂರು ಸಾಹಿತ್ಯ ಉತ್ಸವದಲ್ಲಿ ಶನಿವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
‘ನಿವ್ವಳ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು 2070ರೊಳಗೆ ಶೂನ್ಯಕ್ಕೆ ಇಳಿಸುವ ಗುರಿ ನಿಗದಿಪಡಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಕಂಪನಿಗಳು 2040ರೊಳಗೆ ಈ ಗುರಿ ತಲುಪಲು ತಯಾರಿ ಮಾಡಿಕೊಂಡಿವೆ’ ಎಂದರು.
‘ಇಂಧನ ಭದ್ರತೆಯ ನಿಟ್ಟಿನಲ್ಲಿ ನಮ್ಮ ಪೂರ್ವ ತಯಾರಿ ಉತ್ತಮವಾಗಿದೆ. ಇನ್ನೂ 20 ವರ್ಷಗಳಷ್ಟು ಬಳಸುವಷ್ಟು ಪಳಿಯುಳಿಕೆ ಇಂಧನ ಲಭ್ಯ ಇದೆ. ಭವಿಷ್ಯದ ದೃಷ್ಟಿಯಿಂದ ಸಾಂದ್ರೀಕೃತ ಜೈವಿಕ ಅನಿಲ (ಸಿಬಿಜಿ) ಮತ್ತು ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ), ಸೌರಶಕ್ತಿ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ’ ಎಂದು ತಿಳಿಸಿದರು.
‘147 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ನಿತ್ಯ ಸರಾಸರಿ 6.7 ಕೋಟಿ ಜನರು ತಮ್ಮ ವಾಹನಗಳಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ತಂಬಿಸುತ್ತಾರೆ. ಜಗತ್ತಿನ ಎಷ್ಟೋ ರಾಷ್ಟ್ರಗಳ ಒಟ್ಟು ಜನಸಂಖ್ಯೆಯೇ ಇಷ್ಟೊಂದು ಪ್ರಮಾಣದಲ್ಲಿಲ್ಲ. ನಮ್ಮ ದೈನಂದಿನ ಕಚ್ಚಾತೈಲದ ಬಳಕೆ 50 ಲಕ್ಷ ಬ್ಯಾರೆಲ್‌ಗಳಿಂದ 57 ಲಕ್ಷ ಬ್ಯಾರೆಲ್‌ಗೆ ಹೆಚ್ಚಿದೆ. ಇದರ ಬೆಳವಣಿಗೆ ದರ ನೋಡಿದರೆ ಶೀಘ್ರವೇ ನಮಗೆ 60 ಲಕ್ಷ ಬ್ಯಾರೆಲ್‌ಗಳಿಂದ 70 ಲಕ್ಷ ಬ್ಯಾರೆಲ್‌ಗಳಷ್ಟು ಕಚ್ಚಾತೈಲವು ದೈನಂದಿನ ಬಳಕೆಗೆ ಬೇಕಾಗುತ್ತದೆ’ ಎಂದರು.
ಜೈವಿಕ ಇಂಧನ ಬಳಕೆ ಹೆಚ್ಚಳಕ್ಕೆ ಕ್ರಮವಹಿಸಲಾಗಿದೆ. ಉತ್ತರ ಪ್ರದೇಶವೊಂದರಲ್ಲೇ 100ಕ್ಕೂ ಹೆಚ್ಚು ಸಾಂದ್ರೀಕೃತ ಜೈವಿಕ ಅನಿಲ (ಸಿಬಿಜಿ) ಘಟಕ ಸ್ಥಾಪಿಸಲಾಗುತ್ತಿದೆ. ಕರ್ನಾಟಕದಲ್ಲೂ ಇದಕ್ಕೆ ಉತ್ತೇಜನ ನೀಡಲಿದ್ದೇವೆಹರ್ದೀಪ್ ಸಿಂಗ್ ಪುರಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ
ಕೇಂದ್ರ ಸರ್ಕಾರವು ಉತ್ಪಾದನೆ ಆಧರಿತ ಉತ್ತೇಜನ (ಪಿಎಲ್‌ಐ) ಕಾರ್ಯಕ್ರಮದಡಿ ಎಲೆಕ್ಟ್ರೊಲೈಸರ್
ಉತ್ಪಾದನೆಗೆ ₹19,700 ಕೋಟಿ ನೆರವು ನೀಡಿದೆ. ಎಲೆಕ್ಟ್ರೊಲೈಸರ್ ಉತ್ಪಾದನೆ ಯಲ್ಲಿ ತೊಡಗಿರುವ
ಜಗತ್ತಿನ ಕಂಪನಿಗಳೆಲ್ಲವೂ ಭಾರತದಲ್ಲೂ ಇದರ ಉತ್ಪಾದನೆಯಲ್ಲಿ ತೊಡಗಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.