
ಮಂಗಳೂರಿನಲ್ಲಿ ಗುರುವಾರ ಏರ್ಪಡಿಸಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಶಿವಾಜಿ ಭಾವಚಿತ್ರಕ್ಕೆ ಹೂಗಳನ್ನು ಅರ್ಪಿಸಿದರು. ಎ.ವಿ.ಸುರೇಶ್ ರಾವ್ ಕರ್ಮೋರೆ, ಟಿ.ಎಂ.ಶಾಹೀದ್ ತೆಕ್ಕಿಲ, ಮಮತಾ ಡಿ.ಎಸ್.ಗಟ್ಟಿ, ಸನ್ಮತಿ ಕುಮಾರ್, ರಾಜೇಶ್ ಜಿ., ಸವಿತಾ ನಾಗೇಶ್ ಪಾಟೀಲ, ಭಾಗ್ಯಲಕ್ಷ್ಮಿ ಸುಧಾಕರ್ ಸಿಂಧ್ಯಾ ಮತ್ತಿತರರು ಭಾಗವಹಿಸಿದ್ದರು
ಪ್ರಜಾವಾಣಿ ಚಿತ್ರ
ಮಂಗಳೂರು: ‘ಸ್ವಾಭಿಮಾನ, ಶೌರ್ಯ ಮತ್ತು ಬುದ್ದಿವಂತಿಕೆಗೆ ಹೆಸರಾಗಿದ್ದ ಶಿವಾಜಿ ಮಹಾರಾಜರು ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಪ್ರತಿಪಾದಕರಾಗಿದ್ದರು. ರಾಷ್ಟ್ರದ ಸ್ಥಿರತೆ, ಭದ್ರತೆಯ ಜೊತೆಗೆ ಎಲ್ಲ ಧರ್ಮದವರ ಏಕತೆಗೆ ಮಹತ್ವ ನೀಡಿದ್ದರು’ ಎಂದು ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಉಪನ್ಯಾಸಕ ಸನ್ಮತಿ ಕುಮಾರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ (ಕೆಕೆಎಂಪಿ) ಹಾಗೂ ಆರ್ಯ ಯಾನೆ ಮರಾಠ ಸಮಾಜ ಸಂಘದ ಮಂಗಳೂರು ಘಟಕದ ಆಶ್ರಯದಲ್ಲಿ ಇಲ್ಲಿ ಗುರುವಾರ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ಯಾವುದೇ ಕಾರಣಕ್ಕೂ ಮಸೀದಿಗಳಿಗೆ ಹಾನಿ ಮಾಡಬಾರದು ಎಂದು ಶಿವಾಜಿ ತನ್ನ ಸೈನಿಕರಿಗೆ ಸೂಚನೆ ನೀಡಿದ್ದರು. ಪರಸ್ತ್ರೀ ರಕ್ಷಣೆ ತನ್ನ ಕರ್ತವ್ಯ ಎಂದು ಭಾವಿಸಿದ್ದ ಅವರು, ದಾಳಿ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರಿಗೆ ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು ಎಂದು ಕಟ್ಟಪ್ಪಣೆ ಮಾಡಿದ್ದರು. ದಾಳಿ ವೇಳೆ ಕುರಾನ್ ಪ್ರತಿ ಸಿಕ್ಕಾಗ ಗೌರವದಿಂದ ಕಂಡಿದ್ದರು. ಅಷ್ಟಪ್ರಧಾನರು ಎಂಬ ಮಂತ್ರಿಗಳನ್ನು ಹೊಂದಿದ್ದ ಅವರು ಆಡಳಿತ ವ್ಯವಸ್ಥೆ, ತೆರಿಗೆ ಪದ್ಧತಿ ಜನರ ಆರ್ಥಿಕ ಅಭಿವೃದ್ಧಿಗಾಗಿ ಅನೇಕ ಸುಧಾರಣೆ ತಂದಿದ್ದರು’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಾಹೀದ್ ತೆಕ್ಕಿಲ, ‘ಶಿವಾಜಿ ಮಹಾರಾಜರು ಒಳ್ಳೆಯ ಆಡಳಿತಗಾರ. ಅವರನ್ನು ಕೋಮುವಾದಿ, ಮುಸ್ಲಿಂ ವಿರೋಧಿ ಎಂದು ಬಿಂಬಿಸಲು ಕೆಲವರು ಯತ್ನಿಸುತ್ತಿದ್ದಾರೆ. ಅವರ ಆಡಳಿತದಲ್ಲಿ ಕೋಮುಸೌಹಾರ್ದಕ್ಕೆ ಒತ್ತು ನೀಡಿರುವುದು ಐತಿಹಾಸಿಕ ಸತ್ಯ. ಅವರ ಸೇನೆಯಲ್ಲಿ ಮುಸ್ಲಿಂ ಕಟ್ಟಾಳುಗಳೂ ಇದ್ದರು. ಮೊಗಲರ ಜೊತೆ ಅವರು ನಡೆಸಿದ ಯುದ್ಧಗಳು ರಾಜ– ರಾಜರ ನಡುವಿನ ಹೋರಾಟವಷ್ಟೇ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, 'ಶಿವಾಜಿಯವರ ಇತಿಹಾಸವನ್ನು ತಿರುಚುವವರು ಅನೇಕರಿದ್ದಾರೆ. ನಿಜವಾದ ಇತಿಹಾಸ ಓದಿದರೆ ಅವರ ಆದರ್ಶದ ಬದುಕಿನ ಮಹತ್ವ ಗೊತ್ತಾಗುತ್ತದೆ. ಮಹಿಳೆಯರನ್ನು ಅವರು ಭಾರಿ ಆದರದಿಂದ ಕಾಣುವುದಕ್ಕೆ ಅವರ ತಾಯಿ ಜೀಜಾಬಾಯಿ ಅವರನ್ನು ಬೆಳೆಸಿದ ರೀತಿ ಕಾರಣ. ಅವರ ಜಯಂತಿಯನ್ನು ಕಾಲೇಜುಗಳಲ್ಲಿ ಆಯೋಜಿಸಿದರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತದೆ’ ಎಂದರು.
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎ.ವಿ.ಸುರೇಶ್ ರಾವ್ ಕರ್ಮೋರೆ, ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ ಸುಧಾಕರ್ ಸಿಂಧ್ಯಾ, ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ನಾಗೇಶ್ ಪಾಟೀಲ, ಆರ್ಯ ಯಾನೆ ಮರಾಠ ಸಂಘದ ಅಧ್ಯಕ್ಷ ಮೋಹನ್ ರಾವ್ ಬೋಂಸ್ಲೆ, ಉಪಾಧ್ಯಕ್ಷ ಗಿರೀಶ್ ಬೋಂಸ್ಲೆ, ಕಾರ್ಯದರ್ಶಿ ನಿಖಿಲ್ ಜಾಧವ್, ಚಂದ್ರಶೇಖರ್ ಎ.ಬಿ. ಭಾಗವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ಗೋಪಾಲ ಧನ್ಯವಾದ ಸಮರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.