
ಬಂಟ್ವಾಳ: ‘ಇಲ್ಲಿನ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿಯಲ್ಲಿ 23 ವರ್ಷಗಳಿಂದ ಕಾನೂನು ಬಾಹಿರವಾಗಿ ಸುಂಕ ವಸೂಲಿ ಮಾಡುತ್ತಿರುವ ಟೋಲ್‌ಗೇಟ್ ಮುಚ್ಚುವ ತನಕ ಹೋರಾಟ ಮುಂದುವರಿಯಲಿದ್ದು, ಈ ಸುಲಿಗೆ ಕೇಂದ್ರವನ್ನು ಶೀಘ್ರ ತೆರವುಗೊಳಿಸಬೇಕು’ ಎಂದು ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಗೌರವಾಧ್ಯಕ್ಷ ಬಿ. ರಮಾನಾಥ ರೈ ಆಗ್ರಹಿಸಿದರು.
ಬ್ರಹ್ಮರಕೂಟ್ಲು ಟೋಲ್‌ಗೇಟ್ ತೆರವು ಹೋರಾಟ ಸಮಿತಿ ವತಿಯಿಂದ ಸಮಾನ ಮನಸ್ಕರ ಸಂಘಟನೆಗಳ ಸಹಭಾಗಿತ್ವದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಈ ಕಾನೂನು ಬಾಹಿರ ಸುಂಕ ವಸೂಲಾತಿ ಕೇಂದ್ರ ಮುಚ್ಚಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.
ಸಮಿತಿ ಸಂಚಾಲಕರಾದ ಮುನೀರ್ ಕಾಟಿಪಳ್ಳ, ಬಿ. ಶೇಖರ್ ಮಾತನಾಡಿ, ಟೋಲ್‌ಗೇಟ್‌ಗಳು 60 ಕಿ.ಮೀ. ದೂರ ಇರಬೇಕೆಂಬ ನಿಯಮವಿದೆ. ಆದರೆ ಮಂಗಳೂರಿನ ತಲಪಾಡಿ, ಉಪ್ಪಿನಂಗಡಿ ಸಮೀಪದ ವಳಾಲು, ಮೂಲ್ಕಿ ಸಮೀಪದ ಹೆಜಮಾಡಿ ಟೋಲ್ ಸಂಗ್ರಹ ಕೇಂದ್ರಗಳು 32, 31 ಮತ್ತು 44 ಕಿ.ಮೀ. ಅಂತರದಲ್ಲಿವೆ ಎಂದು ಆರೋಪಿಸಿದರು.
ಚಿಂತಕ ಎಂ.ಜಿ.ಹೆಗಡೆ ಮಾತನಾಡಿ, ವಾಹನ ಸವಾರರನ್ನು ಸುಲಿಗೆ ಮಾಡುತ್ತಿರುವ ಇಂತಹ ಟೋಲ್ ಸಂಗ್ರಹ ಕೇಂದ್ರಗಳನ್ನು ತೆರವುಗೊಳಿಸಲು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತಿತರ ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಭಟ್, ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಇಲ್ಲಿನ ಸಂಸದರು, ಶಾಸಕರ ಕುಮ್ಮಕ್ಕಿನಿಂದಲೇ ಅನಧಿಕೃತ ಟೋಲ್ ಸಂಗ್ರಹ ಕೇಂದ್ರ ಕಾರ್ಯಾಚರಿಸುತ್ತಿದೆ ಎಂದು ಆರೋಪಿಸಿದರು.
ಕುದ್ರೋಳಿ ಕ್ಷೇತ್ರದ ಖಜಾಂಚಿ ಪದ್ಮರಾಜ್ ಆರ್. ಪೂಜಾರಿ, ರಾಜ್ಯ ರೈತ ಸಂಘದ ಮುಖಂಡ ರೂಪೇಶ್ ರೈ ಮಾತನಾಡಿ, ಕಾನೂನು ಬಾಹಿರ ಸುಂಕ ವಸೂಲಾತಿ ಮೂಲಕ ಹಗಲು ದರೋಡೆ ನಡೆಯುತ್ತಿದೆ ಎಂದು ಆರೋಪಿಸಿದರು.
ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಎಸ್. ಗಟ್ಟಿ, ಸಾವಯವ ಮತ್ತು ಬೀಜ ಸಂಸ್ಕರಣಾ ನಿಗಮದ ಅಧ್ಯಕ್ಷೆ ಲಾವಣ್ಯ ಬಲ್ಲಾಳ್, ಮಂಜುಳಾ ನಾಯಕ್, ಬೂಡ ಅಧ್ಯಕ್ಷ ಬೇಬಿ ಕುಂದರ್, ಸಮಿತಿ ಅಧ್ಯಕ್ಷ ಮೋಹನ ಶೆಟ್ಟಿ ಪಂಜಿಕಲ್ಲು, ದಲಿತ ಸಂಘಟನೆ ಮುಖಂಡ ಸದಾಶಿವ ಪಡುಬಿದ್ರಿ, ಬಂಟ್ವಾಳ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಲಕೃಷ್ಣ ಅಂಚನ್, ಚಂದ್ರಶೇಖರ ಶೆಟ್ಟಿ ಅಮ್ಮುಂಜೆ, ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ ಬೋಳಂತೂರು, ಪ್ರಮುಖರಾದ ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್. ಮಹಮ್ಮದ್, ಪಿಯೂಸ್ ಎಲ್. ರಾಡ್ರಿಗಸ್, ಸೀತಾರಾಮ ಬೇರಿಂಜ, ಸುಹೇಲ್ ಕಂದಕ್, ಡಾ.ರಾಜಾರಾಮ, ಉಮೇಶ ಕುಮಾರ್ ವೈ, ಸುರೇಶ್ ಕುಮಾರ್ ಬಂಟ್ವಾಳ್, ಯಾದವ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ, ಶಾಹುಲ್ ಹಮೀದ್, ಸುದರ್ಶನ್ ಜೈನ್, ರಾಮಣ್ಣ ವಿಟ್ಲ, ಉದಯ ಕುಮಾರ್, ಸಂತೋಷ್ ಬಜಾಲ್, ರಾಮಕೃಷ್ಣ ಆಳ್ವ, ಅಬ್ಬಾಸ್ ಆಲಿ, ಕೆ. ಪದ್ಮನಾಭ ರೈ, ವಾಸು ಪೂಜಾರಿ, ಲೋಲಾಕ್ಷ ಶೆಟ್ಟಿ, ಸದಾಶಿವ ಬಂಗೇರ, ಜಗದೀಶ ಕುಂದರ್, ಮೋಹನ ಚೆಂಡ್ತಿಮಾರ್, ಲಾದ್ರು ಮಿನೇಜಸ್, ಎ.ಬಿ. ಅಬ್ದುಲ್ಲ, ಮಧುಸೂಧನ ಶೆಣೈ, ಮಹಮ್ಮದ್ ನಂದಾವರ, ಸಿದ್ದಿಕ್ ಗುಡ್ಡೆಯಂಗಡಿ, ಕರೀಂ ಬೊಳ್ಳಾಯಿ, ಶಿವಾನಂದ ರೈ ಸಿದ್ಧಕಟ್ಟೆ, ಐಡಾ ಸುರೇಶ್, ಅಪ್ಪಿ ಮಂಗಳೂರು, ಜೋಸ್ಪಿನ್ ಡಿಸೋಜ, ಶೈಲಜಾ ರಾಜೇಶ್, ಜೆಸಿಂತಾ ಡಿಸೋಜ, ವಿಲ್ಮಾ ಮೊರಾಸ್, ಜಯಂತಿ ಪೂಜಾರಿ, ರಮಣಿ, ರಾಧಾ, ವಸಂತಿ, ಲೋಲಾಕ್ಷಿ ಭಾಗವಹಿಸಿದ್ದರು.