
ಬಾಲಕಿಯ ಕಾಲು ಗಾಯಗೊಂಡಿರುವುದು
ಮಂಗಳೂರು: ಬೈಕಿನಲ್ಲಿ ವ್ಯಕ್ತಿಯೊಬ್ಬರು ತಮ್ಮ ಅಪ್ರಾಪ್ತ ವಯಸ್ಸಿನ ಮಗಳು ಸಾಗುತ್ತಿದ್ದಾಗ ಮಂಗಳೂರು ತಾಲ್ಲೂಕಿನ ಮಳಲಿ ನಾರ್ಲಪದವು ಬಳಿ ಟಾಟಾ ಸುಮೊ ವಾಹನದಲ್ಲಿ ಬಂದ ಇಬ್ಬರು ಬೈಕನ್ನು ಶನಿವಾರ ಅಡ್ಡಗಟ್ಟಿ, ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಮೂಲರಪಟ್ಣದ ಅಬ್ದುಲ್ ಸತ್ತಾರ್ ಹಲ್ಲೆಗೊಳಗಾದವರು. ಎಡಪದವು ನಿವಾಸಿಗಳಾದ ಸುಮಿತ್ ಭಂಡಾರಿ (21) ಹಾಗೂ ರಜತ್ ನಾಯ್ಕ್ (30) ಹಲ್ಲೆ ನಡೆಸಿದ ಆರೋಪಿಗಳು. ಬೈಕಿನಲ್ಲಿ ಸುಮಾರು 19 ಕೆ.ಜಿ. ಗೋಮಾಂಸ ಪತ್ತೆಯಾಗಿದ್ದು, ಅದನ್ನು ಸಾಗಿಸಲು ಅಧಿಕೃತ ದಾಖಲೆ ಹೊಂದಿರದ ಕಾರಣ ಆರೋಪಿ ಅಬ್ದುಲ್ ಸತ್ತಾರ್ ವಿರುದ್ಧವೂ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದಾರೆ.
‘ತಮ್ಮ 11 ವರ್ಷದ ಮಗಳ ಜೊತೆ ಅಬ್ದುಲ್ ಸತ್ತಾರ್ ಬೈಕಿನಲ್ಲಿ ಸಾಗುತ್ತಿದ್ದಾಗ ಆರೋಪಿಗಳಾದ ಸುಮಿತ್ ಭಂಡಾರಿ ಹಾಗೂ ರಜತ್ ನಾಯ್ಕ್ ಮಳಲಿ ನಾರ್ಲಪದವು ಬಳಿ ಟಾಟಾ ಸುಮೊ ವಾಹನವನ್ನು ರಸ್ತೆಗೆ ಅಡ್ಡ ನಿಲ್ಲಿಸಿದರು. ಆಗ ಬೈಕ್ ರಸ್ತೆಗೆ ಬಿದ್ದಿದ್ದು, ಸೈಲೆನ್ಸರ್‌ನ ಬಿಸಿ ತಾಗಿ ಬಾಲಕಿಯ ಕಾಲಿನಲ್ಲಿ ಸುಟ್ಟ ಗಾಯಗಳಾಗಿವೆ. ಅಬ್ದುಲ್ ಸತ್ತಾರ್ ಬೈಕ್ ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ. ಆ ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, ‘ಆರೋಪಿಗಳಿಬ್ಬರು ರಸ್ತೆಗೆ ಟಾಟಾ ಸುಮೊ ವಾಹನವನ್ನು ಅಡ್ಡವಾಗಿ ನಿಲ್ಲಿಸಿದ ಬಳಿಕ, ತಂದೆಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ’ ಎಂದು ಆಕೆ ಆರೋಪಿಸಿದ್ದಾಳೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
‘ಆರೋಪಿಗಳಾದ ಸುಮಿತ್ ಭಂಡಾರಿ ಹಾಗೂ ರಜತ್ ನಾಯ್ಕ್‌ನನ್ನು ಠಾಣೆಗೆ ಕರೆಸಿಕೊಂಡು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದೆ. ಮೆಡಿಕಲ್ ರೆಪ್ ಆಗಿರುವ ರಜತ್ ನಾಯ್ಕ್, ‘ಮಹರ್ಷಿ ಕ್ಲಿನಿಕ್‌ಗೆ ಔಷಧ ತಲುಪಿಸಲು ಹೋಗಿದ್ದೆ’ ಎಂದು ತಿಳಿಸಿದ್ದ. ಆದರೆ ಆ ಕ್ಲಿನಿಕ್‌ನಲ್ಲಿ ವಿಚಾರಿಸಿದಾಗ, ‘ತಮ್ಮ ಕ್ಲಿನಿಕ್‌ಗೆ ಆತ ಔಷಧ ತಲುಪಿಸಿಲ್ಲ’ ಎಂದು ಅಲ್ಲಿನ ವೈದ್ಯರು ಹೇಳಿಕೆ ನೀಡಿದ್ದಾರೆ. ತಾವಿಬ್ಬರು ದೇವಸ್ಥಾನಕ್ಕೆ ಹೋಗುತ್ತಿದ್ದೆವು ಎಂದೂ ಆರೋಪಿಗಳು ತಿಳಿಸಿದ್ದರು. ಯಾವ ದೇವಸ್ಥಾನಕ್ಕೆ ಎಂದು ಕೇಳಿದಾಗ ಉತ್ತರಿಸಿಲ್ಲ’ ಎಂದು ಕಮಿಷನರ್ ತಿಳಿಸಿದ್ದಾರೆ.
‘ಅಬ್ದುಲ್ ಸತ್ತಾರ್ ಈ ಪ್ರದೇಶಗಳಲ್ಲಿ ನಿರಂತರವಾಗಿ ಗೋಮಾಂಸ ಸರಬರಾಜು ಮಾಡುತ್ತಿದ್ದ ಎಂಬ ಮಾಹಿತಿ ಇದೆ. ಆತನ ಸ್ಕೂಟರ್‌ನಲ್ಲಿ ಸಿಕ್ಕಿರುವ 19 ಕೆ.ಜಿ. ಮಾಂಸಗಳನ್ನು 35 ಪೊಟ್ಟಣಗಳಲ್ಲಿ ತುಂಬಿಡಲಾಗಿತ್ತು. ಯಾವುದೇ ಅಧಿಕೃತ ಬಿಲ್ ಹೊಂದಿಲ್ಲದೇ ಗೋಮಾಂಸವನ್ನು ಅನಧಿಕೃತವಾಗಿ ಸಾಗಿಸುತ್ತಿದ್ದರೆ ಅದನ್ನು ತಡೆಯುವುದು ಪೊಲೀಸರ ಕರ್ತವ್ಯ. ಅಬ್ದುಲ್ ಸತ್ತಾರ್ ಇನ್ನೂ ಸಿಕ್ಕಿಲ್ಲ. ಆತನನ್ನು ವಶಕ್ಕೆ ಪಡೆದ ಬಳಿಕ ಆತ ಅದನ್ನು ಎಲ್ಲಿಂದ ತಂದಿದ್ದ ಎಂದು ಗೊತ್ತಾಗಲಿದೆ’ ಎಂದು ಅವರು ತಿಳಿಸಿದ್ದಾರೆ.
‘ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೊಬ್ಬ ಯುವಕನ ಫೋಟೊ ಹಂಚಿಕೊಂಡು, ‘ಸತ್ತಾರ್ ಹಾಗೂ ಅವರ ಮಗಳಿಗೆ ಹಲ್ಲೆ ಮಾಡಿದ ಮತ್ತೊಬ್ಬ ಸಂಘಿ ಗೂಂಡಾ’ ಎಂದು ಸುದ್ದಿ ಹಬ್ಬಿಸಲಾಗಿದೆ. ಈ ಪ್ರಕರಣದಲ್ಲಿ ಆ ಯುವಕನ ಪಾತ್ರ ಏನೆಂಬುದು ಇನ್ನೂ ಖಚಿತವಾಗಿಲ್ಲ. ಒಂದು ವೇಳೆ ಆತನ ಪಾತ್ರ ಇಲ್ಲದಿದ್ದರೆ, ಈ ಬಗ್ಗೆ ಸುದ್ದಿ ಹಬ್ಬಿಸಿದವರ ವಿರುದ್ಧವೂ ಕ್ರಮಕೈಗೊಳ್ಳಲಿದ್ದೇವೆ’ ಎಂದು ಕಮಿಷನರ್ ಸ್ಪಷ್ಟಪಡಿಸಿದ್ದಾರೆ.
ಈ ಘಟನೆ ನಡೆದ ಬಳಿಕ ಸ್ಥಳದಲ್ಲಿ ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಿ, ಬಿಗು ಭದ್ರತೆ ಒದಗಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.