ಪುತ್ತೂರು: ಭಾರತಕ್ಕೆ ಶ್ರೀಲಂಕಾ ಹಾಗೂ ವಿಯೆಟ್ನಾಂನಿಂದ ಕಾಳಸಂತೆಯಲ್ಲಿ ಕಾಳುಮೆಣಸು ಆಮದಾಗುತ್ತಿರುವುದನ್ನು ತಡೆಯಲು ಕ್ಯಾಂಪ್ಕೊ ಕೇಂದ್ರ ಸರ್ಕಾರದ ಜತೆ ಪ್ರಯತ್ನ ನಡೆಸುತ್ತಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು ಹಾಗೂ ಕಾಫಿ ಬೆಳೆಗಾರರ ಒಕ್ಕೂಟದ ವತಿಯಿಂದ ಪುತ್ತೂರಿನ ಸುಭದ್ರಾ ಸಭಾಭವನದಲ್ಲಿ ಭಾನುವಾರ ನಡೆದ ’ಕಾಳುಮೆಣಸು ಹಾಗೂ ಕಾಫಿ ಬೆಳೆಯ ಕುರಿತ ಮಾಹಿತಿ ಶಿಬಿರ ಮತ್ತು ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.
ಕೊರೊನಾದ ಬಳಿಕ ಅಡಿಕೆ ದರ ಕುಸಿಯದಂತೆ ಕ್ಯಾಂಪ್ಕೊ ಮಹತ್ವದ ಪಾತ್ರ ವಹಿಸುತ್ತಿದೆ. ಅಡಿಕೆ, ಕಾಳುಮೆಣಸು, ಕೊಕ್ಕೊ ದರದ ಸ್ಥಿರತೆ ಸಾಧಿಸಲು ಕ್ಯಾಂಪ್ಕೊ ಪ್ರಯತ್ನ ನಿರಂತರವಾಗಿದೆ. ದ.ಕ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕಾಳುಮೆಣಸು ಹಾಗೂ ಕಾಫಿ ಬೆಳೆದು ರೈತರು ಆರ್ಥಿಕವಾಗಿ ಶಕ್ತಿ ಪಡೆಯಲು ಅವಕಾಶವಿದ್ದು, ಬೆಳೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಆದ್ಯತೆ ನೀಡಬೇಕು. ರೋಗ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಜಿಲ್ಲೆಯಲ್ಲಿ ಅಡಿಕೆಗೆ ಪರ್ಯಾಯವಾಗಿ ಕಾಫಿ ಬೆಳೆಯುವ ಕುರಿತು ಸಂಸದ ಬ್ರಿಜೇಶ್ ಚೌಟ ಅವರು ಸಿಪಿಸಿಆರ್‌ಐ ವಿಜ್ಞಾನಿಗಳ ಜತೆ ಚರ್ಚೆ ನಡೆಸುತ್ತಿದ್ದಾರೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಅಖಿಲ ಭಾರತ ಕಾಳುಮೆಣಸು ಬೆಳೆಗಾರರ ಸಂಘದ ವಿಜ್ಞಾನಿ ವೇಣುಗೋಪಾಲ್ ಅವರು, ಸಮಗ್ರ ಕಾಳುಮೆಣಸು ಬೆಳೆಯುವ ಕುರಿತು ಮಾಹಿತಿ ಮತ್ತು ಸಂರಕ್ಷಣಾ ವಿಧಾನದ ಬಗ್ಗೆ ವಿಷಯ ಮಂಡಿಸಿದರು. ಸೆವೆನ್ ಬೀನ್ ಟೀಮ್ ಮುಖ್ಯಸ್ಥ ಎಚ್.ಎಸ್.ಧರ್ಮರಾಜ್ ಸಕಲೇಶಪುರ ಅವರು ಕಾಫಿ ಮತ್ತು ಕಾಳುಮೆಣಸಿಗೆ ನೀಡುವ ಪೋಷಕಾಂಶಗಳ ಕುರಿತು, ಇಂಧೋರ್‌ನ ಶ್ರೀ ಸಿದ್ಧಿ ಅಗ್ರಿ ಕಂಪನಿಯ ಮುಖ್ಯಸ್ಥ ಪೆರುವೋಡಿ ನಾರಾಯಣ ಭಟ್ ಅವರು ಅಡಿಕೆ ಬೆಳೆಯುವ ವಿಧಾನ ಮತ್ತು ಪೋಷಕಾಂಶಗಳ ಕುರಿತು ಮಾಹಿತಿ ನೀಡಿದರು.
ಅಡಿಕೆ ಮತ್ತು ಕಾಳುಮೆಣಸು ಕೃಷಿಕರಾದ ಸುರೇಶ್ ಬಲ್ನಾಡು, ಅರವಿಂದ ಮುಳ್ಳಂಕೊಚ್ಚಿ ಆಲಂಕಾರು, ಪ್ರಗತಿಪರ ಕೃಷಿಕರಾದ ಪ್ರಸಾದ್ ರೈ ದಂಪತಿ, ಪೆರುವೋಡಿ ನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು.
ಪ್ರಗತಿಪರ ಕಾಳುಮೆಣಸು ಕೃಷಿಕ ವೇಣುಗೋಪಾಲ್ ಕಳೇಯತೋಡಿ, ಧೂಪದ ಮರದಲ್ಲಿ ಕಾಳುಮೆಣಸು ಕೃಷಿ ಮಾಡಿದ ಸಾಧಕ ಅನಂತರಾಮಕೃಷ್ಣ ಪಳ್ಳತ್ತಡ್ಕ, ಅಡಿಕೆ ಮರ ಏರುವ ಯಂತ್ರವನ್ನು ಆವಿಷ್ಕರಿಸಿದ ಕೋಮಲೆ ಗಣಪತಿ ಭಟ್, ಕಾಳುಮೆಣಸು ಕಸಿ ಕಟ್ಟಿ ಬೆಳೆಸಿದ ಅನುಭವಿ ಕೃಷಿಕೆ ಸ್ವಪ್ನಾ ಸೇಡಿಯಾಪು ಅತಿಥಿಗಳಾಗಿದ್ದರು.
ಕಾಳುಮೆಣಸು ಹಾಗೂ ಕಾಫಿ ಬೆಳೆಗಾರರ ದ.ಕ. ಹಾಗೂ ಕಾಸರಗೋಡು ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಅಭಿಜಿತ್ ಪುತ್ತೂರು, ಸಮನ್ವಯ ಸಮಿತಿ ಸದಸ್ಯರಾದ ಗೋವಿಂದ ಭಟ್ ಬಾಯಾರಿ, ಅಜಿತ ಪ್ರಸಾದ್, ಸೇಡಿಯಾಪು ಜನಾರ್ದನ ಭಟ್ ಭಾಗವಹಿಸಿದ್ದರು.
ಕಾಳುಮೆಣಸು ಹಾಗೂ ಕಾಫಿ ಬೆಳೆಗಾರರ ದ.ಕ. ಹಾಗೂ ಕಾಸರಗೋಡು ಜಿಲ್ಲಾ ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ ಭಟ್ ಪಡಾರು ಸ್ವಾಗತಿಸಿದರು. ಶ್ರೀಕೃಷ್ಣ ಪ್ರಸಾದ್ ವಂದಿಸಿದರು. ಪ್ರೊ.ರಾಕೇಶ್ ಕುಮಾರ್ ಕಮ್ಮಜೆ ನಿರೂಪಿಸಿದರು.
ಗಿಡಗಳ ಪ್ರದರ್ಶನ, ಮಾರಾಟ
ವೈವಿಧ್ಯಮಯ ಮಾವಿನ ಗಿಡಗಳು, ಹಲಸಿನ ಗಿಡಗಳು, ಶ್ರೀಗಂಧ, ರಕ್ತಚಂದನದ ಗಿಡಗಳು, ರಾಮ ಫಲ, ಸೀತಾಫಲ, ಚಿಕ್ಕು, ದಾಳಿಂಬೆ, ಜಾಯಿಕಾಯಿ, ಮ್ಯಾಂಗೋಸ್ಟಿನ್, ಕಿತ್ತಳೆ, ಲಿಂಬೆ, ನೇರಳೆ, ಮೂಸುಂಬಿ ಮೊದಲಾದ ಗಿಡಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು.
ಹಲವು ಬಗೆಯ ಗೊಬ್ಬರ ತಯಾರಿಕಾ ಸಂಸ್ಥೆಗಳ ಮಳಿಗೆ, ಕಾಳುಮೆಣಸು ಕೀಳಲು ಏರುವ ಏಣಿ, ಕಾಳುಮೆಣಸು ಬಿಡಿಸುವ ಯಂತ್ರ, ಶುದ್ಧೀಕರಿಸುವ ಯಂತ್ರಗಳ ಮಳಿಗೆ, ಆಯುರ್ವೇದ ಮಳಿಗೆ, ಕಾಳುಮೆಣಸು ಬೆಳೆಯುವ ಸಿಮೆಂಟ್ ಕಂಬಗಳ ಮಳಿಗೆ, ಮಂಗಗಳ ಹಾವಳಿ ತಡೆಗಟ್ಟುವ ಸಲಕರಣೆಯ ಮಳಿಗೆ, ಹನಿನೀರಾವರಿ ವ್ಯವಸ್ಥೆಯ ಮಳಿಗೆ, ಬ್ಯಾಂಕ್‌ಗಳ ಮಳಿಗೆ, ಸಾವಯವ ಐಸ್ಕ್ರೀಂ ಮಳಿಗೆಗಳಿದ್ದವು.
ಬೇಡಿಕೆಗಿಂತ ಕಡಿಮೆ ಉತ್ಪಾದನೆ....
ಅಖಿಲ ಭಾರತ ಕಾಳುಮೆಣಸು ಬೆಳೆಗಾರರ ಸಂಘದ ವಿಜ್ಞಾನಿ ವೇಣುಗೋಪಾಲ್ ಅವರು, ಸಮಗ್ರ ಕಾಳುಮೆಣಸು ಬೆಳೆಯುವ ಮಾಹಿತಿ ಮತ್ತು ಸಂರಕ್ಷಣಾ ವಿಧಾನದ ಕುರಿತು ವಿಷಯ ಮಂಡಿಸಿದರು.
ಕಾಳುಮೆಣಸಿಗೆ ಜಾಗತಿಕವಾಗಿ ಭಾರಿ ಬೇಡಿಕೆ ಇದೆ. ಈಗ 5 ಲಕ್ಷ ಟನ್ ಮಾತ್ರ ಉತ್ಪಾದನೆಯಾಗುತ್ತಿದೆ. ಇದರಲ್ಲಿ 1.05 ಲಕ್ಷ ಟನ್ ಮಾತ್ರ ಭಾರತದಲ್ಲಿ ಉತ್ಪಾದನೆಯಾಗುತ್ತಿದೆ. 89 ಸಾವಿರ ಟನ್ ಕರ್ಕಾಟಕದಲ್ಲಿ ಉತ್ಪಾದನೆಯಾಗುತ್ತಿದೆ. 100 ಕೆ.ಜಿ. ಕಾಳುಮೆಣಸು ಕೋಲು ಮಾಡಿದರೆ ಗರಿಷ್ಠ ಶೇ 37ವರೆಗೆ ಒಣ ಕಾಳುಮೆಣಸು ಪಡೆಯಬಹುದು. ಕಾಳುಮೆಣಸು ಕೃಷಿಯ ವ್ಯವಸ್ಥಿತ ನಿರ್ವಹಣೆ ದೊಡ್ಡ ಲಾಭವನ್ನು ತರುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.