ADVERTISEMENT

ಪಡೀಲ್‌: ಬೈಕ್‌ಗೆ ಕಾರು ಡಿಕ್ಕಿ, ಕೇಬಲ್‌ ಟೆಕ್ನಿಷಿಯನ್‌ ಸಾವು

ಹೆದ್ದಾರಿ ಪಕ್ಕ ಬೈಕ್ ನಿಲ್ಲಿಸಿ ಮಾತನಾಡುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಕಾರು

​ಪ್ರಜಾವಾಣಿ ವಾರ್ತೆ
Published 21 ಮೇ 2024, 5:47 IST
Last Updated 21 ಮೇ 2024, 5:47 IST
ಹರೀಶ್‌
ಹರೀಶ್‌   

ಮಂಗಳೂರು: ನಗರದ ಹೊರವಲಯದ ಪಡೀಲ್‌–ಕಣ್ಣೂರಿನ ಬಳಿ ರಾಷ್ಟ್ರೀಯ ಹೆದ್ದಾರಿ–73ರ ಪಕ್ಕದಲ್ಲಿ ಬೈಕ್‌ ನಿಲ್ಲಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಗೆ  ಕಾರು ಡಿಕ್ಕಿ ಹೊಡೆದು, ಅವರು ಸೋಮವಾರ ಮೃತಪಟ್ಟಿದ್ದಾರೆ.

‘ಮೃತರನ್ನು ತೊಕ್ಕೊಟ್ಟು  ಕಲ್ಲಾಪು ನಿವಾಸಿ ಹರೀಶ್ (43) ಎಂದು ಗುರುತಿಸಲಾಗಿದೆ. ಅಡ್ಯಾರ್‌ ಕಡೆಯಿಂದ ಬಂದ ಡಸ್ಟರ್‌ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು, ಬಳಿಕ ಪಾದಚಾರಿ ಮಾರ್ಗದತ್ತ ಚಲಿಸಿತ್ತು. ಹೆದ್ದಾರಿ ಪಕ್ಕದಲ್ಲಿದ್ದ ಹರೀಶ್‌ ಅವರಿಗೆ ಢಿಕ್ಕಿ ಹೊಡೆದಿತ್ತು. ತಲೆಗ ಭಾಗಕ್ಕೆ ಗಂಭೀರವಾಗಿ ಏಟು ಬಿದ್ದ ಅವರನ್ನು ಸಮೀಪದ ಫಸ್ಟ್ರ್‌ ನ್ಯೂರೋ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರು ಗಾಯಾಳುವಿನ ‘ಮಿದುಳು ನಿಷ್ಕ್ರಿಯಗೊಂಡಿದೆ’ ಎಂದು ತಿಳಿಸಿದ್ದಾರೆ. ಅಪಘಾತವಾದ ಕಾರನ್ನು ಮಹಿಳೆಯೊಬ್ಬರು ಚಲಾಯಿಸಿದ್ದರು. ಕಾರಿನ ನಿಯಂತ್ರಣ ತಪ್ಪುತ್ತಿದ್ದಂತೆಯೇ ಮಹಿಳೆ ಬ್ರೇಕ್ ಬದಲು ಆಕ್ಸಿಲರೇಟರ್‌ ಒತ್ತಿದ್ದರಿಂದ ಈ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಇವರ ತಲೆಯ ಭಾಗವೇ ಒಡೆದು ಹೋಗಿತ್ತು’ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹರೀಶ್‌ ಅವರು  ಸ್ಥಳೀಯ ಕೇಬಲ್ ನೆಟ್‌ವರ್ಕ್ ಸಂಸ್ಥೆಯಲ್ಲಿ ಟೆಕ್ನಿಷಿಯನ್ ಹಾಗೂ ಬಿಲ್‌ ಕಲೆಕ್ಟರ್‌ ಆಗಿದ್ದರು. ಬಿಲ್‌ ಸಂಗ್ರಹಿಸುವ ಸಲುವಾಗಿ ಪಡೀಲ್‌ಗೆ ತೆರಳಿದ್ದಾಗ ಅಪಘಾತ ಸಂಭವಿಸಿದೆ. ಅವರಿಗೆ  ಪತ್ನಿ, ಇಬ್ಬರು ಗಂಡು ಮಕ್ಕಳು, ತಾಯಿ, ಒಬ್ಬ ಸಹೋದರ, ಇಬ್ಬರು ಸಹೋದರಿಯರು ಇದ್ದಾರೆ ಎಂದು ಗೊತ್ತಾಗಿದೆ.

ADVERTISEMENT

ನಗರದ ಸಂಚಾರ (ದಕ್ಷಿಣ) ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.