ADVERTISEMENT

ಕೇರಳದ ಮೂವರು ರೋಗಿಗಳು ಮಂಗಳೂರಿಗೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 16:56 IST
Last Updated 8 ಏಪ್ರಿಲ್ 2020, 16:56 IST
   

ಮಂಗಳೂರು: ಕೇರಳದ ಕಾಸರಗೋಡಿನಿಂದ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಬುಧವಾರ ಬೆಳಿಗ್ಗೆಯಿಂದ ನಗರಕ್ಕೆ ಪ್ರವೇಶ ನೀಡಲಾಗುತ್ತಿದೆ. ಮೊದಲ ದಿನವೇ ಮೂವರು ರೋಗಿಗಳು ಬಂದಿದ್ದು, ಎಲ್ಲರನ್ನೂ ದೇರಳಕಟ್ಟೆಯ ಕೆ.ಎಸ್‌. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಸರಗೋಡು ಜಿಲ್ಲೆಯ ಸರ್ಕಾರಿ ವೈದ್ಯಾಧಿಕಾರಿಯ ಶಿಫಾರಸು ಪತ್ರದೊಂದಿಗೆ ಬರುವ ರೋಗಿಗಳಿಗೆ ಮಾತ್ರ ತಲಪಾಡಿ ಗಡಿಯನ್ನು ಹಾದು ಮಂಗಳೂರು ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ನಿಯೋಜಿಸಿರುವ ವೈದ್ಯಕೀಯ ಸಿಬ್ಬಂದಿ ದಾಖಲೆಗಳನ್ನು ಪರಿಶೀಲಿಸಿ, ರೋಗಿಗಳ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದಾರೆ.

ಬುಧವಾರ ಬೆಳಿಗ್ಗೆಯಿಂದಲೇ ರೋಗಿಗಳನ್ನು ಹೊತ್ತ ಆಂಬುಲೆನ್ಸ್‌ಗಳು ಕಾಸರಗೋಡಿನಿಂದ ಮಂಗಳೂರಿನತ್ತ ಬರಲಾರಂಭಿಸಿದವು. ದಾಖಲೆಗಳನ್ನು ಪರಿಶೀಲಿಸಿ, ಆಂಬುಲೆನ್ಸ್‌ ಅನ್ನು ಮಾರ್ಗಸೂಚಿ ಪ್ರಕಾರ ಸ್ಯಾನಿಟೈಸ್‌ ಮಾಡಿದ ಬಳಿಕವೇ ಗಡಿಯ ಒಳಕ್ಕೆ ಬಿಡಲಾಯಿತು. ಎಲ್ಲರಿಗೂ ಕೆ.ಎಸ್‌. ಹೆಗ್ಡೆ ಆಸ್ಪತ್ರೆಗೆ ಹೋಗುವುದಕ್ಕೆ ಸೂಚಿಸಲಾಯಿತು.

ADVERTISEMENT

ವೆನ್ಲಾಕ್‌ಗೆ ಸ್ಥಳಾಂತರ:ಕಾಸರಗೋಡು ಜಿಲ್ಲೆಯಿಂದ ತುರ್ತು ಚಿಕಿತ್ಸೆಗಾಗಿ ಕೆ.ಎಸ್‌. ಹೆಗ್ಡೆ ಆಸ್ಪತ್ರೆಗೆ ಬಂದಿದ್ದ ಒಬ್ಬ ರೋಗಿಯಲ್ಲಿ ಶಂಕಿತ ಕೋವಿಡ್‌–19 ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಈ ಕಾರಣದಿಂದ ಆತನನ್ನು ತಕ್ಷಣವೇ ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಕೋವಿಡ್‌–19 ನಿಗಾ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಗೊತ್ತಾಗಿದೆ.

ಗಡಿಯಲ್ಲಿ ಕೇರಳದ ವೈದ್ಯರು:ಮಂಗಳೂರಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ದಾಖಲೆ ಪರಿಶೀಲಿಸಿ, ದೃಢೀಕರಣ ನೀಡಲು ಕಾಸರಗೋಡಿನಲ್ಲಿ ನಾಲ್ವರು ಸರ್ಕಾರಿ ವೈದ್ಯರನ್ನು ನಿಯೋಜಿಸಲಾಗಿದೆ. ತಲಪಾಡಿ ಗಡಿಯಲ್ಲೂ ಕೇರಳದ ನಾಲ್ವರು ಸರ್ಕಾರಿ ವೈದ್ಯರು ಬುಧವಾರ ಹಾಜರಿದ್ದರು. ರೋಗಿಗಳು ಕರ್ನಾಟಕ ಗಡಿ ಪ್ರವೇಶಿಸುವ ವಿಚಾರದಲ್ಲಿ ಗೊಂದಲ ಉಂಟಾದರೆ ನೆರವು ನೀಡುವುದಕ್ಕಾಗಿ ಅವರನ್ನು ನಿಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.