ADVERTISEMENT

ಕೋವಿಡ್‌–19 ನಿಯಂತ್ರಣ: ವರ್ತಕರು, ಗ್ರಾಹಕರಲ್ಲಿ ಗೊಂದಲ

ದಿಢೀರ್ ಬದಲಾದ ಸರ್ಕಾರದ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 4:48 IST
Last Updated 23 ಏಪ್ರಿಲ್ 2021, 4:48 IST
ಮಂಗಳೂರಿನ ಮಾರುಕಟ್ಟೆಯಲ್ಲಿ ಗುರುವಾರ ಸಂಜೆ ಪೊಲೀಸರು ಅಂಗಡಿಗಳನ್ನು ಮುಚ್ಚಿಸಿದರು.
ಮಂಗಳೂರಿನ ಮಾರುಕಟ್ಟೆಯಲ್ಲಿ ಗುರುವಾರ ಸಂಜೆ ಪೊಲೀಸರು ಅಂಗಡಿಗಳನ್ನು ಮುಚ್ಚಿಸಿದರು.   

ಮಂಗಳೂರು: ಕೋವಿಡ್–19 ನಿಯಂತ್ರಣಕ್ಕಾಗಿ ಸರ್ಕಾರ ಗುರುವಾರ ಹೊರಡಿಸಿದ ಪರಿಷ್ಕೃತ ಆದೇಶದಿಂದಾಗಿ ನಗರದಲ್ಲಿ ವರ್ತಕರು, ಗ್ರಾಹಕರಲ್ಲಿ ಗೊಂದಲ ಉಂಟಾಯಿತು.

ರಾಜ್ಯ ಸರ್ಕಾರದ ಪರಿಷ್ಕೃತ ಆದೇಶದಂತೆ ಅಗತ್ಯ ಹಾಗೂ ತುರ್ತು ಸೇವೆಗಳಿಗೆ ಮಾತ್ರವೇ ಅವಕಾಶ ಕಲ್ಪಿ ಸಿದ್ದು, ನಗರದ ಪ್ರಮುಖ ಮಾರು ಕಟ್ಟೆ ಪ್ರದೇಶಗಳಲ್ಲಿ ಕೆಲವೆಡೆ ನಿರ್ಬಂಧಿ ಸಲಾದ ಅಂಗಡಿಗಳು ತೆರೆದಿದ್ದುದನ್ನು ಮಹಾನಗರ ಪಾಲಿಕೆ ಅಧಿಕಾರಿಗಳು, ಪೊಲೀಸರು ಮುಚ್ಚಿಸಿದರು.

ಬಟ್ಟೆಬರೆ, ಮೊಬೈಲ್ ಶಾಪ್‌ಗಳು, ಗಡಿಯಾರ ಮೊದಲಾದ ಅಂಗಡಿಗಳನ್ನು ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ಸೇರಿಕೊಂಡು ಮುಚ್ಚುವಂತೆ ಸೂಚಿಸಿದರು. ಈ ನಡುವೆ ಅಂಗಡಿಗಳ ಮಾಲೀಕರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು.

ADVERTISEMENT

ಸರ್ಕಾರದ ಪರಿಷ್ಕೃತ ಆದೇಶದಂತೆ ಪಡಿತರ ಅಂಗಡಿಗಳು, ತರಕಾರಿ, ಡೈರಿ ಸೇರಿದಂತೆ ದಿನಬಳಕೆಯ ಸಾಮಗ್ರಿಗಳ ಅಂಗಡಿಗಳಿಗೆ ಅವಕಾಶವಿದ್ದು, ಉಳಿದಂತೆ ಇತರ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಹೇಳಲಾಗಿದೆ.

ನಗರದ ಪ್ರಮುಖ ಮಾಲ್‌ಗಳಾದ ಫೋರಂ ಫಿಝಾ ಮಾಲ್ ಹಾಗೂ ಸಿಟಿ ಸೆಂಟರ್ ಮಾಲ್ (ಸ್ಪಾರ್ ಹೊರತುಪಡಿಸಿ)ಗಳು ಸ್ತಬ್ಧವಾಗಿವೆ. ಸರ್ಕಾರದ ಆದೇಶದ ಪ್ರಕಾರ ರೆಸ್ಟೊರೆಂಟ್‌ಗಳು ಕೂಡಾ ಗ್ರಾಹಕರ ಪ್ರವೇಶವನ್ನು ನಿರ್ಬಂಧಿಸಿದ್ದು, ಬಾಗಿಲ ಹೊರಗಡೆ ‘ಪಾರ್ಸೆಲ್ ಹಾಗೂ ಹೋಂ ಡೆಲಿವರಿಗೆ ನಮ್ಮ ಸೇವೆ ಇದೆ’ ಎಂಬ ಫಲಕವನ್ನು ಅಳವಡಿಸಿವೆ.

ಸಗಟು ತರಕಾರಿ, ಹಣ್ಣು, ಹೂವಿನ ಮಾರುಕಟ್ಟೆಗಳು ಕೋವಿಡ್ ಮಾರ್ಗಸೂಚಿ ಅನುಸರಿಸಿಕೊಂಡು ತೆರೆದ ಸ್ಥಳ, ಆಟದ ಮೈದಾನಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಸ್ಥಳಾಂತರ ಪ್ರಕ್ರಿಯೆಯನ್ನು ಏ.23ರೊಳಗೆ ಪೂರ್ಣಗೊಳಿಸಬೇಕು ಎಂದು ಪರಿಷ್ಕೃತ ಆದೇಶದಲ್ಲಿ ತಿಳಿಸಲಾಗಿದೆ.

ವಾರಾಂತ್ಯ ಬಸ್ ಇಲ್ಲ
ರಾಜ್ಯ ಸರ್ಕಾರ ಹೊರಡಿಸಿರುವ ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ಅಂದರೆ ಏ.24 ಮತ್ತು 25ರಂದು ಜಿಲ್ಲೆ ಯಾದ್ಯಂತ ಖಾಸಗಿ ಸಿಟಿ ಮತ್ತು ಸರ್ವಿಸ್ ಬಸ್‌ಗಳು ಸಂಚಾರ ಸ್ಥಗಿತಗೊಳಿಸಲಿದೆ ಎಂದು ಬಸ್ ಮಾಲೀಕರ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ಏ.23ರ ರಾತ್ರಿ 9ರಿಂದ ಏ.26ರ ಬೆಳಿಗ್ಗೆ 6 ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂ ಹೇರಲಾಗಿದೆ. ಈ ಅವಧಿಯಲ್ಲಿ ತುರ್ತು ಸೇವೆಯ ಹೊರತು ಇತರ ಯಾವುದೇ ಕಾರ್ಯಾಚರಣೆಗೆ ಅವಕಾಶವಿ. ಹಾಗಾಗಿ ಏ.24 ಮತ್ತು 25ರಂದು ಬಸ್ ಬಂದ್ ಆಗಲಿವೆ.

‘ಏ.24, 25ರಂದು ಕೋವಿಡ್ ವಾರಾಂತ್ಯದ ಕರ್ಫ್ಯೂ ಹೇರಿದ ಕಾರಣ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ’ ಎಂದು ದ.ಕ.ಜಿಲ್ಲಾ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.

ಎಪಿಎಂಸಿ ಬಂದ್‌: ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ನಗರದ ಎಪಿಎಂಸಿಯಲ್ಲಿ ಏ.24, 25 ಮತ್ತು ಮೇ 1, 2ರಂದು ಎಲ್ಲ ರೀತಿಯ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದು, ಮಾರು ಕಟ್ಟೆಗೆ ರಜಾದಿನ ಎಂದು ಎಪಿಎಂಸಿ ಕಾರ್ಯದರ್ಶಿ ಘೋಷಿಸಿದ್ದಾರೆ.

ಮಾರ್ಗಸೂಚಿ ಪಾಲಿಸಿ: ಬಿಷಪ್‌
ಕೋವಿಡ್–19 ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಏ. 21 ರಿಂದ ಮೇ 4 ರವರೆಗೆ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿ ಮಾಡಿದ್ದು, ಈ ಹಿನ್ನೆಲೆ ಕೆಥೊಲಿಕ್‌ನ ಪೂಜಾ ಸ್ಥಳಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಮಂಗಳೂರು ಬಿಷಪ್‌ ರೆ.ಡಾ. ಪೀಟರ್ ಪಾಲ್ ಸಲ್ಡಾನ ತಿಳಿಸಿದ್ದಾರೆ.

ಮಂಗಳೂರು ಧರ್ಮ ಪ್ರಾಂತ್ಯದ ವ್ಯಾಪ್ತಿಯಲ್ಲಿ ಬರುವ ಚರ್ಚ್‌ ಧರ್ಮಗುರುಗಳಿಗೆ ಬರೆದ ಪತ್ರದಲ್ಲಿ ‘ನಮ್ಮ ಪ್ರಾರ್ಥನಾ ಸ್ಥಳಗಳಿಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳು ಅನ್ವಯ ಆಗುವುದರಿಂದ ಅದನ್ನು ದಯವಿಟ್ಟು ಅನುಸರಿಸಿ’ ಎಂದು ತಿಳಿಸಿದ್ದಾರೆ.

ಏ.21 ರಿಂದ ಮೇ 4ರವರೆಗೆ ಭಕ್ತರಿಗೆ ಎಲ್ಲ ಸಾರ್ವಜನಿಕ ಧಾರ್ಮಿಕ ಪೂಜಾ ಸ್ಥಳಗಳನ್ನು ಮುಚ್ಚಲಾಗಿದ್ದು, ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳಿಂದ ಅನುಮತಿ ಪಡೆದ ನಂತರ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಚರ್ಚ್ ಒಳಗೆ ವಿವಾಹ ಮತ್ತು ಅಂತ್ಯಕ್ರಿಯೆಯ ಸೇವೆಗಳನ್ನು ನಡೆಸಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.