ADVERTISEMENT

ಗೋ ಸಂರಕ್ಷಣೆಗೆ ಬಿಜೆಪಿ ಸದಾ ಬದ್ಧ: ಸುದರ್ಶನ ಎಂ.

ಕಪಿಲಾ ಗೋಶಾಲೆ ತೆರವು: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 12:29 IST
Last Updated 10 ಮಾರ್ಚ್ 2021, 12:29 IST
ಸುದರ್ಶನ ಎಂ.
ಸುದರ್ಶನ ಎಂ.   

ಮಂಗಳೂರು: ‘ಕಪಿಲಾ ಗೋಶಾಲೆ ರಕ್ಷಣೆ ಹೆಸರಿನಲ್ಲಿ ಪರಿವಾರ ಸಂಘಟನೆಗಳು ಹಾಗೂ ಅದರ ಪ್ರಮುಖರ ವಿರುದ್ಧ ಪಿತೂರಿ ನಡೆಸುತ್ತಿರುವ ಷಡ್ಯಂತರ ಕಾಣುತ್ತಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಎಂ. ಪ್ರತಿಕ್ರಿಯಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಹಾಗೂ ಪರಿವಾರ ಸಂಘಟನೆಗಳು ಗೋ ರಕ್ಷಣೆಗೆ ಬದ್ಧವಾಗಿವೆ. ಆದರೆ, ಗೋಶಾಲೆಯನ್ನು ನಡೆಸಲು ಮಾನದಂಡಗಳಿವೆ. ಕಪಿಲಾ ಗೋಶಾಲೆಯು ಸರ್ಕಾರಿ ಜಾಗದಲ್ಲಿ ಇದೆ. ಹೀಗಾಗಿ, ಅದನ್ನು ತೆರವುಗೊಳಿಸಲಾಗಿದೆ. ಅಲ್ಲಿರುವ ಗೋವುಗಳನ್ನು ಅವರಿಗೆ ಸಾಕಲು ಸಾಧ್ಯವಿಲ್ಲದಿದ್ದರೆ, ಸಂರಕ್ಷಿಸಲು ಸಂಘಟನೆ ಬದ್ಧವಾಗಿದೆ’ ಎಂದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಕೆಂಜಾರಿನಲ್ಲಿರುವ ತಮ್ಮ ಖಾಸಗಿ ಜಾಗದಲ್ಲಿ ಗೋ ಶಾಲೆ ಮಾಡಲಾಗಿದೆ ಎಂದು ಕಪಿಲಾ ಗೋಶಾಲೆಯ ಮುಖ್ಯಸ್ಥರು ಹೇಳಿದ್ದರು. ಹೀಗಾಗಿ, ನಾವೆಲ್ಲರೂ ಅವರ ಕಾರ್ಯವನ್ನು ಬೆಂಬಲಿಸಿದ್ದೆವು. ಅದರೆ, ಈಚೆಗೆ ಪರಿಶೀಲನೆ ನಡೆಸಿದಾಗ, ಅಲ್ಲಿ ಕೇವಲ 4 ಸೆಂಟ್ಸ್‌ ಮಾತ್ರ ಅವರ ಜಾಗ ಇದೆ. ಉಳಿದೆಲ್ಲವೂ ಸರ್ಕಾರವು ಕೋಸ್ಟಲ್‌ ಗಾರ್ಡ್‌ಗೆ ಮೀಸಲಿಟ್ಟ ಭೂಮಿ’ ಎಂದು ಸ್ಪಷ್ಟನೆ ನೀಡಿದರು.

ADVERTISEMENT

‘ಅಕ್ರಮ ಗೋಶಾಲೆ ತೆರವು ಮಾಡುವ ಮೊದಲೇ ಅವರಿಗೆ ಗೋವುಗಳನ್ನು ಸ್ಥಳಾಂತರಿಸಲು ಹೇಳಿದ್ದರೂ ಮಾಡಿಲ್ಲ. ಬದಲಾಗಿ ಅವರ ಬೆಂಬಲಿಗರು ಸೇರಿಕೊಂಡು ಸಂಸದರು ಹಾಗೂ ಶಾಸಕರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಆರ್‌ಎಸ್‌ಎಸ್ ಪ್ರಮುಖರಾದ ಡಾ.ಪ್ರಭಾಕರ ಭಟ್ಟ ಕಲ್ಲಡ್ಕ ಅವರ ಜೊತೆ ನಡೆದ ಮಾತುಕತೆಯನ್ನೂ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಗೋಶಾಲೆಯನ್ನು ಮುಂದಿಟ್ಟು ಅವರು ಸಂಘಟನೆಯ ವಿಘಟನೆಗೆ ಮುಂದಾಗಿರುವ ಅನುಮಾನ ಕಾಡುತ್ತಿದೆ’ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮುಡ ಅಧ್ಯಕ್ಷ ರವಿಶಂಕರ್ ಮಿಜಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.