ADVERTISEMENT

ಪೊಲೀಸರಿಂದ ದಿಢೀರ್‌ ವಾಹನಗಳ ತಪಾಸಣೆ; ಅನಗತ್ಯ ಓಡಾಡುವವರಿಗೆ ದಂಡ

ಕಾರುಗಳಲ್ಲಿ ನಿಷೇಧಿತ ಟಿಂಟ್‌ ತೆರವು

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 4:34 IST
Last Updated 23 ಜೂನ್ 2021, 4:34 IST
ಮಂಗಳೂರಿನ ಕ್ಲಾಕ್‌ ಟವರ್‌ ಬಳಿ ಮಂಗಳವಾರ ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ್‌ ಹಾಗೂ ಅಧಿಕಾರಿಗಳು ವಾಹನ ತಪಾಸಣೆ ಮಾಡಿದರು.
ಮಂಗಳೂರಿನ ಕ್ಲಾಕ್‌ ಟವರ್‌ ಬಳಿ ಮಂಗಳವಾರ ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ್‌ ಹಾಗೂ ಅಧಿಕಾರಿಗಳು ವಾಹನ ತಪಾಸಣೆ ಮಾಡಿದರು.   

ಮಂಗಳೂರು: ಲಾಕ್‌ಡೌನ್‌ ಮಧ್ಯೆಯೂ ಖರೀದಿಗೆ ಮಧ್ಯಾಹ್ನ 1 ಗಂಟೆಯವರೆಗೆ ಅವಕಾಶ ನೀಡಲಾಗಿದ್ದು, ಅನಗತ್ಯವಾಗಿ ಓಡಾಡುವ ವಾಹನಗಳ ವಿರುದ್ಧ ಪೊಲೀಸ್‌ ಕಮಿಷನರ್ ಎನ್‌. ಶಶಿಕುಮಾರ್ ನೇತೃತ್ವದಲ್ಲಿ ದಿಢೀರ್‌ ತಪಾಸಣೆ ನಡೆಸಲಾಯಿತು.

ನಗರದ ಕ್ಲಾಕ್‌ ಟವರ್‌ ಬಳಿ ಮಂಗಳವಾರ ಬೆಳಿಗ್ಗೆ ಕಮಿಷನರ್‌ ಜೊತೆಗೆ ಡಿಸಿಪಿ ಹರಿರಾಂ ಶಂಕರ್‌ ಹಾಗೂ ಎಸಿಪಿಗಳಾದ ರಂಜಿತ್‌ಕುಮಾರ್‌, ನಟರಾಜ್‌ ಅವರು ವಾಹನಗಳನ್ನು ತಡೆದು ತಪಾಸಣೆ ಮಾಡಿದರು. ಅನಗತ್ಯವಾಗಿ ಸಂಚರಿಸುತ್ತಿರುವವರಿಗೆ ದಂಡ ವಿಧಿಸಿದ ಪೊಲೀಸರು, ನಿಷೇಧಿತ ಟಿಂಟ್‌ಗಳನ್ನು ಕಾರಿನಿಂದ ತೆಗೆದರು.

ಕಳೆದ ಕೆಲ ದಿನಗಳಿಂದ ನಗರದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದ್ದು, ಇದನ್ನು ನಿಭಾಯಿಸಲು ಪೊಲೀಸ್‌ ಅಧಿಕಾರಿಗಳು ಈ ತಪಾಸಣೆ ನಡೆಸಿದರು. ಮಧ್ಯಾಹ್ನ 1 ಗಂಟೆಯವರೆಗೆ ಖರೀದಿಗೆ ಅವಕಾಶವಿದ್ದರೂ, ಪೊಲೀಸರು ವಾಹನಗಳನ್ನು ತಡೆಯುತ್ತಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾದವು.

ADVERTISEMENT

ನಗರದ ಪುರಭವನದ ಎದುರಿನಿಂದ ಕ್ಲಾಕ್‌ ಟವರ್‌ಗೆ ಹೋಗುವ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಒಂದು ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಪೊಲೀಸರ ತಪಾಸಣೆ ವೇಳೆ ವಾಹನಗಳು ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಲ್ಲಬೇಕಾಯಿತು.

ಲಾಕ್‌ಡೌನ್ ವಿನಾಯಿತಿ ಅವಧಿಯಲ್ಲಿಯೂ ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿರ್ದೇಶನವನ್ನು ಸರ್ಕಾರ ನೀಡಿದೆ. ಅದನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಮೂಲಕ ತಪಾಸಣೆ ಮಾಡಲಾಗುತ್ತಿದೆ. ಒಳ ರಸ್ತೆಗಳಲ್ಲಿ ಅನಗತ್ಯವಾಗಿ ಓಡಾಡುವರನ್ನು ಕೂಡಾ ಮೊಬೈಲ್ ಸ್ಕ್ವಾಡ್‌ಗಳ ಮೂಲಕ ತಪಾಸಣೆ ನಡೆಸಲಾಗುತ್ತಿದೆ.

ಲಾಕ್‌ಡೌನ್ ಬಳಿಕ ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ 22ಸಾವಿರಕ್ಕೂ ಅಧಿಕ ಮಾಸ್ಕ್ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಧಿಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ 300ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. 3ಸಾವಿರ ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು.

ವೃದ್ಧ ದಂಪತಿ ಮನೆ ತಲುಪಿಸಿದ ಶಶಿಕುಮಾರ್:ಕ್ಲಾಕ್ ಟವರ್ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ, ತಮ್ಮ ಬಳಿ ಸಹಾಯ ಕೇಳಿ ಬಂದ ವೃದ್ಧ ದಂಪತಿಯನ್ನು ಪೊಲೀಸ್ ವಾಹನದಲ್ಲೇ ಮನೆಗೆ ತಲುಪಿಸುವ ಮೂಲಕ ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್ ಮಾನವೀಯತೆ ಮೆರೆದರು.

ಅಗತ್ಯ ವಸ್ತುಗಳ ಖರೀದಿಗೆ ನಗರಕ್ಕೆ ಬಂದಿದ್ದ ಹಿರಿಯ ನಾಗರಿಕರಾದ ರಾಮದಾಸ್ ಕಾಮತ್ ಹಾಗೂ ಅವರ ಪತ್ನಿ, ಕುಲಶೇಖರದ ಮನೆಗೆ ಹಿಂತಿರುಗಲು ಎರಡು ಗಂಟೆ ಕಾಲ ಆಟೋರಿಕ್ಷಾಕ್ಕೆ ಕಾಯುತ್ತಿದ್ದರು. ಯಾರೊಬ್ಬರೂ ಅಲ್ಲಿಗೆ ಬಾಡಿಗೆ ಬರಲು ಒಪ್ಪಲಿಲ್ಲ ಎಂದು ಕಮಿಷನರ್ ಬಳಿ ಸಮಸ್ಯೆ ಹೇಳಿಕೊಂಡರು.

ಕಾಲು ನೋವಿನ ಸಮಸ್ಯೆ ಇರುವ ರಾಮದಾಸ್ ಹಾಗೂ ಅವರ ಪತ್ನಿಯ ಸಮಸ್ಯೆಗೆ ಮರುಗಿದ ಕಮಿಷನರ್, ಪೊಲೀಸ್ ವಾಹನದಲ್ಲಿ ಅವರನ್ನು ಮನೆಗೆ ತಲುಪಿಸುವಂತೆ ಸಿಬ್ಬಂದಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.