ADVERTISEMENT

ಆಡಳಿತ ಸರಿ ಇಲ್ಲದಿದ್ದರೆ ಮುಂದೆ ಸೋಲುವ ಸರದಿ ಕಾಂಗ್ರೆಸ್‌ನದು: ಪ್ರಕಾಶ್ ರಾಜ್

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 12:59 IST
Last Updated 15 ಫೆಬ್ರುವರಿ 2025, 12:59 IST
ಪ್ರಕಾಶ್ ರಾಜ್‌
ಪ್ರಕಾಶ್ ರಾಜ್‌   

ಮಂಗಳೂರು: ‘ಚುನಾವಣೆ ಪ್ರಕ್ರಿಯೆಯಲ್ಲಿ ವಿರೋಧ ಪಕ್ಷ ಗೆಲ್ಲುವುದಿಲ್ಲ. ಆಳುವ ಪಕ್ಷವನ್ನು ಜನರು ಸೋಲಿಸುತ್ತಾರೆ.  ಕಾಂಗ್ರೆಸ್‌ ನೇತೃತ್ವದ ಸರ್ಕಾರ ಸರಿಯಾಗಿ ಆಡಳಿತ ನಡೆಸದಿದ್ದರೆ ಮುಂದೆ ಸೋಲುವ ಸರದಿ ಅವರದು’ ಎಂದು ಸಿನಿಮಾ ನಟ ಪ್ರಕಾಶ್‌ ರಾಜ್ ಹೇಳಿದರು. 

ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಧರ್ಮದ ಹಿಂದೆ ಅಥವಾ ಬಣ್ಣದ ಹಿಂದೆ ಹೋಗದೇ, ಸರಿಯಾಗಿ ಆಡಳಿತ ನಡೆಸುತ್ತೇವೆ ಎಂದಿದ್ದಕ್ಕೆ ನಿಮ್ಮನ್ನು ಆಯ್ಕೆ ಮಾಡಿದ್ದೇವೆ. ಗೆದ್ದ ತಕ್ಷಣ ನೀವು ರಾಜರಲ್ಲ. ಪ್ರಜೆಗಳ ಸೇವಕರು. ಪ್ರಜೆಗಳ ದುಡ್ಡನ್ನು ಸರ್ಕಾರ ಹೇಗೆ ಬಳಸುತ್ತಿದೆ, ತೆರಿಗೆ ಹಣವನ್ನು ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಪ್ರಜೆಗಳು  ಯೋಚನೆ ಮಾಡಬೇಕು.  ಆ ಪಕ್ಷ ಈ ಪಕ್ಷ ಎಂದು ನೋಡದೇ ಪ್ರಶ್ನೆಗಳನ್ನು ಕೇಳಬೇಕು. ಜನಪ್ರತಿನಿಧಿಗಳ ಬಟ್ಟೆಯಿಂದ ಹಿಡಿದು ಅವರ ಭದ್ರತೆಯವರೆಗೆ ಎಲ್ಲ ವೆಚ್ಚವನ್ನು ಭರಿಸುವುದು ಪ್ರಜೆಗಳ ದುಡ್ಡಿನಿಂದ’ ಎಂದರು. 

‘ಸರ್ಕಾರ ನಷ್ಟದಲ್ಲಿದೆ ಎನ್ನಲು ಅವರೇನು ವಹಿವಾಟು ನಡೆಸುತ್ತಿದ್ದಾರೆಯೇ. ಪ್ರಜೆಗಳ ದುಡ್ಡಿನಿಂದ ಸರ್ಕಾರ ನಡೆಯುತ್ತದೆ. ಸರ್ಕಾರ ಎಲ್ಲಿ ವಿಫಲವಾಗುತ್ತದೆ ಎಂಬುದನ್ನು ಪ್ರಜೆಗಳು ಪ್ರಶ್ನೆ ಮಾಡಬಹುದು. ಸಾಲ ಏಕೆ ಹೆಚ್ಚಾಗುತ್ತಿದೆ ಎಂದು ಕೇಳುವುದು ತಪ್ಪಲ್ಲ’ ಎಂದರು.

ADVERTISEMENT

‘ಉಚಿತ ಯೋಜನೆಗಳ ಮೂಲಕ ಪರಾವಲಂಬಿಗಳನ್ನು ಸೃಷ್ಟಿಸಲಾಗುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ವ್ಯಕ್ತಪಡಿಸಿರುವ ಅಭಿಪ್ರಾಯದ ಕುರಿತು ಪ್ರತಿಕ್ರಿಯಿಸಿದ ಅವರು, ‘ಬಡವರಿಗಾಗಿ ರೂಪಿಸುವ ಕಾರ್ಯಕ್ರಮಗಳು ಪರಾವಲಂಬಿಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಯಾರಾದರೂ ಹೇಗೆ ಹೇಳಲು ಸಾಧ್ಯ. ಕಾರ್ಪೊರೇಟ್‌ ಕಂಪನಿಗಳ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದಾಗಲೂ, ಅದು ಪರಾವಲಂಬಿಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂಬ ದೃಷ್ಟಿಯಿಂದ ಸುಪ್ರೀಂ ಕೋರ್ಟ್‌ ನೋಡಿದೆಯೇ’ ಎಂದು ಅವರು ಪ್ರಶ್ನೆ ಮಾಡಿದರು. 

‘ಅಂಬೇಡ್ಕರ್‌ ತತ್ವವನ್ನು ಕೊಲ್ಲಬೇಕು ಎಂದು ಬಿಜೆಪಿ ಹಾಗೂ ಅಂಬೇಡ್ಕರ್‌ ಅವರನ್ನು ಬಳಸಿಕೊಳ್ಳಬೇಕು ಎಂದು ಕಾಂಗ್ರೆಸ್ ಯೊಚನೆ ಮಾಡುತ್ತದೆ. ಇವರಿಬ್ಬರ ಮಾತಿನ ನಡುವಿನ ಮೌನವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದಲಿತರು ಮುಖ್ಯಮಂತ್ರಿ ಆಗಬೇಕು ಎಂಬ ಚರ್ಚೆಯನ್ನು ಈಚೆಗೆ ಹುಟ್ಟು ಹಾಕಲಾಗಿದೆ. ಇದರ ಹಿಂದಿನ ಹುನ್ನಾರವನ್ನೂ ನಾವು ತಿಳಿಯಬೇಕು. ರೈತರು ಹಾಗೂ ದಲಿತರನ್ನು ಮತ ಹಾಕುವ ಯಂತ್ರದಂತೆ ಬಳಸಲಾಗಿದೆಯೇ ಹೊರತು, ಅವರಿಗಾಗಿ ಏನೂ ಆಗಿಲ್ಲ. ಇದನ್ನೂ ಪ್ರಶ್ನೆ ಮಾಡಬೇಕು’ ಎಂದರು.

‘ಭ್ರಷ್ಟಾಚಾರ ಎಂದರೆ ಚುನಾವಣೆ’

‘ಭಾರತದಲ್ಲಿ ದೊಡ್ಡ ಭ್ರಷ್ಟಾಚಾರ ಎಂದರೆ ಅದು ಚುನಾವಣೆ. ಜಾತಿ ಆಧಾರದಲ್ಲಿ, ಹಣದ ಆಧಾರದಲ್ಲಿ ಚುನಾಯಿತರಾಗುತ್ತಿದ್ದಾರೆ. ಸೌಹಾರ್ದದಿಂದ ದೇಶವನ್ನು ಮುನ್ನಡೆಸುವ ಕಾರ್ಯ ಆಗುತ್ತಿಲ್ಲ. ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ನೋಡಿ ಜನಪ್ರತಿಗಳನ್ನು ಆರಿಸಬೇಕು. ರಾಜಕಾರಣಿಗಳು ನೀಡುವ ಆಶ್ವಾಸನೆಗಳು ಎಷ್ಟು ಸುಳ್ಳು, ಮಾತಗಳೆಷ್ಟು ಸುಳ್ಳು ಎಂಬುದು ಜನರಿಗೆ ಅರ್ಥವಾಗುತ್ತಿದೆ’ ಎಂದರು.  

‘ವಲಸೆ ಹೋಗುವಂತಹ ಸ್ಥಿತಿ ಉದ್ಭವವಾಗಿದ್ದೇಕೆ?’

ಅಮೆರಿಕದಿಂದ ಅಕ್ರಮ ವಲಸಿಗರನ್ನು ಹೊರಹಾಕುತ್ತಿರುವ ಕುರಿತು ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್‌, ‘ಅಕ್ರಮ ವಲಸಿಗರನ್ನು ಹಿಂದಕ್ಕೆ ಕಳುಹಿಸುವ ಹಕ್ಕು ಪ್ರತಿ ದೇಶಕ್ಕೂ ಇರುತ್ತದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಜೊತೆ ಮಾತುಕತೆ ನಡೆಸುತ್ತಾರೆ ಎನ್ನುವುದು ಮುಖ್ಯವಲ್ಲ. ನಮ್ಮ ದೇಶದಿಂದ ಅಲ್ಲಿಗೆ ಲಕ್ಷಾಂತರ ಮಂದಿ ವಲಸೆ ಹೋಗುವಂತಹ ಸ್ಥಿತಿ ಉದ್ಭವವಾಗಿದ್ದೇಕೆ ಎಂಬುದು ಮುಖ್ಯ.  ನಮ್ಮದು ಪ್ರಜಾಪ್ರಭುತ್ವದ ತಾಯಿ ಎಂದು ಕರೆಸಿಕೊಳ್ಳುವ ಅದ್ಭುತವಾದ ದೇಶ. ಇಲ್ಲಿ ಎಲ್ಲರಿಗೂ ಕೆಲಸ ಇದೆ ಎನ್ನುತ್ತೇವೆ. ಆದರೂ ಲಕ್ಷಾಂತರ ಮಂದಿ ದೇಶವನ್ನು ತೊರೆಯುತ್ತಿರುವುದೇಕೆ ಎಂಬ ಸಮಸ್ಯೆಯ ಮೂಲವನ್ನು ಹುಡುಕಬೇಕು’ ಎಂದರು.

‘ಕೆಲಸ ಮಾಡುವುದಕ್ಕೆ ಎಎಪಿಗೆ ಅವಕಾಶವೇ ಇರಲಿಲ್ಲ’

ನವದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಸೋತ ಕುರಿತು ಪ್ರತಿಕ್ರಿಯಿಸಿದ ಅವರು, ‘ಒಳ್ಳೆಯ ಕೆಲಸ ಮಾಡಿದರಷ್ಟೇ ಸಾಲದು. ಮೂರು ವರ್ಷಗಳಲ್ಲಿ ಆಮ್‌ ಆದ್ಮಿ ಪಕ್ಷಕ್ಕೆ ಕೆಲಸ ಮಾಡುವುದಕ್ಕೂ ಅವಕಾಶ ಇರಲಿಲ್ಲ. ಮುಖ್ಯಮಂತ್ರಿಯನ್ನೇ ಜೈಲಿಗೆ ಹಾಕಲಾಯಿತು.  ಕಾರ್ಯಕ್ರಮಗಳ ಜಾರಿಗೆ ಗವರ್ನರ್‌ ಅವಕಾಶ ನೀಡಲಿಲ್ಲ. ಈ ಬಗ್ಗೆಯೂ  ಪ್ರಜೆಗಳೂ ಯೋಚನೆ ಮಾಡಬೇಕು. ರಾಜಕೀಯ ಪಕ್ಷಗಳೆಲ್ಲವೂ ಒಂದೇ. ವಿರೋಧ ಪಕ್ಷದವರು ನಿರ್ಮಿಸುವ ಕಟ್ಟಡದಲ್ಲಿ ಆಡಳಿತ ಪಕ್ಷದವರ ಪಾಲೂ ಇರುತ್ತದೆ ಅದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.