ADVERTISEMENT

ಪುತ್ತೂರು | ಟ್ಯಾಂಕ್ ನೀರು ನೀಲಿ ಬಣ್ಣಕ್ಕೆ: ತುರಿಕೆ

ಪುತ್ತೂರಿನ ಅಜ್ಜಿಕಲ್ಲು ಸರ್ಕಾರಿ ಶಾಲೆಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 4:11 IST
Last Updated 10 ಜುಲೈ 2025, 4:11 IST
ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಟ್ಯಾಂಕ್‌ನ ನೀರು ನೀಲಿ ಬಣ್ಣಕ್ಕೆ ತಿರುಗಿದೆ
ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಟ್ಯಾಂಕ್‌ನ ನೀರು ನೀಲಿ ಬಣ್ಣಕ್ಕೆ ತಿರುಗಿದೆ   

ಪುತ್ತೂರು: ಶಾಲಾ ವಠಾರದಲ್ಲಿ ನಿರ್ಮಿಸಿರುವ ಸಿಮೆಂಟ್ ಟ್ಯಾಂಕ್‌ನಲ್ಲಿ ತುಂಬಿಸಿಟ್ಟಿದ್ದ ನೀರು ನೀಲಿ ಬಣ್ಣವಾದ, ಈ ನೀರು ಬಳಕೆ ಮಾಡಿದ ವಿದ್ಯಾರ್ಥಿಗಳ ಮೈ–ಕೈಯಲ್ಲಿ ತುರಿಕೆ ಕಾಣಿಸಿಕೊಂಡ ಘಟನೆಯೊಂದು ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ.

ಈ ಟ್ಯಾಂಕ್‌ನ ನೀರನ್ನು ಶಾಲೆ ಮಕ್ಕಳು ಕೈ–ಕಾಲು ತೊಳೆಯಲು, ಶೌಚಾಲಯಕ್ಕೆ ಬಳಸುತ್ತಿದ್ದರು. ‌ಬುಧವಾರ ಬೆಳಿಗ್ಗೆ ನಳ್ಳಿಯಲ್ಲಿ ನೀಲಿ ಬಣ್ಣದ ನೀರು ಬರಲಾರಂಭಿಸಿದೆ. ಈ ವಿಚಾರವನ್ನು ಶಿಕ್ಷಕರ ಗಮನಕ್ಕೆ ತಂದಿದ್ದರು. ಶಿಕ್ಷಕರು ಪರಿಶೀಲಿಸಿದಾಗ ಟ್ಯಾಂಕ್‌ನ ನೀರೂ ನೀಲಿ ಬಣ್ಣವಾಗಿತ್ತು. ಈ ನೀರನ್ನು ಬಳಸಿದಿ ವಿದ್ಯಾರ್ಥಿಗಳಿಗೆ ಕೆಲ ಹೊತ್ತಿನ ಬಳಿಕ ತುರಿಕೆ ಬರಲಾರಂಭಿಸಿತ್ತು ಎಂದು ತಿಳಿದು ಬಂದಿದೆ.

ಎಸ್‌ಡಿಎಂಸಿ ಅಧ್ಯಕ್ಷ ಗಣೇಶ್ ಮುಂಡೋವುಮೂಲೆ, ಒಳಮೊಗ್ರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸದಸ್ಯ ಮಹೇಶ್ ರೈ ಕೇರಿ, ಆರೋಗ್ಯ ಇಲಾಖೆಯ ಸಿಎಚ್‌ಒ ವಿದ್ಯಾಶ್ರೀ, ಆಶಾ ಕಾರ್ಯಕರ್ತೆ ಸರೋಜಿನಿ ಪರಿಶೀಲನೆ ನಡೆಸಿದರು.

ADVERTISEMENT

ಟ್ಯಾಂಕ್‌ನ ನೀರನ್ನು ಮಂಗಳವಾರ ಖಾಲಿ ಮಾಡಿ ಸ್ವಚ್ಛಗೊಳಿಸಿ ಕೊಳವೆ ಬಾವಿಯಿಂದ ನೀರು ತುಂಬಿಸಲಾಗಿತ್ತು. ಟ್ಯಾಂಕ್‌ನ ನೀರನ್ನು ಆರೋಗ್ಯ ಇಲಾಖೆಯವರು ಸಂಗ್ರಹಿಸಿ ಪರೀಕ್ಷೆಗಾಗಿ ಕೊಂಡೊಯ್ದಿದ್ದಾರೆ. ಟ್ಯಾಂಕ್‌ಗೆ ಕಿಡಿಗೇಡಿಗಳು ರಾಸಾಯನಿಕ ವಸ್ತು ಹಾಕಿರಬಹುದೇ, ಅಥವಾ ಸಹಜವಾಗಿ ನೀಲಿ ಬಣ್ಣವಾಗಿರಬಹುದೇ ಎಂಬ ಅನುಮಾನ ಬಂದಿವೆ.

ಘಟನೆ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದೆವು. ಆರೋಗ್ಯ ಇಲಾಖೆಯ ಸಿಎಚ್‌ಒ ಸ್ಥಳಕ್ಕೆ ಬಂದು ಈ ನೀರನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಕೊಂಡೊಯ್ದಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಚಿತ್ರಾ ರೈ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.