ಮಂಗಳೂರು: ‘ಶಿವಾಜಿ ಕುರಿತು ಪೂರ್ತಿಯಾಗಿ ತಿಳಿದುಕೊಂಡರೆ, ಆತ ಅನ್ಯಧರ್ಮ ಸಹಿಷ್ಣು ಎನ್ನುವುದು ಮನವರಿಕೆಯಾಗುತ್ತದೆ. ಶಿವಾಜಿ ಬಗ್ಗೆ ಗೊಂದಲ ಇರುವವರು ನಮ್ಮ ತಂಡದ ಮುಂದಿನ ಚಾರಿತ್ರಿಕ ನಾಟಕ ‘ಶಿವಾಜಿ’ಯನ್ನು ನೋಡಬೇಕು. ಆಗ ಅವರ ಅಭಿಪ್ರಾಯ ಬದಲಾಗುತ್ತದೆ’ ಎಂದು ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಶಿವಾಜಿ ಹಿಂದೂ ಧರ್ಮದ ರಕ್ಷಕ ನಿಜ. ಅಂದ ಮಾತ್ರಕ್ಕೆ ಆತ ಬೇರೆ ಧರ್ಮಗಳನ್ನು ದ್ವೇಷಿಸುತ್ತಿರಲಿಲ್ಲ. ಇತಿಹಾಸವನ್ನು ತಿರುಚಿ ಕೆಲವರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದರು.
‘ಶಿವಾಜಿ ನಾಟಕ ಕಟೀಲು ಕ್ಷೇತ್ರದಲ್ಲಿ ಇದೇ 6 ರಂದು ಪ್ರಥಮ ಬಾರಿ ಪ್ರದರ್ಶನಗೊಳ್ಳಲಿದೆ. ಇದೇ 13 ರಂದು ಪುರಭವನದಲ್ಲಿ ಪ್ರದರ್ಶನ ಏರ್ಪಡಿಸಿದ್ದೇವೆ. ನಾಟಕದ ಶೀರ್ಷಿಕೆ ಗೀತೆ ಕನ್ನಡದಲ್ಲಿದೆ. ಸಂಭಾಷಣೆ ತುಳುವಿನಲ್ಲಿ ಇದೆ. ಅಲ್ಲಲ್ಲಿ ಹಿಂದಿ ಭಾಷೆಯನ್ನು ಬಳಸಿದ್ದೇವೆ. ಶಶಿರಾಜ್ ಕಾವೂರು ಕಥೆ ರಚಿಸಿದ್ದಾರೆ. ಒಟ್ಟು 3 ಹಾಡುಗಳಿದ್ದು, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ’ ಎಂದರು.
‘ಶಿವದೂತೆ ಗುಳಿಗೆ ನಾಟಕದಲ್ಲಿ ಗುಳಿಗನ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಪ್ರೀತೇಶ್ ಬಳ್ಳಾಲ್‌ಬಾಗ್ ಶಿವಾಜಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಪ್ರಮೋದ್ ಮರವಂತೆ, ಶಶಿರಾಜ್ ಕಾವೂರು ಸಾಹಿತ್ಯ ಬರೆದಿದ್ದಾರೆ. ಶಿವಾಜಿ ಪಾತ್ರಕ್ಕೆ ನಟ ಪೃಥ್ವಿ ಅಂಬರ್, ಗುರು ದಾದಾಜಿ ಪಾತ್ರಕ್ಕೆ ನವೀನ್ ಡಿ.ಪಡೀಲ್ ಧ್ವನಿ ನೀಡಿದ್ದಾರೆ. ಪಟ್ಲ ಸತೀಶ್ ಶೆಟ್ಟಿ, ದೇವದಾಸ್ ಕಾಪಿಕಾಡ್ ಅವರು ಹಾಡುಗಳನ್ನು ಹಾಡಿದ್ದಾರೆ’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಣಿಕಾಂತ್ ಕದ್ರಿ, ಶಶಿರಾಜ್ ಕಾವೂರು, ಎ.ಕೆ. ವಿಜಯ್, ಪ್ರೀತೇಶ್ ಬಳ್ಳಾಲ್‌ಬಾಗ್ ಭಾಗವಹಿಸಿದ್ದರು.
‘ವಾಸ್ತವ ತೆರೆದಿರುವ ಪ್ರಯತ್ನ’
‘ಎಲ್ಲ ಜಾತಿ ಧರ್ಮಗಳ ಜನರನ್ನು ಸಮಾನವಾಗಿ ಕಂಡಿದ್ದ ಶಿವಾಜಿಗೆ ಅವರೇ ಸಾಟಿ. ಈ ಸಾಮ್ರಾಟನ ಕುರಿತು ದರೋಡೆಕೋರ ಅನ್ಯಧರ್ಮದ ದ್ವೇಷಿ ಎಂದೆಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಬರೆಯುತ್ತಾರೆ. ಶಿವಾಜಿ ಅವರ ಪಟ್ಟಾಭಿಷೇಕ ಅವರ ಸಾಮ್ರಾಜ್ಯ ಮತ್ತು ಆಡಳಿತದ ಕುರಿತ ವಾಸ್ತವವನ್ನು ನಾಟಕದಲ್ಲಿ ತೆರೆದಿಡುವ ಪ್ರಯತ್ನ ಮಾಡಿದ್ದೇವೆ’ ಎಂದು ಕತೆ ಬರೆದಿರುವ ಶಶಿರಾಜ್ ರಾವ್ ಕಾವೂರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.