
ಮಂಗಳೂರು: ದೇಶದ ಪ್ರತಿಷ್ಠಿತ ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಹಕಾರರಲ್ಲಿ ಒಬ್ಬರಾಗಿರುವ ಇಲ್ಲಿಯ ಎಸ್.ಎಲ್. ಶೇಟ್ ಜ್ಯುವೆಲರಿ ಮಾಲೀಕ, ನಾಣ್ಯಶಾಸ್ತ್ರಜ್ಞ ಎಂ.ಪ್ರಶಾಂತ್ ಶೇಟ್ ಅವರಿಂದ ದೇಶ–ವಿದೇಶಗಳ ಅಪರೂಪದ ನಾಣ್ಯ ಮತ್ತು ಅಂಚೆ ಚೀಟಿ, ಅಂಚೆ ಕಾರ್ಡ್‌ಗಳ ಪ್ರದರ್ಶನ ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ನ.22 ಮತ್ತು 23ರಂದು ನಡೆಯಲಿದೆ.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಪ್ರಶಾಂತ್ ಶೇಟ್ ಅವರು, 40 ದೇಶಗಳ 800 ನಾಣ್ಯ, 2 ಸಾವಿರ ಅಂಚೆಚೀಟಿ, 1500 ಅಂಚೆ ಕಾರ್ಡ್‌ಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. 7 ಸಾವಿರ ಚದುರ ಮೀಟರ್ ಪ್ರದೇಶದಲ್ಲಿ ಇವುಗಳ ಪ್ರದರ್ಶನ ನಡೆಯಲಿದೆ ಎಂದರು.
ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡುವ ಉದ್ದೇಶದೊಂದಿಗೆ ಈ ಪ್ರದರ್ಶನ ಮತ್ತು ವಿಚಾರ ಸಂಕಿರಣ ಆಯೋಜಿಸಲಾಗಿದೆ. ಗಂಗಾ ರಾಜವಂಶದ ಅತಿದೊಡ್ಡ ನಾಣ್ಯ ಸಂಗ್ರಹವು 310 ಪ್ರಬೇಧಗಳನ್ನು ಹೊಂದಿದೆ. ಒಬ್ಬ ವ್ಯಕ್ತಿ ಬಳಿ ಇರುವ ದೊಡ್ಡ ಸಂಗ್ರಹ ಇದಾಗಿದೆ. ಕದಂಬ ರಾಜವಂಶದ ಸಂಗ್ರಹ 65 ಹಾಗೂ 2100 ಬ್ರಿಟಿಷ್ ಇಂಡಿಯಾ ನಾಣ್ಯಗಳ ಸಂಗ್ರಹ ಪ್ರಶಾಂತ್ ಅವರ ಬಳಿ ಇದೆ ಎಂದು ಪ್ರದರ್ಶನದ ಸಲಹಾ ಸಮಿತಿಯ ಸುಧಾಕರರಾವ್ ಪೇಜಾವರ ತಿಳಿಸಿದರು.
ನವೆಂಬರ್ 22ರಂದು ಬೆಳಿಗ್ಗೆ 10ಕ್ಕೆ ಪ್ರಶಾಂತ್ ಅವರ ತಾಯಿ ಪದ್ಮಾ ಆರ್. ಶೇಟ್ ಅವರ ಉಪಸ್ಥಿತಿಯಲ್ಲಿ ಮಂಗಳೂರು ವಿವಿ ಕುಲಪತಿ ಪಿ.ಎಲ್. ಧರ್ಮ ಉದ್ಘಾಟಿಸುವರು. ಗೌರವ ಅತಿಥಿಗಳಾಗಿ ಪ್ರೊ.ಎಂ.ಎಸ್. ಮೂಡಿತ್ತಾಯ, ಅಮರಶ್ರೀ ಅಮರನಾಥ ಶೆಟ್ಟಿ, ಮರ್ಕಡ್ ಪ್ರಭಾಕರ ಕಾಮತ್ ಭಾಗವಹಿಸಲಿದ್ದಾರೆ. 23ರಂದು ತಜ್ಞರಿಂದ ವಿಚಾರ ಸಂಕಿರಣ ನಡೆಯಲಿದ್ದು, ಅಪರೂಪದ ಕರೆನ್ಸಿ ನೋಟುಗಳು ಮತ್ತು ಅವುಗಳ ಇತಿಹಾಸ ಕುರಿತು ವಿ.ಕೆ. ಜೈನ್, ಜಲಪಕ್ಷಿಗಳು ಮತ್ತು ಪಕ್ಷಿ ಪ್ರಭೇದಗಳ ಥೀಮ್ ಅಂಚೆ ಚೀಟಿ ಸಂಗ್ರಹ ಕುರಿತು ಡೇನಿಯಲ್ ಮೊಂಟೆರೊ, ಸಂಗ್ರಹಕ್ಕೆ ಮೌಲ್ಯವರ್ಧನೆ ಕುರಿತು ಜಯಪ್ರಕಾಶ್ ರಾವ್, ಪಶ್ಚಿಮ ಗಂಗಾ ರಾಜವಂಶದ ಚಿನ್ನದ ನಾಣ್ಯಗಳು ಕುರಿತು ಎಂ.ಪ್ರಶಾಂತ್ ಶೇಟ್, ಫಾಕ್ಲ್ಯಾಂಡ್ ದ್ವೀಪ ವಿಷಯದ ಕುರಿತು ಮರ್ಕಡ್ ಪ್ರಭಾಕರ ಕಾಮತ್ ವಿಚಾರ ಮಂಡಿಸಲಿದ್ದಾರೆ ಎಂದು ಸಲಹಾ ಸಮಿತಿಯ ಎಸ್.ಎಂ. ಶಿವಪ್ರಕಾಶ್ ತಿಳಿಸಿದರು.
ಎರಡು ದಿನ ಬೆಳಿಗ್ಗೆ 10ರಿಂದ ರಾತ್ರಿ 8ರ ವರೆಗೆ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇದೆ. 55 ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸಿ ಪ್ರದರ್ಶನ ವೀಕ್ಷಣೆಗೆ ಆಹ್ವಾನಿಸಲಾಗಿದೆ ಎಂದು ಅವರು ಹೇಳಿದರು.
ಸಮಿತಿಯ ವೆಂಕಟೇಶ ಬಾಳಿಗ ಮಾವಿನಕುರ್ವೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮಂಗಳೂರು: ದೇಶದ ಪ್ರತಿಷ್ಠಿತ ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಹಕಾರರಲ್ಲಿ ಒಬ್ಬರಾಗಿರುವ ಇಲ್ಲಿಯ ಎಸ್.ಎಲ್. ಶೇಟ್ ಜ್ಯುವೆಲರಿ ಮಾಲೀಕ ನಾಣ್ಯಶಾಸ್ತ್ರಜ್ಞ ಎಂ.ಪ್ರಶಾಂತ್ ಶೇಟ್ ಅವರಿಂದ ದೇಶ–ವಿದೇಶಗಳ ಅಪರೂಪದ ನಾಣ್ಯ ಮತ್ತು ಅಂಚೆ ಚೀಟಿ ಅಂಚೆ ಕಾರ್ಡ್‌ಗಳ ಪ್ರದರ್ಶನ ಇಲ್ಲಿಯ ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಇದೇ 22ಮತ್ತು 23ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.