ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ಗುರುವಾರ ರಾತ್ರಿ ನಡೆದ ಬ್ರಹ್ಮರಥೋತ್ಸವ
ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಳದಲ್ಲಿ ಗುರುವಾರ ರಾತ್ರಿ ನಡೆದ ಬ್ರಹ್ಮರಥೋತ್ಸವದಲ್ಲಿ 200 ಮಂದಿ ಭಕ್ತರು ಬ್ರಹ್ಮರಥೋತ್ಸವ ಪೂಜಾ ಸೇವೆ ಮಾಡಿದ್ದು, ದಾಖಲೆ ನಿರ್ಮಾಣವಾಗಿದೆ.
ಕ್ಷೇತ್ರದ ವತಿಯಿಂದ ಬ್ರಹ್ಮರಥೋತ್ಸವ ಪೂಜಾ ಸೇವೆಗೆ ₹ 25 ಸಾವಿರ ನಿಗದಿ ಪಡಿಸಲಾಗಿತ್ತು. ಈ ಬಾರಿ 200 ಭಕ್ತರು ಈ ಸೇವೆ ಮಾಡಿರುವುದರಿಂದ ಈ ಸೇವೆಯಿಂದ ಕ್ಷೇತ್ರಕ್ಕೆ ₹ 50 ಲಕ್ಷ ಸಂಗ್ರಹವಾಗಿದೆ. ಕಳೆದ ವರ್ಷ 68 ಭಕ್ತರು ಬ್ರಹ್ಮರಥೋತ್ಸವ ಸೇವೆ ಮಾಡಿದ್ದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಶಾಸಕ ಸಂಜೀವ ಮಠಂದೂರು ಅವರು ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ಬ್ರಹ್ಮರಥ ಪೂಜೆ ನೆರವೇರಿಸಿದ ಪ್ರಮುಖರಾಗಿದ್ದಾರೆ. ಬ್ರಹ್ಮರಥ ಪೂಜಾ ರಶೀದಿ ಮಾಡಿಸಿದವರಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ ಪ್ರಮುಖರಾಗಿದ್ದಾರೆ.
ಅನ್ನಪ್ರಸಾದ ವ್ಯವಸ್ಥೆಗೆ ಭಕ್ತರ ಮೆಚ್ಚುಗೆ: ದೇವಳದಲ್ಲಿ ದರ್ಶನ ಬಲಿ, ಬ್ರಹ್ಮರಥೋತ್ಸವ ನಡೆದ ಗುರುವಾರ ಸುಮಾರು 50 ಮಂದಿಗೆ ಅನ್ನ ಪ್ರಸಾದ ವಿತರಣೆ ಮಾಡಲಾಗಿದೆ. ಈ ಬಾರಿ ಜಾತ್ರೋತ್ಸವದ ಸಂದರ್ಭದಲ್ಲಿ ದೇವಳದ ಕೆರೆಯ ಬಳಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡುವ ಮೂಲಕ ಭಕ್ತರಿಗೆ ಅನುಕೂಲ ಕಲ್ಪಿಸಿಕೊಡಲಾಗಿತ್ತು.
ಪ್ರತಿ ದಿನ ಮಧ್ಯಾಹ್ನ ದೇವರ ಅನ್ನಪ್ರಸಾದ ವಿತರಣೆ ಆರಂಭಿಸಲಾಗುತ್ತಿತ್ತು. ಸಂಜೆ ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಜಾತ್ರೋತ್ಸವದಲ್ಲಿ ಈ ಬಾರಿ ಸುಮಾರು 1.5 ಲಕ್ಷ ಮಂದಿ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ. ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ನೇತೃತ್ವದ ದೇವಳದ ವ್ಯವಸ್ಥಾಪನಾ ಸಮಿತಿ, ಶಾಸಕ ಅಶೋಕ್‌ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ ಅನ್ನದಾನ, ಜಾತ್ರೋತ್ಸವದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.