ADVERTISEMENT

ಅಡವಿ ಮಕ್ಕಳಿಗಾಗಿ ಅರಳಿದ ‘ಕಲಾಕೃತಿ’

ಕಾಫಿಹುಡಿಯ ವರ್ಣದಲ್ಲಿ ಅರಳಿದ ಪರಿಸರಸ್ನೇಹಿ ಕಲಾಕೃತಿಗಳು

ಸಂಧ್ಯಾ ಹೆಗಡೆ
Published 3 ಜೂನ್ 2022, 4:30 IST
Last Updated 3 ಜೂನ್ 2022, 4:30 IST
ಕಾಫಿ ಹುಡಿಯಲ್ಲಿ ಅರಳಿದ ಕಲಾಕೃತಿ
ಕಾಫಿ ಹುಡಿಯಲ್ಲಿ ಅರಳಿದ ಕಲಾಕೃತಿ   

ಮಂಗಳೂರು: ಬುಡಕಟ್ಟು ಮಕ್ಕಳ ಬಗೆಗಿನ ತುಡಿತ ಹೊಂದಿರುವ ಕಲಾವಿದೆಯೊಬ್ಬರು ಕುಂಚದ ಮೂಲಕ ಈ ಮಕ್ಕಳ ಬಾಳು ಬೆಳಗುವ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕಾಫಿ ಹುಡಿಯ ವರ್ಣದಲ್ಲಿ ಪ್ರಾಣಿ ಪ್ರಪಂಚ, ಪರಿಸರ ಜಗತ್ತನ್ನು ಸೃಷ್ಟಿಸಿ ಅವುಗಳಲ್ಲಿ ಅಡವಿ ಮಕ್ಕಳ ಸ್ಕೂಲ್‌ ಬ್ಯಾಗ್, ಕೊಡೆ, ಪುಸ್ತಕ, ಪೆನ್ಸಿಲ್‌ಗಳ ಕನಸನ್ನು ಬಿತ್ತಿದ್ದಾರೆ.

ಮಂಗಳೂರಿನ ಯುವ ಕಲಾವಿದೆ ಜೇನ್ ನೊರೋನ್ಹ ಅವರಿಗೆ ಚಿತ್ರಕಲೆ ನೆಚ್ಚಿನ ಪ್ರವೃತ್ತಿ. ಪೇಂಟಿಂಗ್‌ನಲ್ಲಿ ಪ್ರಪಂಚವನ್ನು ಸೃಷ್ಟಿಸುವ ಅವರು ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯನ್ನು ಪ್ರಕೃತಿಗೆ ಪೂರಕವಾಗಿ ಕಲಾಕೃತಿಗಳನ್ನು ರಚಿಸುವ ಮೂಲಕ ಆಚರಿಸಬೇಕು ಎಂದು ನಿರ್ಧರಿಸಿ, ಮೂರು ತಿಂಗಳುಗಳಿಂದ ಇದಕ್ಕೆ ಸಿದ್ಧತೆ ನಡೆಸಿದ್ದಾರೆ.

‘ನನಗೆ ಪರಿಸರ ಮತ್ತು ಕಾಡಿನ ಮಕ್ಕಳು ಇವೆರಡರ ಮೇಲೆ ವಿಶೇಷ ಮಮತೆ. ಅಭಿವೃದ್ಧಿಯ ಪರಿಣಾಮ ಪರಿಸರಕ್ಕೆ ಧಕ್ಕೆಯಾಗುತ್ತಿರುವ ಸಂದರ್ಭದಲ್ಲಿ ಪರಿಸರವನ್ನು ರಕ್ಷಿಸುವ ಅರಿವು ಮೂಡಿಸಬೇಕು ಎಂದು ಯೋಚಿಸಿದಾಗ, ಪರಿಸರ ಸ್ನೇಹಿಯಾಗಿರುವ ಕಾಫಿ ಹುಡಿಯನ್ನು ಬಣ್ಣವಾಗಿ ಬಳಸಿಕೊಳ್ಳುವ ಆಲೋಚನೆ ಹೊಳೆಯಿತು. ವಾಟರ್‌ ಕಲರ್‌ಗೆ ಪರ್ಯಾಯವಾಗಿ ಕಾಫಿಹುಡಿಯಲ್ಲಿ ಪೇಂಟಿಂಗ್ ಮಾಡಲು ಪ್ರಯತ್ನಿಸಿದೆ. ಸುಂದರ ಕಲಾಕೃತಿಗಳು ಮೂಡಿಬಂದವು’ ಎಂದು ಜೇನ್ ಅನುಭವ ಹಂಚಿಕೊಂಡರು.

ADVERTISEMENT

‘ಜಲಚರ, ಅರಣ್ಯ, ಪ್ರಾಣಿಗಳು ಈ ಮೂರು ಥೀಮ್ ಇಟ್ಟುಕೊಂಡು 20ಕ್ಕೂ ಹೆಚ್ಚು ಕಲಾಕೃತಿಗಳನ್ನು ರಚಿಸಿದ್ದೇನೆ. ವಿಶ್ವ ಪರಿಸರ ದಿನದಂದು (ಜೂ.5) ಇವುಗಳನ್ನು ಪ್ರದರ್ಶನಕ್ಕೆ ಇಟ್ಟು, ಇವುಗಳಿಂದ ಬರುವ ಆದಾಯವನ್ನು ಅಡವಿ ಮಕ್ಕಳ ಶಿಕ್ಷಣಕ್ಕೆ ನೀಡಲು ನಿರ್ಧರಿಸಿದ್ದೇನೆ. ನಗರದ ಮಕ್ಕಳು ಎಲ್ಲ ಸೌಲಭ್ಯಗಳನ್ನು ಹೊಂದಿರುತ್ತಾರೆ. ಆದರೆ, ಕಾಡಿನ ನಡುವೆ ಇರುವ ಮುಗ್ಧ ಪುಟಾಣಿಗಳಿಗೆ ಇವೆಲ್ಲ ಮರೀಚಿಕೆ. ಅವರು ಕೂಡ ನಗರದ ಮಕ್ಕಳಿಗೆ ಸಮಾನವಾಗಿ ಬೆಳೆಯಬೇಕು. ಇದಕ್ಕಾಗಿ ಶ್ರಮಿಸುತ್ತಿರುವ ‘ಸಹ್ಯಾದ್ರಿ ಸಂಚಯ’ ಸಂಸ್ಥೆಯೊಂದಿಗೆ ಕೈಜೋಡಿಸಿದ್ದೇನೆ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಅಂಕೋಲಾ, ಜೊಯಿಡಾ ಭಾಗದಲ್ಲಿ ಬುಡಕಟ್ಟು ವಿದ್ಯಾರ್ಥಿಗಳು ಹೆಚ್ಚಿರುವ 24 ಶಾಲೆಗಳಲ್ಲಿ ‘ವನಚೇತನಾ’ ಕಾರ್ಯಕ್ರಮದ ಅಡಿಯಲ್ಲಿ ಸ್ಕೂಲ್‌ಬ್ಯಾಗ್, ರೇನ್‌ಕೋಟ್, ಕೊಡೆ, ನೋಟ್‌ಬುಕ್ ಮೊದಲಾದ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಗುತ್ತದೆ. ಇದಕ್ಕೆ ಅನೇಕ ದಾನಿಗಳು ನೆರವಾಗಿದ್ದು, ಕಲಾವಿದೆ ಜೇನ್ ಕೂಡ ತಮ್ಮ ಕಲಾಕೃತಿಯ ಮಾರಾಟದಿಂದ ಬರುವ ಆದಾಯವನ್ನು ಇದಕ್ಕೆ ನೀಡಲಿದ್ದಾರೆ’ ಎಂದು ‘ಸಹ್ಯಾದ್ರಿ ಸಂಚಯ’ದ ಮುಖ್ಯಸ್ಥ ದಿನೇಶ್ ಹೊಳ್ಳ ಪ್ರತಿಕ್ರಿಯಿಸಿದರು.

‘ಹಸಿರಲೆಗಳು’ ಪ್ರದರ್ಶನ 5ಕ್ಕೆ
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂ.5ರಂದು ಸಂಜೆ 5 ಗಂಟೆಗೆ ನಗರದ ಬಳ್ಳಾಲ್‌ಬಾಗ್ ಪ್ರಸಾದ‌ ಆರ್ಟ್ ಗ್ಯಾಲರಿಯಲ್ಲಿ ನಡೆಯುವ ‘ಹಸಿರಲೆಗಳು’ ಕಾರ್ಯಕ್ರಮದಲ್ಲಿ ಕಲಾವಿದೆ ಜೇನ್‌ ನರೋನ್ಹ ಅವರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ದಿನೇಶ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.