ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಬೀಳಿಸಲು ಬಿಜೆಪಿ ಷಡ್ಯಂತ್ರ ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಆರೋಪಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಮುಖ್ಯಮಂತ್ರಿಯವರು ವಿಧಾನ ಮಂಡಲ ಅಧಿವೇಶನದಲ್ಲಿ ಸ್ಪಷ್ಟ ಉತ್ತರ ನೀಡಿದ್ದಾರೆ. ಆದರೂ, ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿ ಸಲ್ಲಿಕೆಯಾದ ಅರ್ಜಿ ಸಂಬಂಧ ವಿವರಣೆ ನೀಡುವಂತೆ ಮುಖ್ಯಮಂತ್ರಿಯವರಿಗೆ ನೋಟಿಸ್ ಜಾರಿ ಮಾಡುವ ಅಗತ್ಯವೇನಿತ್ತು’ ಎಂದು ಪ್ರಶ್ನಿಸಿದರು.
‘ಸಿದ್ದರಾಮಯ್ಯ ಅವರು ಪಕ್ಷಕ್ಕೆ ಸೇರದಿದ್ದರೆ, ಸರ್ಕಾರ ಬೀಳಿಸುತ್ತೇವೆ ಎನ್ನುವ ಮಟ್ಟಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಳಿದಿದೆ. ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರನ್ನು ಬಂಧಿಸಿದ ರೀತಿಯಲ್ಲೇ ಸಿದ್ದರಾಮಯ್ಯ ಅವರನ್ನು ಹಣಿಯುವ ತಂತ್ರ ಫಲಿಸದು’ ಎಂದರು.
‘ಲೋಕಸಭೆಯಲ್ಲಿ ಸಂಸದ ಅನುರಾಗ್ ಠಾಕೂರ್ ಅವರು ರಾಹುಲ್ ಗಾಂಧಿಯವರನ್ನು ಉದ್ದೇಶಿಸಿ ನಿಮ್ಮ ಜಾತಿ ಯಾವುದು ಎಂದು ಕೇಳಿದರು. ಠಾಕೂರ್ ಆಡಿದ ಮಾತನ್ನು ಕಡತದಿಂದ ತೆಗೆದು ಹಾಕಿದ್ದರೂ, ಅದನ್ನು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ಈ ಮಟ್ಟಕ್ಕೂ ಇಳಿಯಬಹುದೇ’ ಎಂದು ಪ್ರಶ್ನಿಸಿದರು.
‘ಬಂಧನಕ್ಕೊಳಗಾದ ರೌಡಿಶೀಟರ್ ಪುನೀತ್ ಕೆರೆಹಳ್ಳಿ ಅವರನ್ನು ಸ್ವಾಗತಿಸುವ ಮೂಲಕ ಶಾಸಕ ಹರೀಶ್ ಪೂಂಜ ಹಾಗೂ ಮಾಜಿ ಸಂಸದ ಪ್ರತಾಪ ಸಿಂಹ ಯಾವ ಸಂದೇಶ ನೀಡುತ್ತಿದ್ದಾರೆ. ಅವರು ಯಾರನ್ನು ಪ್ರಚೋದಿಸುತ್ತಿದ್ದಾರೆ’ ಎಂದು ಪ್ರಶ್ನಿಸಿದರು.
‘ರಾಷ್ಟ್ರೀಯ ಹೆದ್ದಾರಿ ಚತುಷ್ಫಥ ಕಾಮಗಾರಿಯಿಂದ ಕೆತ್ತಿಕಲ್ ಗುಡ್ಡೆ ಹಾಗೂ ಅದರ ಮೇಲಿರುವ ಮನೆಗಳು ಅಪಾಯಕ್ಕೆ ಸಿಲುಕಿವೆ. ಇದು ಸ್ವಯಂಕೃತ ಅಪರಾಧ. ಈ ಬಗ್ಗೆ ಚರ್ಚಿಸಲು ಎನ್‌ಎಚ್‌ಎಐ ಅಧಿಕಾರಿಗಳ ಜೊತೆ ಸಭೆ ನಡೆಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಲ್ಲಿ ಕೋರಿದ್ದೇನೆ. ಸಂಸದ ಬ್ರಿಜೇಶ್ ಚೌಟ ಅವರಲ್ಲೂ ಈ ಬಗ್ಗೆ ಮನವಿ ಮಾಡುತ್ತೇನೆ’ ಎಂದರು.
ಪಾಲಿಕೆ ಸದಸ್ಯರಾದ ನವೀನ್ ಡಿಸೋಜ, ಶಶಿಧರ್ ಹೆಗ್ಡೆ, ಪಕ್ಷದ ಮುಖಂಡರಾದ ಪದ್ಮರಾಜ್ ಆರ್. ಪೂಜಾರಿ, ಎಂ.ಎಸ್ ಮುಹಮ್ಮದ್, ಅಶ್ರಫ್ ಕೆ., ಹರಿನಾಥ್ ಕೆ., ಮಹಾಬಲ ಮಾರ್ಲ, ಸುಭಾಷ್ ಕೊಲ್ನಾಡ್, ನೀರಜ್ ಚಂದ್ರಪಾಲ್, ಶುಭೋದಯ ಆಳ್ವ, ಪ್ರೇಮ್ ಬಳ್ಳಾಲ್‌ಬಾಗ್, ವಿಕಾಸ್ ಶೆಟ್ಟಿ, ಲಾರೆನ್ಸ್ ಡಿಸೋಜ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.