ಮೂಡುಬಿದಿರೆ: ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಸಮೀಕ್ಷಕರು ಮಂಗಳವಾರ ಶಾಸಕ ಉಮಾನಾಥ ಎ.ಕೋಟ್ಯಾನ್, ತಹಶೀಲ್ದಾರ್ ಶ್ರೀಧರ್ ಮುಂದಲಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಅವರಿಗೆ ಮನವಿ ಸಲ್ಲಿಸಿದರು.
ಸಮೀಕ್ಷಕರಾಗಿ ಆಯ್ಕೆಯಾಗಿರುವ ಪ್ರಾಥಮಿಕ ಶಾಲಾ ಶಿಕ್ಷಕರು ಹಲವಾರು ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈಗಾಗಲೇ ಏಪ್ರಿಲ್‌ನಲ್ಲಿ ನಡೆಸಿದ ಒಳಮೀಸಲಾತಿಯ ಭತ್ಯೆ ಮತ್ತು ಹಾಜರಾತಿ ಪತ್ರವನ್ನು ನೀಡಬೇಕು. ಗಣತಿಗೆ ನೀಡಿರುವ ಆ್ಯಪ್‌ನಲ್ಲಿ ಎದುರಿಸುತ್ತಿರುವ ತಾಂತ್ರಿಕ ದೋಷಗಳನ್ನು ನಿವಾರಿಸಬೇಕು, ಶಿಕ್ಷಕರಿಗೆ ಅವರ ಕ್ಲಸ್ಟರ್‌ನೊಳಗೆ ಗಣತಿ ಕಾರ್ಯಕ್ಕೆ ನೇಮಿಸಬೇಕು. 15 ದಿನಗಳೊಳಗೆ 200 ಮನೆಗಳ ಸಮೀಕ್ಷೆ ಪೂರ್ಣಗೊಳಿಸುವುದು ಅಸಾಧ್ಯ. ಆದ್ದರಿಂದ ಮನೆಗಳ ಸಂಖ್ಯೆಯನ್ನು ಗರಿಷ್ಠ 50ಕ್ಕೆ ಸೀಮಿತಗೊಳಿಸುವುದು, ಸ್ಥಳ ಬದಲಾವಣೆ ಮಾಡುವುದು, ತರಬೇತಿಯ ಅವಧಿಯಲ್ಲಿ ಹಾಜರಿದ್ದು, ಇದೀಗ ಸಮೀಕ್ಷೆಗೆ ಕೈಬಿಟ್ಟಿರುವ ಶಿಕ್ಷಕರನ್ನು ಕೂಡಲೇ ಸೇರ್ಪಡೆಗೊಳಿಸಿ ಗಣತಿ ಕಾರ್ಯಕ್ಕೆ ಸಹಕರಿಸಲು ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಪ್ರತಿಕ್ರಿಯಿಸಿ, ಒಂದು ಶಾಲೆಯಲ್ಲಿ ಎರಡರಿಂದ ಮೂರು ಜನ ಶಿಕ್ಷಕರಿದ್ದು, ಆ ವ್ಯಾಪ್ತಿಯಲ್ಲಿ ಒಂದೇ ಬ್ಲಾಕ್ ಹೊಂದಿದ್ದರೆ, ಒಬ್ಬ ಶಿಕ್ಷಕರನ್ನು ಮಾತ್ರ ಆ ಪ್ರದೇಶಕ್ಕೆ ನೇಮಿಸಿ, ಉಳಿದ ಶಿಕ್ಷಕರನ್ನು ಬೇರೆ ಬೇರೆ ಪ್ರದೇಶಗಳಿಗೆ ನಿಯೋಜಿಸಲಾಗಿದೆ. ಬೇರೆ ವ್ಯಾಪ್ತಿಯ ಪ್ರದೇಶದ ಸಮೀಕ್ಷೆಗೆ ಉದ್ದೇಶಪೂರ್ವಕವಾಗಿ ನಿಯೋಜಿಸಿಲ್ಲ. ಆದರೆ ನಿಮ್ಮ ವ್ಯಾಪ್ತಿಯ ಪ್ರದೇಶ ದೂರವಿದ್ದರೆ ಅದನ್ನು ಸರಿಪಡಿಸಲಾಗುವುದು. ವಯಸ್ಸಾದವರಿಗೆ, ಆರೋಗ್ಯ ಸಮಸ್ಯೆ ಇದ್ದವರಿಗೆ ಯಾರಿಗೂ ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಧಾಕರ್, ಕಾರ್ಯದರ್ಶಿ ಮೆಲ್ವೀನ್, ಕೋಶಾಧಿಕಾರಿ ಅರ್ಚನಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೊರೆಸ್ವಾಮಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮನವಿ ಸ್ವೀಕರಿಸಿದ ಶಾಸಕ ಉಮಾನಾಥ ಕೋಟ್ಯಾನ್, ಜಾತಿವಾರು ಗಣತಿಯಲ್ಲಿನ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.