ADVERTISEMENT

ಕದ್ರಿ ಕೈಬಟ್ಟಲ್‌ನಲ್ಲಿ ಕಾಣಿಸಿಕೊಂಡ ಕಾಡುಕೋಣ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 6:30 IST
Last Updated 5 ಡಿಸೆಂಬರ್ 2023, 6:30 IST

ಮಂಗಳೂರು: ನಗರದ ಕದ್ರಿ ಕೈಬಟ್ಟಲ್ ಪ್ರದೇಶದಲ್ಲಿ ಭಾನುವಾರ ರಾತ್ರಿ ಕಾಡುಕೋಣವೊಂದು ಕಾಣಿಸಿಕೊಂಡಿದೆ. ಅದನ್ನು ಈ ಪ್ರದೇಶದ ಕೆಲವು ನಿವಾಸಿಗಳು ಕಂಡಿದ್ದಾರೆ. ಕಾಡುಕೋಣ ಓಡಾಡಿದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲೂ ದಾಖಲಾಗಿದೆ. 

ಈ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಕಾಡುಕೋಣಕ್ಕಾಗಿ ಹುಡುಕಾಡಿದ್ದಾರೆ. ಆದರೆ ಅದರ ಸುಳಿವು ಸಿಕ್ಕಿಲ್ಲ.

‘ಕದ್ರಿ ಕೈಬಟ್ಟಲ್‌ ಪ್ರದೇಶದ ಸಿ.ಸಿ.ಟಿ.ವಿ ದಾಖಲಾದ ದೃಶ್ಯದಲ್ಲಿ ಕಾಡುಕೋಣವೊಂದು ಜಿಗಿದುಕೊಂಡು ಸಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಕಾಡುಕೋಣಕ್ಕಾಗಿ ಕದ್ರಿ ಸೇರಿದಂತೆ ಆಸುಪಾಸಿನ ಹಲವು ಪ್ರದೇಶಗಳಲ್ಲಿ ನಮ್ಮ ಇಲಾಖೆ ಸಿಬ್ಬಂದಿ ಹುಡುಕಿದ್ದಾರೆ. ಎಲ್ಲು ಅದರ ಸುಳಿವು ಕಂಡುಬಂದಿಲ್ಲ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್‌ ಅವರು ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು. 

ADVERTISEMENT

ಮೂರು ವರ್ಷಗಳ ಹಿಂದೆ ಬಿಜೈ ಪ್ರದೇಶದಲ್ಲಿ ಕಾಡುಕೋಣವೊಂದು ಕಂಡುಬಂದಿತ್ತು. ಆ ಬಳಿಕ ನಗರದ ಒಳಗಡೆ ಕಾಡುಕೋಣ ಕಾಣಿಸಿಕೊಂಡಿದ್ದು ಇದೇ ಮೊದಲು. 

‘ಬಡಗ ಎಕ್ಕಾರು, ಗುರುಪುರ, ಹೊಸಬೆಟ್ಟು, ಇರುವೈಲ್‌, ಕುಪ್ಪೆಪದವು ಪ್ರದೇಶಗಳಲ್ಲಿ ಕಾಡುಕೋಣಗಳಿವೆ. ಅವುಗಳಲ್ಲಿ ಒಂದು ಕೆಲವೊಮ್ಮೆ ದಾರಿ ತಪ್ಪಿ ನಗರಕ್ಕೆ ಬಂದಿರುವ ಸಾಧ್ಯತೆ ಇದೆ. ಈ ಬಗ್ಗೆ ಜನ ಆತಂಕ ಪಡಬೇಕಾಗಿಲ್ಲ. ಅವು ತಮ್ಮ ಪಾಡಿಗೆ ಕಾಡಿಗೆ ಮರಳುತ್ತವೆ’ ಎಂದು ಶ್ರೀಧರ್‌ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.