ADVERTISEMENT

ಕರಾವಳಿ ಅಭಿವೃದ್ಧಿ ಮಂಡಳಿಗೆ ಬೇಕಿದೆ ‘ಹಣ ಬಲ‘

ಮಂಡಳಿ ರಚನೆಯಾದರೂ ಬಿಡುಗಡೆಯಾಗಿಲ್ಲ ಬಿಡಿಗಾಸು, ಕನಿಷ್ಠ ₹ 500 ಕೋಟಿ ಅನುದಾನದ ನಿರೀಕ್ಷೆಯಲ್ಲಿ ಕೆಡಿಬಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 8:35 IST
Last Updated 16 ಜನವರಿ 2026, 8:35 IST
   

ಮಂಗಳೂರು: ಕರಾವಳಿಯ ಅಭಿವೃದ್ಧಿಗೆ ಇಂಬು ತುಂಬುವ ಉದ್ದೇಶದಿಂದ ಸ್ಥಾಪನೆಯಾದ ‘ಕರಾವಳಿ ಅಭಿವೃದ್ಧಿಮ೦ಡಳಿ’ (ಕೆಡಿಬಿ) ಸದ್ಯ ಖಾಲಿ ಬಿಂದಿಗೆ. 2023ರ ಕರಾವಳಿ ಅಭಿವೃದ್ಧಿ ಮ೦ಡಳಿ ಕಾಯ್ದೆಯ ಬಲದೊಂದಿಗೆ ಈ ಮಂಡಳಿ ರೂಪುಗೊಂಡಿದ್ದರೂ, ಅದಕ್ಕೆ ತಕ್ಕಂತೆ ಅನುದಾನವನ್ನು ಸರ್ಕಾರ ಒದಗಿಸದಿರುವುದರಿಂದ ಇದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕರಾವಳಿಯ ಮೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಈ ಮಂಡಳಿ 2026–27ನೇ ಸಾಲಿನ ಬಜೆಟ್ ಮೇಲೆ ದೊಡ್ಡ ನಿರೀಕ್ಷೆಯನ್ನೇ ಇಟ್ಟುಕೊಂಡಿದೆ.

ಕರಾವಳಿ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿ, ಅದಕ್ಕೆ ಐದು ವರ್ಷಗಳಲ್ಲಿ ₹2500 ಕೋಟಿ ಅನುದಾನ ಒದಗಿಸುವುದಾಗಿ ಕಾಂಗ್ರೆಸ್‌ ಪಕ್ಷವು ಕರಾವಳಿಗೆ ಪ್ರತ್ಯೇಕವಾಗಿ ರೂಪಿಸಿದ್ದ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕರಾವಳಿ ಅಭಿವೃದ್ಧಿ ಮಂಡಳಿಯ ರಚನೆ ಆಗಿದೆ. ಆದರೆ, ಭರವಸೆ ನೀಡಿದ ಪ್ರಕಾರ ಮಂಡಳಿಗೆ ಬಿಡಿಗಾಸೂ ಬಿಡುಗಡೆ ಆಗಿಲ್ಲ. ಈ ಹಿಂದೆ ಜಾರಿಯಲ್ಲಿದ್ದ ‘ಕರಾವಳಿ ಅಭಿವೃದ್ಧಿ ಪ್ರಾಧಿಕಾರ’ಕ್ಕೆ ಬಿಡುಗಡೆಯಾದ ಅನುದಾನದಲ್ಲೇ ಮಂಡಳಿಯ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗಲಾಗುತ್ತಿದೆ.  

ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ ವಾರ್ಷಿಕ ₹ 5 ಸಾವಿರ ಕೋಟಿ ಅನುದಾನವನ್ನು ಪ್ರತ್ಯೇಕವಾಗಿ ಒದಗಿಸುವಂತೆ ಕರಾವಳಿ ಅಭಿವೃದ್ಧಿ ಮಂಡಳಿಗೂ ಬಜೆಟ್‌ನಲ್ಲೇ ಅನುದಾನ ಕಾಯ್ದಿರಿಸಬೇಕು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಚಟುವಟಿಕೆ ಹಮ್ಮಿಕೊಳ್ಳಲು ವಾರ್ಷಿಕ ಕನಿಷ್ಠ ₹ 500 ಕೋಟಿ ಅನುದಾನವಾದರೂ ಸಿಗಬೇಕು ಎಂಬ ನಿರೀಕ್ಷೆ ಕೆಡಿಬಿಯದು. 

ADVERTISEMENT

‘ಕರಾವಳಿಯಲ್ಲಿ ಸುಸ್ಥಿರ ಪರಿಸರ ಪ್ರವಾಸೋದ್ಯಮ, ಮೀನುಗಾರಿಗೆ ಹಾಗೂ ಅದಕ್ಕೆ ಪೂರಕವಾಗಿ ರಸ್ತೆ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸುವುದು, ಜಲಸಂಪನ್ಮೂಲ ಸಂರಕ್ಷಣೆ ಮೊದಲಾದ  ಪ್ರಾಥಮಿಕ ಗುರಿಗಳನ್ನು ಮಂಡಳಿಯು ಹೊಂದಿದೆ. 340 ಕಿ.ಮೀ ಉದ್ದದ ಕಡಲ ಕಿನಾರೆಯನ್ನು ಹೊಂದಿದ್ದರೂ ನಮ್ಮ ರಾಜ್ಯವು ಅದನ್ನು ಪ್ರವಾಸೋದ್ಯಮಕ್ಕಾಗಿ ದುಡಿಸಿಕೊಂಡಿಲ್ಲ. ಇಲ್ಲಿನ ಕರಾವಳಿಯುದ್ದಕ್ಕೂ ಇರುವ ಅಳಿವೆಗಳು, ಕಾಂಡ್ಲಾ ಪ್ರದೇಶಗಳು, ಹಿನ್ನೀರಿನ ಪ್ರದೇಶಗಳು, ಕುದ್ರು (ದ್ವೀಪ )ಗಳನ್ನು ಪ್ರವಾಸಿ ಚಟುವಟಿಕೆಗಾಗಿ ಬಳಸಿಕೊಳ್ಳಲು ಹೇರಳ ಅವಕಾಶಗಳಿವೆ. ಇದಕ್ಕಾಗಿ ಅನೇಕ ಮೂಲಸೌಕರ್ಯಗಳನ್ನು ರೂಪಿಸಬೇಕಿದೆ. ಇದಕ್ಕಾಗಿಯೇ ಮಂಡಳಿಯು ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸುತ್ತಿದೆ’ ಎನ್ನುತ್ತಾರೆ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್‌.

‘ಹಲವು ನದಿ ಹೊಳೆಗಳಲ್ಲಿ ಸಮುದ್ರದ ಉಪ್ಪು ನೀರು ತಡೆ ಅಣೆಕಟ್ಟೆಗಳು ಇನ್ನೂ ನಿರ್ಮಾಣವಾಗಿಲ್ಲ. ಹಲವೆಡೆ ಜೆಟ್ಟಿಗಳನ್ನು ನಿರ್ಮಿಸುವ ಅಗತ್ಯವೂ ಇದೆ. ಕಾಂಡ್ಲಾವನಗಳನ್ನು ಬೆಳೆಸಬೇಕಿದೆ. ಅಭಿವೃದ್ಧಿಪಡಿಸಬಹುದಾದ ಪ್ರವಾಸಿ ತಾಣಗಳನ್ನು ಸಂಪರ್ಕಿಸಲು ರಸ್ತೆ ಜಾಲದ ಅಗತ್ಯವೂ ಇದೆ. ಕಡಲ ಕಿನಾರೆಯುದ್ಧರೂ ಕನಿಷ್ಠ 18 ಅಡಿ ಅಗದ ರಸ್ತೆಯನ್ನು ನಿರ್ಮಿಸಬೇಕಿದೆ. ಇಂತಹ ಹತ್ತು ಹಲವಾರು ಚಿಂತನೆಗಳು ಮಂಡಳಿಯ ಕಾರ್ಯ ಯೋಜನೆಯಲ್ಲಿವೆ’ ಎಂದು ಅವರು ವಿವರಿಸಿದರು.

ಮೀನುಗಾರಿಕೆ ಅಭಿವೃದ್ಧಿಗೂ ಮಂಡಳಿ ಅನೇಕ ಕಾರ್ಯಕ್ರಮಗಳನ್ನು ಹೊಂದಿದೆ. ಈ ಹಿಂದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೀನುಗಾರರಿಗೆ ಹಾಗೂ ಮೀನು ಮಾರಾಟಗಾರರಿಗೆ ಕೆಲವೊಂದು ಸವಲತ್ತು ನೀಡಲಾಗುತ್ತಿತ್ತು.  ಮೀನುಗಾರಿಕಾ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ನೆರವು ಒದಗಿಸಲಾಗಿತ್ತು. ಅಂತಹ ಕಾರ್ಯಕ್ರಮಗಳನ್ನು ಮುಂದುವರಿಸಬೇಕಿದೆ. ನೈರ್ಮಲ್ಯಯುಕ್ತ ಹಾಗೂ ಸುಸಜ್ಜಿತ ಮೀನು ಮಾರುಕಟ್ಟೆಗಳನ್ನು ಕರಾವಳಿಯಾದ್ಯಂತ ಹೊಂದಬೇಕಿದೆ’ ಎಂದು ಅವರು ತಿಳಿಸಿದರು. 

ಕರಾವಳಿಯಲ್ಲಿ ಈಚಿನ ವರ್ಷಗಳಲ್ಲಿ ಪಾತಾಳಕ್ಕೆ ಕುಸಿಯುತ್ತಿರುವ ಅಂತರ್ಜಲ ಮಟ್ಟವನ್ನು ಮತ್ತೆ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಮಂಡಳಿಯು ಜಲ ಸಂಪನ್ಮೂಲ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸುತ್ತಿದೆ. ಬಾವಿ, ಕೆರೆಗಳ ಅಭಿವೃದ್ಧಿ, ಕಿಂಡಿ ಅಣೆಕಟ್ಟುಗಳನ್ನು ಅಭಿವೃದ್ಧಿ ಇದರಲ್ಲಿ ಸೇರಿದೆ. 

ಕರಾವಳಿ ಜಿಲ್ಲೆಗಳ ಮಲೆನಾಡು ಪ್ರದೇಶಗಳ ಕೆಲ ಕುಗ್ರಾಮಗಳಲ್ಲಿ ಜನರು ಕಾಲು ಸಂಕದ ವ್ಯವಸ್ಥೆಯೂ ಇಲ್ಲದೇ ಮಳೆಗಾಲದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಕಡೆ ಸುಸಜ್ಜಿತ ಕಾಲು ಸಂಕಗಳನ್ನು ನಿರ್ಮಿಸುವ ಚಿಂತನೆಯೂ ಮಂಡಳಿ ಮುಂದಿದೆ.   

‘ಮಂಡಳಿಯೇ ನೋಡಲ್ ಏಜೆನ್ಸಿಯಾಗಲಿ’

‘ಕರಾವಳಿ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರಗಳ ಕೆಲ ನಿಯಮಗಳು ಹಾಗೂ ಕರಾವಳಿ ನಿಯಂತ್ರಣ ವಲಯದ ನಿಯಮಾವಳಿಗಳು ತೊಡಕಾಗಿವೆ. ಪ್ರತ್ಯೇಕ ಪ್ರಾಧಿಕಾರಗಳಿಂದ ಅನುಮತಿ ಪಡೆಯುವುದಕ್ಕೆ ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಅನುಮತಿ  ನೀಡುವ ಪ್ರಕ್ರಿಯೆ ನಿಭಾಯಿಸಲು ಏಕಗವಾಕ್ಷಿ ವ್ಯವಸ್ಥೆ ರೂಪಿಸಬೇಕು. ಪ್ರವಾಸೋದ್ಯಮ ಉದ್ದೇಶಕ್ಕೆ ಪಡೆಯಬೇಕಾದ ಎಲ್ಲ ಯೋಜನೆಗಳಿಗೆ ಕರಾವಳಿ ಅಭಿವೃದ್ಧಿ ಮಂಡಳಿಯನ್ನು ನೋಡಲ್ ಏಜೆನ್ಸಿಯನ್ನಾಗಿ ಮಾಡಬೇಕು ಎಂಬುದು ನಮ್ಮ ಬೇಡಿಕೆ. ಅದಕ್ಕೆ ಸರ್ಕಾರವೂ ಒಲವು ತೋರಿದೆ’ ಎಂದು ಎಂ.ಎ.ಗಫೂರ್‌ ತಿಳಿಸಿದರು. 

ಕರಾವಳಿ ಅಭಿವೃದ್ಧಿಗಾಗಿ ಮಂಡಳಿಯು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತಿದ್ದೇವೆ. 2026–27ನೇ ಸಾಲಿನ ಬಜೆಟ್‌ನಲ್ಲಿ ಮಂಡಳಿಗೆ ಅಗತ್ಯ ಅನುದಾನ ಒದಗಿಸಬೇಕೆಂದು ಕೋರಿದ್ದೇವೆ
ಎಂ.ಎ.ಗಫೂರ್‌, ಅಧ್ಯಕ್ಷ, ಕರಾವಳಿ ಅಭಿವೃದ್ಧಿ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.