ADVERTISEMENT

ಕಾಲೇಜಿಗೆ ಹೋಗಲು ಇಷ್ಟವಿಲ್ಲದ್ದಕ್ಕೆ ಅಪಹರಣದ ಕಥೆ ಹೆಣೆದಳು!

ತಾನೇ ಗಾಯ ಮಾಡಿಕೊಂಡು ಆಸ್ಪತ್ರೆ ದಾಖಲಾಗಿದ್ದ ಬಾಲಕಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 0:30 IST
Last Updated 11 ಫೆಬ್ರುವರಿ 2026, 0:30 IST
   

ಬೆಳ್ತಂಗಡಿ (ದಕ್ಷಿಣ ಕನ್ನಡ): ಕಾರಿನಲ್ಲಿ ಬಂದ ಮೂವರು ಮುಸುಕುಧಾರಿಗಳು ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿ, ಆಕೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು ಎನ್ನಲಾದ ಪ್ರಕರಣ ತಿರುವು ಪಡೆದುಕೊಂಡಿದೆ. ಕಾಲೇಜಿಗೆ ಹೋಗಲು ಇಷ್ಟವಿಲ್ಲದೇ ವಿದ್ಯಾರ್ಥಿನಿಯೇ ಹೆಣೆದ ಕಟ್ಟು ಕಥೆ ಇದು ಎಂಬುದು ತನಿಖೆಯಿಂದ ಬಯಲಾಗಿದೆ.

‘ಬೆಳ್ತಂಗಡಿ ನಗರದ ಸುದೇಮುಗೇರು ಎಂಬಲ್ಲಿ ಸೋಮವಾರ ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಆಮ್ನಿ ಕಾರಿನಲ್ಲಿ ಬಂದ ಮೂವರು ಮುಸುಕುಧಾರಿಗಳು ತಡೆದಿದ್ದರು. ನನ್ನನ್ನು ಅಪಹರಿಸಲು ಯತ್ನಿಸಿ ಚೂರಿಯಲ್ಲಿ ಕೈಗೆ ಇರಿದು ಪರಾರಿಯಾಗಿದ್ದರು’ ಎಂದು 16 ವರ್ಷದ ವಿದ್ಯಾರ್ಥಿನಿ ಆರೋಪಿಸಿದ್ದಳು.

ಕೈಯಲ್ಲಾಗಿದ್ದ ಗಾಯವನ್ನು ತೋರಿಸಿ ಆಕೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಸ್ಪತ್ರೆಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದ್ದರು.

ADVERTISEMENT

ಘಟನೆ ನಡೆದಿದೆ ಎನ್ನಲಾದ  ರಸ್ತೆಯುದ್ದಕ್ಕೂ ಸುತ್ತಾಡಿ ಹಲವರನ್ನು ವಿಚಾರಿಸಿದ್ದ ಪೊಲೀಸರು ಹಲವು ಮನೆ, ಅಂಗಡಿಗಳನ್ನು ಸಂಪರ್ಕಿಸಿ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಜಾಲಾಡಿದ್ದರು. ಯುವತಿ ಹೇಳಿದಂತೆ ಯಾವುದೇ ಆಮ್ನಿ ಕಾರು ಆ ರಸ್ತೆಯಲ್ಲಿ ಸಾಗಿದ್ದು ಪತ್ತೆಯಾಗಿರಲಿಲ್ಲ. ಇನ್ನೊಂದೆಡೆ ಬಾಲಕಿಯನ್ನು ಪೋಷಕರು ಮತ್ತು ಆಕೆಯ ಆಪ್ತರು ಮತ್ತೆ ಮತ್ತೆ ವಿಚಾರಿಸಿದ್ದರು. ಆಗ ಆಕೆ, ‘ಅಪಹರಣ ಯತ್ನ ಕಟ್ಟುಕತೆ. ಕಾಲೇಜಿಗೆ ಹೋಗಲು ಇಷ್ಟವಿಲ್ಲದ ಕಾರಣ ಕೈಗೆ ತಾನೇ ಗಾಯ ಮಾಡಿಕೊಂಡಿದ್ದೆ’ ಎಂದು ಒಪ್ಪಿಕೊಂಡಿದ್ದಳು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.  

‘ಬಾಲಕಿಯು ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ಈ ಘಟನೆಯನ್ನು ಸೂಕ್ಷ್ಮವಾಗಿ ಪರಿಗಣಿಸಿದ್ದೇವೆ. ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಅವರಿಂದ ಬಾಲಕಿಗೆ ಆಪ್ತಸಮಾಲೋಚನೆ ನಡೆಸಿ, ಮುಂದಿನ ಕ್ರಮವನ್ನು ವಹಿಸಲಿದ್ದೇವೆ. ಅಪ್ರಾಪ್ತ ವಯಸ್ಸಿನ ಬಾಲಕಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ ಪಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.