ADVERTISEMENT

‘ರಾಷ್ಟ್ರೀಯ ಕಲೆ‘ ಮನ್ನಣೆ ಯಕ್ಷಗಾನಕ್ಕೆ ಸಿಗಲಿ: ಶಿರಗುಣಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 16:25 IST
Last Updated 8 ಜುಲೈ 2022, 16:25 IST
ಕಾರ್ಯಕ್ರಮದಲ್ಲಿ ಲಕ್ಷ್ಮೀನಾರಾಯಣ ಹೆಗಡೆ ಶಿರಗುಣಿ ಅವರು ಮಾತನಾಡಿದರು. (ಎಡದಿಂದ) ಎಸ್‌.ಎನ್‌.ನಾಯಕ್‌, ಹರಿಕೃಷ್ಣ ಪುನರೂರು, ಪ್ರೇಮಾನಂದ ಶೆಟ್ಟಿ, ಡಾ.ಅಣ್ಣಯ್ಯ ಕುಲಾಲ್‌, ದಿನೇಶ ಪೈ, ಕೇಶವ ಹೆಗಡೆ ಮಂಗಳೂರು ಹಾಗೂ ಸುಧಾಕರ ರಾವ್‌ ಪೇಜಾವರ ಇದ್ದಾರೆ
ಕಾರ್ಯಕ್ರಮದಲ್ಲಿ ಲಕ್ಷ್ಮೀನಾರಾಯಣ ಹೆಗಡೆ ಶಿರಗುಣಿ ಅವರು ಮಾತನಾಡಿದರು. (ಎಡದಿಂದ) ಎಸ್‌.ಎನ್‌.ನಾಯಕ್‌, ಹರಿಕೃಷ್ಣ ಪುನರೂರು, ಪ್ರೇಮಾನಂದ ಶೆಟ್ಟಿ, ಡಾ.ಅಣ್ಣಯ್ಯ ಕುಲಾಲ್‌, ದಿನೇಶ ಪೈ, ಕೇಶವ ಹೆಗಡೆ ಮಂಗಳೂರು ಹಾಗೂ ಸುಧಾಕರ ರಾವ್‌ ಪೇಜಾವರ ಇದ್ದಾರೆ   

ಮಂಗಳೂರು: 'ಯಕ್ಷಗಾನವನ್ನು ಕರಾವಳಿಯ ಕಲೆ ಎಂದು ಕರೆದರು. ನಂತರ ಇದನ್ನು ರಾಜ್ಯದ ಕಲೆ ಎಂದು ಗುರುತಿಸಿದರು. ಇದು ಇಷ್ಟಕ್ಕೇ ಸೀಮಿತ ಆಗಬಾರದು. ರಾಷ್ಟ್ರೀಯ ಕಲೆ ಎಂಬ ಮನ್ನಣೆ ಯಕ್ಷಗಾನಕ್ಕೆ ಸಿಗಬೇಕು' ಎಂದು ಕಲಾವಿದ ಲಕ್ಷ್ಮೀನಾರಾಯಣ ಹೆಗಡೆ ಶಿರಗುಣಿ ಒತ್ತಾಯಿಸಿದರು.

ನಗರದ ಕಲಾಸಂಗಮ ಚಾರಿಟಬಲ್‌ ಟ್ರಸ್ಟ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಇಲ್ಲಿನ ಮಂಗಳಾದೇವಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಸಂಗೀತ, ನರ್ತನ, ಅಭಿನಯ, ವೇಷಭೂಷಣ, ಹಾವ–ಭಾವಗಳಿಗೆ ಹೇರಳ ಅವಕಾಶ ಇರುವ ಪ್ರಮುಖ ಕಲೆ ಯಕ್ಷಗಾನ. ಶುದ್ಧವಾದ ಪೌರಾಣಿಕ ಕತೆ ಯಕ್ಷಗಾನದ ವೈಶಿಷ್ಟ್ಯ’ ಎಂದರು.

ADVERTISEMENT

‘ಸಂಪೂರ್ಣವಾಗಿ ತಾಯಿ ನುಡಿ ಕನ್ನಡದಲ್ಲೇ ನಡೆಯುವ ಕಾರ್ಯಕ್ರಮವಿದ್ದರೆ, ಅದು ಯಕ್ಷಗಾನ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕಲೆಯ ಮಹತ್ವವನ್ನು ಗುರುತಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮೇಯರ್‌ ಪ್ರೇಮಾನಂದ ಶೆಟ್ಟಿ, ‘ಯಕ್ಷಗಾನ ಅವಸಾನವಾಗುತ್ತಿದೆ ಎಂಬ ಆತಂಕ ಒಂದು ಕಾಲದಲ್ಲಿ ಎದುರಾಗಿತ್ತು. ಆದರೆ ಕರಾವಳಿ ಜಿಲ್ಲೆಗಳ ಕಲಾವಿದರು, ಕಲಾ ಪೋಷಕರು ಹಾಗೂಯಕ್ಷಗಾನ ಪ್ರೇಮಿಗಳು ಇದಕ್ಕೆ ಅವಕಾಶ ನೀಡಿಲ್ಲ. ಈ ಕಲೆಯನ್ನು ಬಹಳಷ್ಟು ಎತ್ತರಕ್ಕೆ ಬೆಳೆಸಿದ್ದಾರೆ’ ಎಂದರು.

ಕಾರ್ಯಕ್ರಮವನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಉದ್ಘಾಟಿಸಿದರು. ಪುಟ್ಟಣ್ಣ ಕುಲಾಲ್‌ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಅಣ್ಣಯ್ಯ ಕುಲಾಲ್‌ ಅಧ್ಯಕ್ಷತೆ ವಹಿಸಿದ್ದರು. ಲೆಕ್ಕಪರಿಶೋಧಕ ಎಸ್‌.ಎನ್‌.ನಾಯಕ್‌, ಉದ್ಯಮಿ ದಿನೇಶ್‌ ಪೈ, ಶಿರಸಿಯ ಯಕ್ಷಗಾನ ಕಲಾಮೇಳದ ವ್ಯವಸ್ಥಾಪಕ ಕೇಶವ ಹೆಗಡೆ ಮಂಗಳೂರು, ಸುಧಾಕರ ರಾವ್‌ ಪೇಜಾವರ, ರವಿ ಅಲೆವೂರಾಯ ಉಪಸ್ಥಿತರಿದ್ದರು.

ಶಿರಸಿ ಯಕ್ಷಗಾನ ಕಲಾಮೇಳದವರು ‘ಮಾಳವಿಕಾ ಪರಿಣಯ’ ಪ್ರಸಂಗವನ್ನು ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.