ಸೌಹಾರ್ದ ಸಂಚಾರ ನಡಿಗೆ
ಮಂಗಳೂರು: ಸೌಹಾರ್ದ ಭಾವ ನಮ್ಮ ರಕ್ತದಲ್ಲಿ ಸಮ್ಮಿಳಿತಗೊಂಡಾಗ ನಾವು ನಿಜವಾದ ಮನುಷ್ಯರಾಗುತ್ತೇವೆ. ಆಗ ಸಮಾಜ ಶಾಂತಿ, ನೆಮ್ಮದಿಯ ನೆಲೆಯಾಗುತ್ತದೆ ಎಂದು ಬೆಂಗಳೂರು ಈಡಿಗ ಮಠದ ವಿಖ್ಯಾತ ಸ್ವಾಮೀಜಿ ಹೇಳಿದರು.
ಸುನ್ನಿ ಯುವಜನ ಸಂಘದ ಆಶ್ರಯದಲ್ಲಿ ಕುಂದಾಪುರದಿಂದ ಸುಳ್ಯದವರೆಗೆ ಆಯೋಜಿರುವ ಮೂರು ದಿನಗಳ ಸೌಹಾರ್ದ ಸಂಚಾರ ನಡಿಗೆಯ ಭಾಗವಾಗಿ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನನ್ನ ಕುಟುಂಬ, ನನ್ನ ಊರು ಸುಖವಾಗಿ ಬದುಕಬೇಕು ಎಂಬ ಭಾವನೆ ಇದ್ದಾಗ ಯಾವುದೇ ನಿಷ್ಠುರ, ದ್ವೇಷದ ಚಿಂತನೆ ಮೂಡುವುದಿಲ್ಲ. ನನ್ನ ಧರ್ಮವೇ ಶ್ರೇಷ್ಠ, ನನ್ನ ಧರ್ಮ ಅನುಸರಿಸುವವನು ಮಾತ್ರ ಶ್ರೇಷ್ಠ ಎಂಬ ಯೋಚನೆಯಿಂದ ದೇಶ ಉದ್ಧಾರ ಆಗಲು ಸಾಧ್ಯವಿಲ್ಲ. ಋಗ್ವೇದ ದಲ್ಲಿ ಬರುವ 'ಆನೋ ಭದ್ರ ಕೃತವೋ ಯಂತು ವಿಶ್ವತಃ ' ಈ ಮಂತ್ರದ ಉದಾತ್ತ ವಿಚಾರ ನಮ್ಮ ಮನದೊಳಗೆ ಇಳಿಯಬೇಕು ಎಂದರು.
ರಾಜಕೀಯ ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ಬಳಸಿಕೊಳ್ಳುತ್ತದೆ. ರಾಜಕೀಯ ಶಕ್ತಿಯಿಂದ ದೂರ ಇದ್ದರೆ ಶಾಂತಿ, ಸಮಾಧಾನ ಇರುತ್ತದೆ ಎಂದು ಹೇಳಿದರು.
ಮುಖಂಡರಾದ ಶಾಫಿ ಸ ಅದಿ ಮಾತನಾಡಿ, ಕರಾವಳಿಯಲ್ಲಿ ನಡೆದ ಕೊಲೆ ಪ್ರಕರಣಗಳನ್ನು ಜಾತಿ ಗಲಭೆ, ಕೋಮು ಗಲಭೆಯಾಗಿ ನೋಡದ ಬುದ್ಧಿವಂತ ಜನರು ಇಲ್ಲಿನವರು. ಇಲ್ಲಿನ ನೈಜ ಮುಸ್ಲಿಮರು, ನೈಜ ಹಿಂದೂಗಳಿಗೆ ಇಂತಹ ಪ್ರಕರಣ ಹಿಂದಿನ ಷಡ್ಯಂತರದ ಅರಿವಿದೆ. ಹೀಗಾಗಿ, ಸಹಿಷ್ಣುತೆ ಯಿಂದ ಇದ್ದು ಉದಾತ್ತ ಸಂದೇಶ ನೀಡಿದ್ದಾರೆ ಎಂದು ಹೇಳಿದರು.
ಎಡೆಬಿಡದೆ ಸುರಿಯುತ್ತಿದ್ದ ಮಳೆಯ ನಡುವೆ ಯೂ ನೂರಾರು ಕೊಡೆ ಹಿಡಿದು ಸೌಹಾರ್ದ ನಡಿಗೆಯಲ್ಲಿ ಹೆಜ್ಜೆ ಹಾಕಿದರು. ಬಾವುಟಗುಡ್ಡೆಯಿಂದ ಕ್ಲಾಕ್ ಟವರ್ ವರೆಗೆ ಸೌಹಾರ್ದ ನಡಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.