ADVERTISEMENT

ಸಾಮಾಜಿಕ, ಸಾಂವಿಧಾನಿಕ ನೈತಿಕತೆಗೆ ಹಿನ್ನಡ: ನಿವೃತ್ತ ನ್ಯಾ.ಗೋವಿಂದ ಮಾಥುರ್

ಸಮದರ್ಶಿ ವೇದಿಕೆ, ಹೊಸತು, ಎಂ.ಎಸ್ ಕೃಷ್ಣ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ಬಿ.ವಿ.ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:00 IST
Last Updated 15 ಸೆಪ್ಟೆಂಬರ್ 2025, 5:00 IST
   

ಮಂಗಳೂರು: ಸಂಪ್ರದಾಯ, ಪರಂಪರೆ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ಸಾಮಾಜಿಕ ಮತ್ತು ಸಾಂವಿಧಾನಿಕ ನೈತಿಕತೆಯನ್ನು ಮೀರಿ ನಡೆಯುವ ಪ್ರವೃತ್ತಿ ಈಚಿನ ವರ್ಷಗಳಲ್ಲಿ ವಿಪರೀತ ಹಂತಕ್ಕೆ ತಲುಪಿದೆ. ದೈನಂದಿನ ಬದುಕಿನಲ್ಲಿ ಪಾಲನೆ ಆಗದೇ ಇರುವುದರಿಂದ ನೈತಿಕತೆಗೆ ಹಿನ್ನಡೆಯಾಗಿದೆ ಎಂದು ಅಲಹಾಬಾದ್ ಹೈಕೋರ್ಟ್‌ನ ವಿಶ್ರಾಂತ ಮುಖ್ಯ ನ್ಯಾಯಾಧೀಶ ಗೋವಿಂದ ಮಾಥುರ್ ಅಭಿಪ್ರಾಯಪಟ್ಟರು. 

ಸಮದರ್ಶಿ ವೇದಿಕೆ, ಹೊಸತು ಮತ್ತು ಎಂ.ಎಸ್ ಕೃಷ್ಣ ಸ್ಮಾರಕ ಟ್ರಸ್ಟ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಬಿ.ವಿ.ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಂವಿಧಾನಿಕ ಮತ್ತು ಸಾಮಾಜಿಕ ನೈತಿಕತೆಯ ಸಮತೋಲನ ಎಂಬ ವಿಷಯದಲ್ಲಿ ಮಾತನಾಡಿದ ಅವರು ಸಾಂವಿಧಾನಿಕ ನೈತಿಕತೆಯಲ್ಲಿ ಕೆಟ್ಟತನಕ್ಕೆ ಅವಕಾಶ ಇಲ್ಲ. ಆದರೆ ಅದು ಪಾಲನೆ ಆಗದೇ ಇರುವುದರಿಂದ ಸಮಾಜದಲ್ಲಿ ಕೇಡು ತುಂಬಿದೆ ಎಂದರು.

ಐದು ವರ್ಷಗಳಿಗೊಮ್ಮೆ ಮತದಾನ ಮಾಡಿ ಸುಮ್ಮನಿರುವುದು, ಮತ್ತೊಮ್ಮೆ ಚುಣಾವಣೆ ಘೋಷಣೆಯಾದಾಗ ಸಂಭ್ರಮಿಸುವುದಷ್ಟೇ ಸಂವಿಧಾನವಲ್ಲ. ಪ್ರತಿ ಬಾರಿ ಚುನಾವಣೆ ನಡೆದಾಗಲೂ ಸಮಸ್ಯೆಗಳು ಹಾಗೆಯೇ ಉಳಿದಿರುತ್ತವೆ. ಇಂಥ ಸ್ಥಿತಿ ಸಂವಿಧಾನ ರಚಿಸಿದವರ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಇದರಿಂದಾಗಿ ಸಮಸಮಾಜ ನಿರ್ಮಾಣ ಅಸಾಧ್ಯವಾಗಿದೆ. ಇದೇ ಸಂದರ್ಭದಲ್ಲಿ ವಿಭಿನ್ನ ವಾದಗಳಿಂದಾಗಿ ಸಾಂವಿಧಾನಿಕ ಮತ್ತು ಸಾಮಾಜಿಕ ನೈತಿಕತೆಯಲ್ಲಿ ಸಮನ್ವಯ ಸಾಧಿಸುವುದಕ್ಕೂ ಆಗುತ್ತಿಲ್ಲ ಎಂದು ಅವರು ಹೇಳಿದರು.

ADVERTISEMENT

‘ಮತ್ತೊಬ್ಬರ ಸ್ವಾತಂತ್ರ್ಯಕ್ಕೆ ಮತ್ತು ನಂಬಿಕೆಗೆ ಆಘಾತ ತರುವ ಕೆಲಸ ಆಗಬಾರದು ಎಂಬ ವಿಷಯ ಸಂವಿಧಾನದಲ್ಲಿದೆ. ಎಲ್ಲ ನಂಬಿಕೆ, ಆಚರಣೆಗಳಿಗಿಂತ ಸಂವಿಧಾನವೇ ಶ್ರೇಷ್ಠ ಎಂಬ ಅಂಶವೂ ಇದೆ. ಜಾತ್ಯತೀತತೆ ಮತ್ತು ಸಾಮಾಜಿಕತೆಯ ಆಶಯಗಳಿಗೆ ಧಕ್ಕೆ ಮಾಡುವಂತೆಯೂ ಇಲ್ಲ. ಆದರೂ ಸಮಾಜದಲ್ಲಿ ಇದಕ್ಕೆ ವ್ಯತಿರಿಕ್ತವಾದ ಚಟುವಟಿಕೆಗಳು ನಡೆಯುತ್ತಿವೆ. ಸತಿ ಸಹಗಮನ ಪದ್ಧತಿಯನ್ನು ಆಚರಿಸುವಂತಿಲ್ಲ ಮತ್ತು ಆ ಪದ್ಧತಿಯನ್ನು ವೈಭವೀಕರಿಸುವಂತಿಲ್ಲ ಎಂಬ ಕಾನೂನು ಜಾರಿಗೆ ಬಂದ ನಂತರವೂ ದೇಶದ ಹಲವು ಕಡೆಗಳಲ್ಲಿ ‘ಸತಿ’ಯರನ್ನು ಪೂಜಿಸಲಾಗುತ್ತಿದೆ. ಸತಿ‌ ಮಾತಾ ಕಿ ಜೈ ಎಂಬ ಘೋಷಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುತ್ತಿವೆ. ಮಧ್ಯಪ್ರದೇಶ, ರಾಜಸ್ತಾನ ಮತ್ತು ಗುಜರಾತ್‌ನಲ್ಲಿ ಸತಿ‌ಮಾತಾ ದೇವಸ್ಥಾನಗಳೂ ಇವೆ. ರಾಜಸ್ತಾನದ ಹಳ್ಳಿಯೊಂದರಲ್ಲಿ ಮೋಟರ್ ಸೈಕಲ್‌ಗೆ ಪೂಜೆ ಸಲ್ಲಿಸುವುದು, ಸಾಷ್ಟಾಂಗ ಪ್ರಣಾಮ ಮಾಡುವುದು ನಡೆಯುತ್ತಿದೆ. ವೈಜ್ಞಾನಿಕತೆ ಬೆಳೆಸಬೇಕು ಎಂಬ ಸಂವಿಧಾಣದ ಆಶಯಗಳಿಗೆ ಇಂಥ ಆಚರಣೆಗಳಿಂದ ಧಕ್ಕೆಯಾಗುತ್ತದೆ. ಆದರೆ ತಡೆಯಲು ಆಗದೇ ಇರುವುದು ಹಿನ್ನಡೆ’ ಎಂದು ನ್ಯಾಯಮೂರ್ತಿ ಹೇಳಿದರು.

ಮಾಲಿನ್ಯ ಮತ್ತು ಹಕ್ಕುಗಳು

ಶಬ್ದಮಾಲಿನ್ಯ ಮತ್ತು ವಾಯುಮಾಲಿನ್ಯ ಸಾರ್ವಜನಿಕರಿಗೆ ತೊಂದರೆ ಮಾಡುತ್ತದೆ. ಇದನ್ನು ತಡೆಯಲು ಕಾನೂನು ಇದೆ. ಆದರೆ ಮೂಲಭೂತ ಹಕ್ಕುಗಳ ಹೆಸರಿನಲ್ಲಿ ಅದನ್ನು ಮಾಡುತ್ತಾರೆ. ಇಂಥ ಪರಿಸ್ಥಿತಿ ಸಮತೋಲನ ಸಾಧಿಸಲು ಅಡ್ಡಿಮಾಡುತ್ತದೆ. ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಸಾಮಾಜಿಕ ಅನಿಷ್ಟಗಳ ವಿರುದ್ಧ ರಾಜಿ ಇಲ್ಲದೆ ಕ್ರಮ ಕೈಗೊಳ್ಳುವಂತಾಗಬೇಕು. ಎಲ್ಲವನ್ನೂ ನ್ಯಾಯಾಲಯದ ಮೂಲಕ ಪರಿಹರಿಸಿಕೊಳ್ಳಲು ಹೋಗುವುದಕ್ಕೂ ಮೊದಲು ಸಮಾಜ ಎಚ್ಚೆತ್ತುಕೊಳ್ಳಬೇಕು. ಅನಿಷ್ಟಗಳ ವಿರುದ್ಧ ಕಠಣ ಕ್ರಮವೇ ಆಗಬೇಕು ಎಂದು ಹೇಳಿದ ನ್ಯಾಯಮೂರ್ತಿ ಮಾಥುರ್ ಪಿಐಎಲ್‌ ದಾಖಲಿಸುವಾಗ ಸಾಮಾಜಿಕ ಜಾಗೃತಿಗೆ ಪೂರಕವಾದ ಅಂಶಗಳು ಇರಬೇಕು. ಆಚರಣೆಗಳ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲೂ ಆರೋಗ್ಯಕರ ಸಂಸ್ಕೃತಿ ಉಳಿಸುವ ಅಂಶಗಳು ಇರಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.