
ಮಂಗಳೂರು: ಲೋಕಸಭೆ ಚುನಾವಣೆಯ ಪೂರ್ವಭಾವಿಯಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಸೇರಿಸಲು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಅಭಿಯಾನ ಆರಂಭಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ 50 ಸಾವಿರ ಸಲಹೆಗಳನ್ನು ಸಂಗ್ರಹಿಸಿ ಕಳುಹಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಪ್ರಣಾಳಿಕೆ ಉಸ್ತುವಾರಿ ಸಿಎ ಶಾಂತರಾಮ ಶೆಟ್ಟಿ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದೇ ಮೊದಲ ಬಾರಿಗೆ ಜಿಲ್ಲೆಗೆ ಎರಡು ಎಲ್‌ಇಡಿ ಪರದೆ ಇರುವ ವಾಹನಗಳು ಬಂದಿವೆ. ಇವು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಪ್ರತಿ ಗ್ರಾಮದಲ್ಲಿ ಸಂಚರಿಸಿ, ಕೇಂದ್ರ ಸರ್ಕಾರದ ಕಾರ್ಯಕ್ರಮ ತಿಳಿಸುವ ಜೊತೆಗೆ ಜನರ ಅಭಿಪ್ರಾಯ ಸಂಗ್ರಹಿಸಲಿವೆ. ದೇಶದಲ್ಲಿ ಒಟ್ಟು ಒಂದು ಕೋಟಿ ಸಲಹೆ ಸಂಗ್ರಹಿಸುವ ಗುರಿ ಇದೆ’ ಎಂದರು.
ಅಭಿಯಾನದ ಅಂಗವಾಗಿ ಜಿಲ್ಲೆಯಾದ್ಯಂತ ದೇವಸ್ಥಾನ, ಕಾಲೇಜು, ಶಾಪಿಂಗ್ ಮಾಲ್ ಮತ್ತಿತರ ಜನದಟ್ಟಣೆ ಇರುವ ಸ್ಥಳಗಳಲ್ಲಿ ಸಂಕಲ್ಪ ಪೆಟ್ಟಿಗೆ ಇಡಲಾಗುತ್ತದೆ. ಈ ಪೆಟ್ಟಿಗೆಯು ಒಂದು ವಾರ ಇರಲಿದ್ದು, ಜನರು ತಮ್ಮ ಅಭಿಪ್ರಾಯ ಬರೆದು ಇದರಲ್ಲಿ ಹಾಕಬಹುದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ಹಿಂದಿನ ಚುನಾವಣೆಯ ಪ್ರಣಾಳಿಕೆಗಳಲ್ಲಿ ನೀಡಿದ್ದ ಶೇ 95ರಷ್ಟು ಭರವಸೆಗಳನ್ನು ಈಡೇರಿಸಿದೆ. ಈ ಬಾರಿ ಜನರ ಅಭಿಪ್ರಾಯ ಸಂಗ್ರಹಿಸಿ, ಅವುಗಳನ್ನು ಕ್ರೋಡೀಕರಿಸಿ ದೇಶ ಮಟ್ಟದಲ್ಲಿ ಪ್ರಣಾಳಿಕೆ ಸಿದ್ಧವಾಗುತ್ತದೆ ಎಂದು ಹೇಳಿದರು.
ನಮೋ ಅಪ್ಲಿಕೇಷನ್ ಮೂಲಕ ಅಥವಾ ಮಿಸ್ಡ್ ಕಾಲ್ (9090902024) ಕೊಡುವ ಮೂಲಕವೂ ಅಭಿಪ್ರಾಯ ನೀಡಬಹುದು ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಪ್ರಮುಖರಾದ ನಿತಿನ್‌ಕುಮಾರ್, ಸಂಜಯ್ ಪ್ರಭು, ಸುಧೀರ್ ಶೆಟ್ಟಿ ಕಣ್ಣೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.