
ಸುಳ್ಯ: ಕೇಂದ್ರ ಸರ್ಕಾರವು ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರು ಮತ್ತು ನಿಯಮ ಬದಲಾವಣೆ ಮಾಡಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ನೇತೃತ್ವದಲ್ಲಿ 4 ದಿನಗಳ ನರೇಗಾ ಬಚಾವೋ ಸಂಗ್ರಾಮ್ ಪಾದಯಾತ್ರೆಗೆ ಸುಳ್ಯದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಸುಳ್ಯದಿಂದ ಆರಂಭಗೊಂಡ ಪಾದಯಾತ್ರೆಯು ಫೆ.12ರಂದು ಮೂಲ್ಕಿಯಲ್ಲಿ ಸಮಾರೋಪಗೊಳ್ಳಲಿದೆ.
ಗಾಂಧಿನಗರದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಚಾಲನೆ ನೀಡಿದ ಕಾಂಗ್ರೆಸ್ ಮುಖಂಡ ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ, ಬಡವರಿಗೆ ವರದಾನವಾದ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಗೆ ತಿದ್ದುಪಡಿ ತಂದು ಹೆಸರು ಬದಲಾಯಿಸುವ ಮೂಲಕ ಯೋಜನೆಯನ್ನು ನಿಲ್ಲಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದಿಂದ ಅನುದಾನವನ್ನು ಕಡಿತ ಮಾಡಿ ರಾಜ್ಯ ಸರ್ಕಾರದ ಮೇಲೆ ಹೊರೆ ಹಾಕಿ ಯೋಜನೆಯನ್ನು ಕ್ರಮೇಣ ನಿಲ್ಲಿಸುವ ಪ್ರಯತ್ನ ಇದಾಗಿದೆ. ಇದರ ವಿರುದ್ಧ ಸಂಸದರು ಮಾತನಾಡದೆ ಇರುವುದು ದುರದೃಷ್ಟಕರ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಸರ್ಕಾರ 12 ವರ್ಷದಲ್ಲಿ 24 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಉದ್ಯೋಗ ಸೃಷ್ಟಿ ಮಾಡದೆ ಇದುವ ಉದ್ಯೋಗವನ್ನೇ ಕಿತ್ತುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿ, ನರೇಗಾದ ಮೂಲಕ ಗ್ರಾಮ ಪಂಚಾಯಿತಿಗೂ ಉತ್ತಮ ಅನುದಾನ ಮತ್ತು ಹಲವು ಯೋಜನೆ ರೂಪಿಸಲು ಸಹಾಯಕವಾಗಿತ್ತು. ಯೋಜನೆಯನ್ನು ಪುನರ್ ಸ್ಥಾಪಿಸಲು ಒತ್ತಾಯಿಸಿ ಪ್ರತಿಭಟನಾ ಸೂಚಕವಾಗಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಜಿಲ್ಲೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹರೀಶ್ ಕುಮಾರ್ ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಪದ್ಮರಾಜ ಪೂಜಾರಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಭರತ್ ಮುಂಡೋಡಿ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ಜೆ.ಆರ್.ಲೋಬೊ, ಶಶಿಧರ್ ಹೆಗ್ಡೆ, ಜಿ.ಕೃಷ್ಣಪ್ಪ, ಶಾಲೆಟ್ ಪಿಂಟೊ, ರಾಧಾಕೃಷ್ಣ ಬೊಳ್ಳೂರು, ಶಾಹುಲ್ ಹಮೀದ್ ಕುತ್ತಮೊಟ್ಟೆ, ಕೆ.ಎಂ.ಮುಸ್ತಫಾ, ಧನಂಜಯ ಅಡ್ಪಂಗಾಯ, ನಿತ್ಯಾನಂದ ಮುಂಡೋಡಿ, ರಾಜೀವಿ ಆರ್.ರೈ, ಗೀತಾ ಕೋಲ್ಚಾರ್, ಸರಸ್ವತಿ ಕಾಮತ್, ಉಷಾ ಅಂಚನ್, ಅಪ್ಪಿ ಮಂಗಳೂರು, ಕೆ.ಎಂ.ಮುಸ್ತಫ, ಶಾಫಿ ಕುತ್ತಮೊಟ್ಟೆ, ಶುಭಾಶ್ಚಂದ್ರ ಕೋಳ್ನಾಡ್, ಸಂಶುದ್ದೀನ್ ಸಾಲ್ಮರ, ವಿನಯರಾಜ್ ಎ.ಸಿ., ಕೆ.ಗೋಕುಲ್ ದಾಸ್, ಎಂ.ವೆಂಕಪ್ಪ ಗೌಡ, ಮಹಮ್ಮದ್ ಕುಂಞಿ ಗೂನಡ್ಕ, ಜಿ.ಕೆ.ಹಮೀದ್ ಭಾಗವಹಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಸ್ವಾಗತಿಸಿ, ಮುಖಂಡ ಎಂ.ಎಸ್.ಮೊಹಮ್ಮದ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.