ಪುತ್ತೂರು: ಟಾರ್ಪಲ್ ಹೊದಿಕೆಯ ಗುಡಿಸಲಲ್ಲಿ ವಾಸಿಸುತ್ತಿದ್ದ ಕೆಯ್ಯೂರು ಗ್ರಾಮದ ಬಡ ಕುಟುಂಬವೊಂದಕ್ಕೆ ಪುತ್ತೂರಿನ ಶ್ರೀ ಸತ್ಯಸಾಯಿ ಸೇವಾ ಸಮಿತಿ ಹೊಸ ಮನೆ ನಿರ್ಮಿಸಿ ಆಸರೆಯಾಗಿದೆ.
ಕೆಯ್ಯೂರು ಗ್ರಾಮದ ತೆಗ್ಗು ನಿವಾಸಿ ತಿಮ್ಮಪ್ಪ ಮತ್ತು ರಾಧಿಕಾ ದಂಪತಿ ಕುಟುಂಬ ಕಳೆದ ಹಲವು ವರ್ಷಗಳಿಂದ ಟಾರ್ಪಲ್ ಹೊದಿಕೆಯ ಗುಡಿಸಲಲ್ಲಿ ವಾಸಿಸುತ್ತಿದ್ದರು. ಕುಟುಂಬಕ್ಕೆ ಜಮೀನು ಇದ್ದರೂ ಸರಿಯಾದ ದಾಖಲೆ ಇಲ್ಲದ ಕಾರಣ ಮನೆ ನಿರ್ಮಿಸಲು ಆಗಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಸತ್ಯಸಾಯಿ ಸೇವಾ ಸಮಿತಿ ಕುಟುಂಬಕ್ಕೆ ಸ್ಪಂದಿಸಿದೆ.
ಭಗವಾನ್ ಸತ್ಯಸಾಯಿ ಬಾಬಾ ಅವರ 100ನೇ ಜನ್ಮದಿನದ ಅಂಗವಾಗಿ ಶ್ರೀಸತ್ಯಸಾಯಿ ಸೇವಾ ಸಮಿತಿಯವರು ಸುಮಾರು ₹ 4.50 ಲಕ್ಷ ವೆಚ್ಚದಲ್ಲಿ ಈ ಕುಟುಂಬಕ್ಕೆ ಮನೆ ನಿರ್ಮಿಸಿದ್ದಾರೆ. ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ಗುರುವಾರ ನಡೆಯಿತು.
ಹಿರಿಯರಾದ ಪದ್ಮನಾಭ ನಾಯಕ್ ಅವರು ತಿಮಪ್ಪ ದಂಪತಿಗೆ ಮನೆಯ ಕೀಲಿಕೈ ಹಸ್ತಾಂತರಿಸಿದರು.
ಸತ್ಯಸಾಯಿ ಸೇವಾ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸನ್ನ ಭಟ್, ತಾಲ್ಲೂಕು ಘಟದಕ ಸಂಚಾಲಕ ದಯಾನಂದ ಕೆ.ಎಸ್, ಶ್ರೀಸತ್ಯಸಾಯಿ ಬಾಬಾ ಅವರ 100ನೇ ವರ್ಷಾಚರಣೆ ಸಮಿತಿಯ ಕಾರ್ಯಾಧ್ಯಕ್ಷ ರಘುನಾಥ ರೈ, ಬೈಂದೂರು ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಸತ್ಯಸುಂದರ ರಾವ್, ಜಿಲ್ಲಾ ಯುವ ಸಂಯೋಜಕ ಉಮೇಶ್ ಊಳಿ, ಸತ್ಯಸಾಯಿ ಸೇವಾ ಸಮಿತಿ ಸದಸ್ಯ ಶ್ರೀಧರ ಪೂಜಾರಿ ಕೋಡಂಬು, ಉದ್ಯಮಿ ಪ್ರಶಾಂತ್ ಶೆಣೈ, ಕೆಯ್ಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಕೆಯ್ಯೂರು ಶ್ರೀ ದುರ್ಗಾ ಭಜನಾ ಮಂಡಳಿ ಸದಸ್ಯ ಚಂದ್ರಶೇಖರ ರೈ ಇಳಂತಾಜೆ, ಒಡಿಯೂರು ಸೇವಾ ಬಳಗದ ವಿಶ್ವನಾಥ ರೈ ಸಾಗು, ಶಶಿಧರ ಪಾಟಾಳಿ ಮೇರ್ಲ, ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.
ಪುತ್ತೂರಿನ ಶ್ರೀ ಸತ್ಯಸಾಯಿ ಸೇವಾ ಸಮಿತಿಯು ಕುಟುಂಬಕ್ಕೆ ನೂತನ ಶೌಚಾಲಯವನ್ನೂ ನಿರ್ಮಿಸಿದೆ. ಕೆಯ್ಯೂರು ಗ್ರಾಮ ಪಂಚಾಯಿತಿ ವತಿಯಿಂದ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ನೀಡಲಾಗಿತ್ತು. ಪುತ್ತೂರಿನ ಉದ್ಯಮಿ ಪ್ರಶಾಂತ್ ಶೆಣೈ ಅವರು ನೂತನ ಮನೆಯ ಪೇಂಟಿಂಗ್ ವ್ಯವಸ್ಥೆಗೆ ದೇಣಿಗೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.