ADVERTISEMENT

ದಕ್ಷಿಣ ಕನ್ನಡ ಜಿಲ್ಲೆ ಇಂದೂ ಸಂಪೂರ್ಣ ಬಂದ್‌

ಮನೆಯಿಂದ ಯಾರೂ ಹೊರಬರುವಂತಿಲ್ಲ; ಅಗತ್ಯ ವಸ್ತುಗಳ ಪೂರೈಕೆ ಅಬಾಧಿತ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 16:18 IST
Last Updated 28 ಮಾರ್ಚ್ 2020, 16:18 IST
   

ಮಂಗಳೂರು: ಕೊರೊನಾ ವೈರಸ್‌ ಸೋಂಕು ತಡೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜಾರಿಗೊಳಿಸಿರುವ ಸಂಪೂರ್ಣ ಬಂದ್‌ ಭಾನುವಾರವೂ ಮುಂದುವರಿಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸಂಜೆ ಹಿರಿಯ ಅಧಿಕಾರಿಗಳು ಮತ್ತು ವರ್ತಕರ ಸಭೆ ನಡೆಸಿದ ಬಳಿಕ ಈ ನಿರ್ಧಾರ ಪ್ರಕಟಿಸಿದರು. ಶನಿವಾರವೂ ಸಂಪೂರ್ಣ ಬಂದ್‌ ಆಗಿದ್ದು, ಸತತವಾಗಿ ಎರಡನೇ ದಿನ ಎಲ್ಲ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ.

‘ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಮಾತ್ರ ಕೊರೊನಾ ವೈರಸ್‌ ಸೋಂಕು ತಡೆಯಲು ಸಾಧ್ಯ. ಈ ಕಾರಣದಿಂದ ಜಿಲ್ಲೆಯನ್ನು ಸಂಪೂರ್ಣವಾಗಿ ಬಂದ್‌ ಮಾಡುವುದು ಅನಿವಾರ್ಯ. ಹಾಲು ಪೂರೈಕೆ, ದಿನಪತ್ರಿಕೆಗಳ ವಿತರಣೆ, ಆಸ್ಪತ್ರೆಗಳು ಮತ್ತು ಔಷಧಿ ಅಂಗಡಿಗಳನ್ನು ತೆರೆದಿಡಲು ಈ ಅವಧಿಯಲ್ಲಿ ಅವಕಾಶ ಕಲ್ಪಿಸಲಾಗುವುದು’ ಎಂದು ಸಚಿವರು ತಿಳಿಸಿದರು.

ADVERTISEMENT

ಮನೆಯಿಂದ ಯಾರೂ ಹೊರಬರುವಂತಿಲ್ಲ. ಹಾಲು ವಿತರಕರು ಮನೆ, ಮನೆಗೂ ಹಾಲಿನ ಪ್ಯಾಕೆಟ್‌ಗಳನ್ನು ತಲುಪಿಸುತ್ತಾರೆ. ಔಷಧಿ ಅಂಗಡಿಗಳು ಎಂದಿನಂತೆ ತೆರೆದಿರುತ್ತವೆ. ಅಡುಗೆ ಅನಿಲ ಸಿಲಿಂಡರ್‌ ಪೂರೈಕೆ ಕೂಡ ಇರುತ್ತದೆ. ತುರ್ತು ಸೇವೆಗಳ ಬಳಕೆಗಾಗಿ ಪೆಟ್ರೋಲ್‌ ಬಂಕ್‌ಗಳು ತೆರೆದಿರಲಿವೆ. ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿಗೂ ಯಾವುದೇ ತೊಂದರೆ ಇರುವುದಿಲ್ಲ ಎಂದರು.

ಕಾರ್ಮಿಕರು ಮತ್ತು ನಿರ್ಗತಿಕರಿಗೆ ಕಾರ್ಮಿಕ ಇಲಾಖೆಯಿಂದ ನೆರವು ಒದಗಿಸಲಾಗುವುದು. ನಿರ್ಗತಿಕರಿಗೆ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಸಂಕಷ್ಟದಲ್ಲಿರುವ ಜನರು ನೆರವಿಗಾಗಿ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 1077ಗೆ ಕರೆಮಾಡಿ ನೆರವು ಪಡೆಯಬಹುದು ಎಂದು ತಿಳಿಸಿದರು.

ದಿನಸಿ ಪೂರೈಕೆಗೆ ಚಿಂತನೆ

ಜಿಲ್ಲೆಯ ಜನರಿಗೆ ಮನೆ ಬಾಗಿಲಿಗೆ ದಿನಸಿ ವಸ್ತುಗಳನ್ನು ಪೂರೈಕೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ವ್ಯಾಪಾರಿಗಳ ಜೊತೆ ಈ ಕುರಿತು ಮಾತುಕತೆ ನಡೆಸಲಾಗುತ್ತಿದೆ ಎಂದರು.

ಸರಕು ಸಾಗಣೆಗೆ ಸೀಮಿತ

ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಮುಚ್ಚಿರುವ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಪೊನ್ನುರಾಜ್‌, ‘ಈ ಸಂದರ್ಭದಲ್ಲಿ ಕೇರಳಕ್ಕೆ ಮುಕ್ತ ಸಂಚಾರಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಅಗತ್ಯ ವಸ್ತುಗಳನ್ನು ಸಾಗಿಸುವ ಸರಕು ಸಾಗಣೆ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.