ADVERTISEMENT

ಬೈಕ್‌ ಏರಿದ ಶಾಸಕದ್ವಯರು: ಲಾಕ್‌ ಡೌನ್‌ ಪರಿಶೀಲನೆಗಾಗಿ ವಿವಿಧೆಡೆ ಭೇಟಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 16:07 IST
Last Updated 8 ಏಪ್ರಿಲ್ 2020, 16:07 IST
ಶಾಸಕರಾದ ಯು.ಟಿ.ಖಾದರ್‌ ಮತ್ತು ಡಿ.ವೇದವ್ಯಾಸ ಕಾಮತ್‌ ಅವರು ಬುಧವಾರ ದ್ವಿಚಕ್ರ ವಾಹನದಲ್ಲಿ ಮಂಗಳೂರಿನ ವಿವಿಧೆಡೆ ಸಂಚರಿಸಿ ಲಾಕ್‌ ಡೌನ್‌ ಜಾರಿ ಕುರಿತು ಪರಿಶೀಲನೆ ನಡೆಸಿದರು.– ಪ್ರಜಾವಾಣಿ ಚಿತ್ರ
ಶಾಸಕರಾದ ಯು.ಟಿ.ಖಾದರ್‌ ಮತ್ತು ಡಿ.ವೇದವ್ಯಾಸ ಕಾಮತ್‌ ಅವರು ಬುಧವಾರ ದ್ವಿಚಕ್ರ ವಾಹನದಲ್ಲಿ ಮಂಗಳೂರಿನ ವಿವಿಧೆಡೆ ಸಂಚರಿಸಿ ಲಾಕ್‌ ಡೌನ್‌ ಜಾರಿ ಕುರಿತು ಪರಿಶೀಲನೆ ನಡೆಸಿದರು.– ಪ್ರಜಾವಾಣಿ ಚಿತ್ರ   

ಮಂಗಳೂರು: ಶಾಸಕರಾದ ಯು.ಟಿ.ಖಾದರ್‌ ಮತ್ತು ಡಿ.ವೇದವ್ಯಾಸ ಕಾಮತ್‌ ಅವರು ಬುಧವಾರ ದ್ವಿಚಕ್ರ ವಾಹನ ಏರಿ ನಗರದ ವಿವಿಧೆಡೆ ಭೇಟಿನೀಡಿ, ಲಾಕ್‌ ಡೌನ್‌ ಜಾರಿಯಲ್ಲಿರುವ ಕುರಿತು ಪರಿಶೀಲನೆ ನಡೆಸಿದರು.

ಇಬ್ಬರೂ ಶಾಸಕರು ಎರಡು ದ್ವಿಚಕ್ರ ವಾಹನಗಳಲ್ಲಿ ನಗರದ ವಿವಿಧೆಡೆ ಸುತ್ತಾಡಿದರು. ರಸ್ತೆಯ ಮೇಲೆ ಓಡಾಡುತ್ತಿದ್ದ ಜನರಿಗೆ ಕೊರೊನಾ ವೈರಸ್‌ ಸೋಂಕಿನ ಕುರಿತು ತಿಳಿಹೇಳುವ ಪ್ರಯತ್ನ ಮಾಡಿದರು. ಅನಗತ್ಯವಾಗಿ ಓಡಾಡುತ್ತಿದ್ದ ಜನರಿಗೆ ಮನೆಗೆ ಮರಳುವಂತೆ ಸೂಚಿಸಿದರು. ಕೊರೊನಾ ವೈರಸ್‌ ಸೋಂಕು ತಡೆಗೆ ಸರ್ಕಾರದ ಆದೇಶ ಪಾಲಿಸಿ, ಮನೆಯಲ್ಲೇ ಇರುವಂತೆ ಮನವಿ ಮಾಡಿದರು.

ಲಾಕ್‌ ಡೌನ್‌ ಜಾರಿಗಾಗಿ ನಗರದ ವಿವಿಧ ಸ್ಥಳಗಳಲ್ಲಿ ಸ್ಥಾಪಿಸಿರುವ ಪೊಲೀಸ್‌ ತನಿಖಾ ಠಾಣೆಗಳಿಗೂ ಶಾಸಕರು ಭೇಟಿ ನೀಡಿದರು. ಪೊಲೀಸರ ಕ್ಷೇಮ ವಿಚಾರಿಸಿದ ಖಾದರ್‌ ಮತ್ತು ವೇದವ್ಯಾಸ ಕಾಮತ್‌, ಅನಗತ್ಯವಾಗಿ ರಸ್ತೆಗಿಳಿಯವವರ ವಾಹನ ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿದರು.

ADVERTISEMENT

ಶಾಸಕರ ಭೇಟಿಯ ಸಮಯದಲ್ಲಿ ಬೆಂಗಾವಲಾಗಿ ಜಿಲ್ಲಾಡಳಿತ ಮತ್ತು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೂ ಇದ್ದರು. ವಿವಿಧೆಡೆ ತಳ್ಳುಗಾಡಿಗಳಲ್ಲಿ ತರಕಾರಿ ವ್ಯಾಪಾರಕ್ಕೆ ಹೊರಟಿದ್ದವರನ್ನು ಭೇಟಿಯಾದ ಶಾಸಕರು, ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.