ADVERTISEMENT

ಮಂಗಳೂರು | ಮೀನು ಶಿಕಾರಿಯ ಗೊಂದಲ: ಮುಂದೇನು?

ಲಯ ತಪ್ಪುತ್ತಿರುವ ಮೀನುಗಾರಿಕೆಯ ಮೇಲೆ ಸ್ವಯಂ ನಿಯಂತ್ರಣಕ್ಕೆ ಸಲಹೆ; ತಜ್ಞರು, ಮೀನುಗಾರರಲ್ಲಿ ಭಿನ್ನ ಅಭಿಪ್ರಾಯ

ವಿಕ್ರಂ ಕಾಂತಿಕೆರೆ
Published 9 ಡಿಸೆಂಬರ್ 2024, 6:38 IST
Last Updated 9 ಡಿಸೆಂಬರ್ 2024, 6:38 IST
ಮಂಗಳೂರು ಬಂದರ್‌ನಲ್ಲಿ ಮೀನುಗಳನ್ನು ಭಾನುವಾರ ಟ್ರೇಗಳಿಗೆ ಸುರಿಯಲಾಯಿತು  ಪ್ರಜಾವಾಣಿ ಚಿತ್ರ  :ಫಕ್ರುದ್ದೀನ್ ಎಚ್‌.
ಮಂಗಳೂರು ಬಂದರ್‌ನಲ್ಲಿ ಮೀನುಗಳನ್ನು ಭಾನುವಾರ ಟ್ರೇಗಳಿಗೆ ಸುರಿಯಲಾಯಿತು  ಪ್ರಜಾವಾಣಿ ಚಿತ್ರ  :ಫಕ್ರುದ್ದೀನ್ ಎಚ್‌.   

ಮಂಗಳೂರು: ಪಶ್ಚಿಮ ಕರಾವಳಿಯಲ್ಲಿ ಸುಸ್ಥಿರ ಮೀನುಗಾರಿಕೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಚರ್ಚಿಸಲು ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯ ಈ ವರ್ಷದ ಜುಲೈ ತಿಂಗಳ ಅಂತ್ಯದಲ್ಲಿ ಆಯೋಜಿಸಿದ್ದ ‘ಬಿಗ್‌ ಫಿಷ್‌’ (ಬ್ರಿಜ್ ಇನ್‌ ದಿ ಯೀಲ್ಡ್ ಗ್ಯಾಪ್‌) ಸಮಾವೇಶದಲ್ಲಿ ಮೀನುಗಾರಿಕೆಗೆ ಸಂಬಂಧಿಸಿ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಲಾಗಿತ್ತು.

ಕರಾವಳಿಯ ಮೂರು ಜಿಲ್ಲೆಗಳ 450ಕ್ಕೂ ಹೆಚ್ಚು ಮೀನುಗಾರ ಮುಖಂಡರು, 28 ವಿಜ್ಞಾನಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತಿತರರು ಪಾಲ್ಗೊಂಡಿದ್ದ ಸಮಾವೇಶದಲ್ಲಿ 12 ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ಅವುಗಳ ಪೈಕಿ ಹೆಚ್ಚಿನವು ತುರ್ತಾಗಿ ಕಾರ್ಯಗತ ಆಗಬೇಕು ಎಂಬುದು ಸಮಾವೇಶದ ಆಶಯವಾಗಿತ್ತು.

ಹವಾಮಾನ ವೈಪರೀತ್ಯ, ಅತಿಯಾದ ಮೀನುಗಾರಿಕೆ ಮತ್ತಿತರ ಕಾರಣಗಳಿಂದಾಗಿ ಕಳೆದ ಒಂದು ದಶಕದಲ್ಲಿ ಮೀನಿನ ಲಭ್ಯತೆ ಪ್ರಮಾಣ ಸ್ಥಿರವಾಗಿಯೇ ಸಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂಬ ವಿಷಯವನ್ನು ವಿಜ್ಞಾನಿಗಳು ಮತ್ತು ಸಂಶೋಧಕರು ತಿಳಿಸಿದ್ದಾರೆ. ಆದರೆ ಸಮುದ್ರದ ‘ಫಸಲು’ ಅಕ್ಷಯ. ಆದ್ದರಿಂದ ಮೀನುಗಾರಿಕೆ ‘ಕೃಷಿ’ಯಲ್ಲಿ ಕಡಿಮೆ ಇಳುವರಿ ಎಂಬ ಮಾತು ಇಲ್ಲ. ಮೀನಿನ ಪ್ರಮಾಣ ಕುಸಿದಿಲ್ಲ, ಬೆಲೆ ಇಲ್ಲದ್ದರಿಂದ ಈ ಉದ್ಯಮ ಸಂಕಷ್ಟದಲ್ಲಿ ಇದೆ ಎಂಬುದು ಕೆಲವು ಬೋಟ್ ಮಾಲೀಕರು ಮತ್ತು ಮುಖಂಡರ ಅಭಿಪ್ರಾಯ. 

ADVERTISEMENT

ಅಧ್ಯಯನದಲ್ಲಿ ಕಂಡುಬಂದ ಪ್ರಕಾರ ಪಶ್ಚಿಮ ಕರಾವಳಿಯಲ್ಲಿ 10 ವರ್ಷಗಳಿಂದ ವಾರ್ಷಿಕ ಮೀನಿನ ಲಭ್ಯತೆ 3.7 ಮಿಲಿಯ ಟನ್‌ನಿಂದ 3.9 ಮಿಲಿಯ ಟನ್‌ನಷ್ಟೇ ಇದೆ. ಈ ಭಾಗದ ವಾರ್ಷಿಕ ಸಾಮರ್ಥ್ಯ 4.8 ಮಿಲಿಯ ಟನ್ ಆಗಿದ್ದು ದಶಕದ ಹಿಂದೆ 4.1 ಮಿಲಿಯ ಟನ್‌ನಿಂದ 4.2 ಮಿಲಿಯ ಟನ್ ಮೀನು ಸಿಗುತ್ತಿತ್ತು. ಅದಕ್ಕೆ ಹೋಲಿಸಿದರೆ ಈಗ ಸಿಗುತ್ತಿರುವ ಪ್ರಮಾಣ ಕಡಿಮೆ ಎಂದು ಮೀನುಗಾರಿಕೆ ಮಹಾವಿದ್ಯಾಲಯದ ಅಕ್ವಾಟಿಕ್ ಬಯಾಲಜಿ ವಿಭಾಗದ ಪ್ರಾಧ್ಯಾಪಕ ಶಿವಕುಮಾರ ಮಗದ ತಿಳಿಸಿದರು.

ಮೀನಿನ ಸಂತತಿಯನ್ನು ಉಳಿಸಿದರೆ ಮತ್ತು ಬೆಳೆಯಲು ಅನುವು ಮಾಡಿಕೊಟ್ಟರೆ ಉತ್ಪಾದನೆಯೂ ಜಾಸ್ತಿ ಆಗಲಿದೆ ಎಂಬುದು ಈ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರ ಅಂಬೋಣ. ಹೀಗಾಗಿಯೇ ಮೀನುಗಾರಿಕೆ ಶಿಕಾರಿ ರಜೆಯನ್ನು ಎರಡು ತಿಂಗಳಿಂದ ಮೂರು ತಿಂಗಳಿಗೆ ಏರಿಸುವುದು ಮತ್ತು ಕಾಡ್ ಎಂಡ್‌ನಲ್ಲಿ 35 ಮಿಮೀ ಅಗಲ ಕಣ್ಣಿರುವ ಬಲೆಯನ್ನು ಬಳಸುವುದು ಅಗತ್ಯ ಎಂಬ ವಿಷಯ ಬಿಗ್ ಫಿಶ್ ಸಮಾವೇಶದ ನಿರ್ಣಯಗಳ ಪ್ರಮುಖ ಅಂಶಗಳು ಅಗಿದ್ದವು.

ಗೋಪ್ಯ ಮಾಹಿತಿ ಸಂಗ್ರಹದಲ್ಲಿ, ‘ಬೆಳಕು ಮೀನುಗಾರಿಕೆ’ಯನ್ನು ತಡೆಯಬೇಕು ಮತ್ತು 12 ನಾಟಿಕಲ್ ಮೈಲ್‌ಗಳಿಂದ ಆಚೆಯೇ ಮೀನು ಹಿಡಿಯುವುದು ಸ್ಥಿರತೆ ಕಾಪಾಡಲು ಅನಿವಾರ್ಯ ಎಂಬ ಮಾತುಗಳು ಕೇಳಿಬಂದಿವೆ. ಬುಲ್ ಟ್ರೋಲಿಂಗ್ ನಿಷೇಧಿಸಬೇಕು ಎಂಬ ಬೇಡಿಕೆಯೂ ಇದೆ ಎಂದು ಸಮಾವೇಶದ ವರದಿಯಲ್ಲಿ ಪ್ರಕಟಿಸಲಾಗಿದೆ.

ಭಿನ್ನ ಅಭಿಪ್ರಾಯಗಳು:

ಮೀನು ಲಭ್ಯತೆ ಮತ್ತು ಶಿಕಾರಿಗೆ ಸಂಬಂಧಿಸಿ ಭಿನ್ನ ಅಭಿಪ್ರಾಯಗಳೂ ಇವೆ. ‘ಸಮುದ್ರದಲ್ಲಿ ಮೀನಿನ ಸಂತತಿ ಕಡಿಮೆಯಾಗುವುದು ಎಂದು ಇಲ್ಲ. ಸಣ್ಣ ಮೀನನ್ನು ತಿಂದು ದೊಡ್ಡ ಮೀನುಗಳು ಬದುಕುತ್ತವೆ. ಆದ್ದರಿಂದ ದೊಡ್ಡ ಮೀನುಗಳನ್ನು ಹಿಡಿದಷ್ಟು ಸಣ್ಣ ಮೀನುಗಳು ಉಳಿಯುತ್ತವೆ. ಹೀಗಾಗಿ ಶಿಕಾರಿಯಿಂದ ಮೀನಿನ ಸಂಖ್ಯೆ ಖಾಲಿಯಾಗುತ್ತದೆ ಎಂದು ಹೇಳಲಾಗದು’ ಎನ್ನುತ್ತಾರೆ, ಪರ್ಸೀನ್ ಬೋಟ್‌ ಮಾಲೀಕ ಡೊನಾಲ್ಡ್ ಪಿಂಟೊ.

‘ಮೀನಿಗೆ ನಿರೀಕ್ಷಿತ ಬೆಲೆ ಸಿಗದೇ ಇರುವುದು ಈಗಿನ ಸಮಸ್ಯೆ. ಮೀನಿನ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡಿದರೆ ಸಂಕಷ್ಟಗಳಿಗೆ ಪರಿಹಾರ ಸಿಗಬಹುದು. ಒಂದನೇ ದರ್ಜೆ, ಎರಡನೇ ದರ್ಜೆ ಮತ್ತು ಮೂರನೇ ದರ್ಜೆ ಮೀನು ಎಂದು ವಿಂಗಡಿಸಿ ಬೆಲೆ ನಿಗದಿ ಮಾಡಬೇಕು. ಸರ್ಕಾರ ಇದಕ್ಕೆ ಮುಂದಾಗಬೇಕು’ ಎಂದು ಅವರು ಆಗ್ರಹಿಸಿದರು.

ಆದರೆ ಅನಿಯಂತ್ರಿತ ಮೀನುಗಾರಿಕೆಯಿಂದ ಮೀನಿನ ಉತ್ಪತ್ತಿ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಸಂದೇಹ ಇಲ್ಲ ಎಂದೇ ತಜ್ಞರು ಹೇಳುತ್ತಾರೆ. ‘ನಮ್ಮ ವ್ಯಾಪ್ತಿಯ 320 ಕಿಲೊಮೀಟರ್ ಪ್ರದೇಶದಲ್ಲಿ 25 ಸಾವಿರ ಬೋಟ್‌ಗಳು ಮೀನುಗಾರಿಕೆಯಲ್ಲಿ ತೊಡಗಿವೆ. ಭಾರತದ ಇತರ ಪ್ರದೇಶಗಳಲ್ಲಿ ಒಂದು ಕಿಲೊಮೀಟರ್‌ಗೆ 50 ಬೋಟ್‌ಗಳು ಇದ್ದರೆ ನಮ್ಮಲ್ಲಿ ಅದರ ಸಂಖ್ಯೆ 75. ಸಣ್ಣ ಕಣ್ಣಿನ ಬಲೆಗಳ ಬಳಕೆ, ಜಾಗತಿಕ ತಾಪಮಾನ ಇತ್ಯಾದಿ ಅಂಶಗಳು ಕೂಡ ಮೀನಿನ ಪ್ರಮಾಣ ಕಡಿಮೆಯಾಗಲು ಕಾರಣವಾಗಿವೆ’ ಎನ್ನುತ್ತಾರೆ ಶಿವಕುಮಾರ ಮಗದ.

ಹೆಚ್ಚಿನ ಮೀನುಗಳು ಕಡಿಮೆ ಆಳವಿರುವ ಕಡಲ ತೀರದಲ್ಲಿ ಮತ್ತು ಚೌಳು ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಆದ್ದರಿಂದ ಶಿಕಾರಿ ನಿಷೇಧದ ಅವಧಿಯಲ್ಲಿ  ನಾಡದೋಣಿಗಳ ಮೇಲೆಯೂ ನಿರ್ಬಂಧ ಹೇರಬೇಕು. ಸರ್ಕಾರದ ಕ್ರಮಕ್ಕೆ ಕಾಯದೇ ಮೀನುಗಾರರೇ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು ಎಂದು ಬಿಗ್ ಫಿಶ್ ಸಮಾವೇಶ ಆಶಿಸಿತ್ತು. ಅರಬ್ಬಿ ಸಮುದ್ರ ಮೀನುಗಾರಿಕೆ ನಿರ್ವಹಣೆ ಸಂಯೋಜನಾ ಸಮಿತಿಯನ್ನೂ ಅಲ್ಲಿ ರಚಿಸಲಾಗಿತ್ತು.

ಸುಸ್ಥಿರ ಮೀನುಗಾರಿಕೆಗೆ ಸಂಬಂಧಿಸಿ ಸಮಾವೇಶದಲ್ಲಿ ಮಂಡಿಸಿದ ವಿಷಯಗಳಿಗೆ ಸ್ಥಳೀಯ ಬೋಟ್ ಮಾಲೀಕರು ಮತ್ತು ಮೀನುಗಾರ ಮುಖಂಡರು ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ ಇದನ್ನು ಜಾರಿಗೆ ತರಲು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆ ಮೀನುಗಾರಿಕಾ ವಲಯದಲ್ಲಿ ಅಲೆದಾಡುತ್ತಿದೆ. ಹೀಗಾಗಿ ಮೀನುಗಾರಿಕೆ ಕ್ಷೇತ್ರದಲ್ಲಿ ಮುಂದೇನು ಎಂಬ ಸಂದೇಹ ಉಳಿದಿದೆ.

ನಾವು ಸಿದ್ಧ; ಕೇಂದ್ರವೂ ಸಿದ್ಧವಾಗಲಿ:

ಸಮುದ್ರದಲ್ಲಿ ಮೀನಿನ ಪ್ರಮಾಣ ಕಡಿಮೆಯಾಗುವುದು ಮಾತ್ರವಲ್ಲ, ಕೆಲವು ಮೀನಿನ ಸಂತತಿಯೇ ಇಲ್ಲದಾಗುತ್ತಿದೆ. ಮೀನುಗಾರಿಕೆಯ ‘ಸಂಪ್ರದಾಯ’ಗಳನ್ನೆಲ್ಲ ಗಾಳಿಗೆ ತೂರಿ ವ್ಯಾಪಾರಿ ಮನೋಭಾವದಿಂದ ಬೋಟ್‌ಗಳನ್ನು ಇಳಿಸುವುದೇ ಇದಕ್ಕೆ ಕಾರಣ ಎಂದು ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಹೇಳಿದರು.

‘ಮೀನುಗಾರಿಕೆ ಈಗ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ವ್ಯವಹಾರವೇ ಮುಖ್ಯ ಎಂದು ತಿಳಿದುಕೊಂಡಿರುವ ಎಲ್ಲರೂ ಈ ಕ್ಷೇತ್ರಕ್ಕೆ ಬಂದು ಎಲ್ಲವನ್ನು ಹಾಳುಗೆಡವಿದ್ದಾರೆ. ಸಮುದ್ರದ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುವ ಮತ್ತು ಮೀನುಗಾರಿಕೆಯನ್ನು ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿರುವ ನಾವೆಲ್ಲ ಸಾಗರದ ಸಂಪತ್ತನ್ನು ಉಳಿಸುವುದಕ್ಕಾಗಿ ತ್ಯಾಗ ಮಾಡಲು ಸಿದ್ಧರಿದ್ದೇವೆ. ಉಳಿದವರನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು. ಕಾಗದದಲ್ಲಿರುವ ನಿಯಮಗಳನ್ನು ಜಾರಿಗೆ ತರಬೇಕು’ ಎಂದು ಅವರು ಆ‌ಗ್ರಹಿಸಿದರು.

‘ವಿಜ್ಞಾನಿಗಳು ಮತ್ತು ತಜ್ಞರು ನೀಡುವ ಸಲಹೆಗಳನ್ನು ಪಾಲಿಸದೇ ಇದ್ದರೆ ಭವಿಷ್ಯದಲ್ಲಿ ಅಪಾಯವಿದೆ. ಕೆಲವೇ ಕೆಲವರು ಮಾಡುವ ಅನಾಹುತದಿಂದಾಗಿ ಬಹುತೇಕರಿಗೆ ಸಮಸ್ಯೆ ಆಗುತ್ತಿದೆ. ಗಣಿಗಾರಿಕೆಯಿಂದ ಭೂಮಿಯ ಸಂಪತ್ತು ನಾಶ ಮಾಡಿದಂತೆ ಅಮಿತ, ಅನಿಯಂತ್ರಿತ ಮೀನುಗಾರಿಕೆಯಿಂದ ಸಮುದ್ರದ ಸಂಪತ್ತನ್ನೂ ನಾಶ ಮಾಡಲಾಗುತ್ತಿದೆ. ಇದನ್ನು ತಡೆಯಲೇಬೇಕು’ ಎಂದು ಚೇತನ್ ಹೇಳಿದರು.

ಲೈಟ್ ಫಿಶಿಂಗ್‌ನಿಂದ ವಿನಾಶ

ಅತ್ಯಂತ ಪ್ರಭಾವಿ ಬೆಳಕು ಹರಿಸಿ ಮೀನುಗಾರಿಕೆ ಮಾಡುವ ತಂತ್ರ ಸಾಗರದ ಸಂಪತ್ತನ್ನು ವಿನಾಶದತ್ತ ತಳ್ಳುತ್ತಿದೆ. ಇದನ್ನು ತಡೆಯಲೇಬೇಕು. ಲೈಟ್ ಬಳಕೆಯಿಂದ ಲಕ್ಷಾಂತರ ಸಣ್ಣ ಮೀನುಗಳು ಸಾಯುತ್ತವೆ. ಮೊಟ್ಟೆ ಇಡಲು ಕಲ್ಲುಗಳ ಎಡೆಯಲ್ಲಿ ಸೇರುವ ಮೀನುಗಳು ತೊಂದರೆಯಾಗಿ ವಾಪಸ್ ಬರುತ್ತವೆ. ಆದ್ದರಿಂದ ಲೈಟ್ ಬಳಕೆಯನ್ನು ನಿಷೇಧಿಸಲೇಬೇಕು ಎಂದು ಚೇತನ್ ಬೆಂಗ್ರೆ ಒತ್ತಾಯಿಸಿದರು.

ಹವಾಮಾನ ವೈಪರೀತ್ಯದ ಪ್ರಭಾವ

ಕೊರೊನಾ ಕಾಲದಲ್ಲಿ ಮೀನುಗಾರಿಕೆ ಚಟುವಟಿಕೆ ತೀರಾ ಕಡಿಮೆ ಇತ್ತು. ಹೀಗಾಗಿ ಮೀನು ಉತ್ಪತ್ತಿ ಹೆಚ್ಚಾಗಿತ್ತು. ಆದ್ದರಿಂದ ಮುಂದಿನ ಎರಡು ವರ್ಷಗಳಲ್ಲಿ ಉತ್ತಮ ಇಳುವರಿ ಬಂತು. ಅದಕ್ಕೆ ಹೋಲಿಸಿದರೆ ಈಗ ಕಡಿಮೆ ಇರಬಹುದೇನೋ. ಆದರೆ ಸಮುದ್ರಕ್ಕೆ ಹೋಗುವ ಬೋಟ್‌ಗಳ ಸಂಖ್ಯೆಯಲ್ಲೂ ಮೀನುಗಾರಿಕೆಯಲ್ಲೂ ವ್ಯತ್ಯಾಸಗಳೇನೂ ಕಾಣುತ್ತಿಲ್ಲ. ಹವಾಮಾನ ವೈಪರೀತ್ಯ ಆದಾಗ ಮಾತ್ರ ಚಟುವಟಿಕೆ ಕಡಿಮೆ ಇರುತ್ತದೆ. ಉಳಿದಂತೆ ಮೀನು ಉತ್ಪತ್ತಿ ಕಡಿಮೆಯಾಗಿದೆ ಎನ್ನಲಾಗದು ಎನ್ನುತ್ತಾರೆ, ಮೀನುಗಾರಿಕೆ ಇಲಾಖೆಯ ಉಡುಪಿ ಜಂಟಿ ನಿರ್ದೇಶಕ ವಿವೇಕ್‌ ಆರ್‌. ಆಳ್ವ.

ಮೀನಿನ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗದು. ಹೆಚ್ಚೆಚ್ಚು ಬೋಟ್‌ಗಳು ಸಮುದ್ರಕ್ಕೆ ಇಳಿಯುತ್ತಿದ್ದು ಇಳುವರಿಯೂ ಚೆನ್ನಾಗಿದೆ. ಕೆಲವು ಸಂದರ್ಭದಲ್ಲಿ ಮಾತ್ರ ಮೀನಿನ ಪ್ರಮಾಣ ಕಡಿಮೆ ಆಗುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳೂ ಇವೆ.
ಸಿದ್ದಯ್ಯ, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.