ADVERTISEMENT

ಕಾಸರಗೋಡು: ಮತ್ತೊಬ್ಬರಲ್ಲಿ ಸೋಂಕು ಪತ್ತೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 15:57 IST
Last Updated 8 ಏಪ್ರಿಲ್ 2020, 15:57 IST

ಮಂಗಳೂರು: ಕಾಸರಗೋಡು ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿಯಲ್ಲಿ ಕೋವಿಡ್‌–19 ಸೋಂಕು ಇರುವುದು ಬುಧವಾರ ದೃಢಪಟ್ಟಿದೆ. ಇದರೊಂದಿಗೆ ಕೇರಳದ ಗಡಿ ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ತಗುಲಿದವರ ಸಂಖ್ಯೆ 152ಕ್ಕೇರಿದೆ.

‘ಕೇರಳದಲ್ಲಿ ಹೊಸದಾಗಿ ಒಂಭತ್ತು ಮಂದಿಯಲ್ಲಿ ಕೋವಿಡ್‌–19 ಸೋಂಕು ಇರುವುದು ಬುಧವಾರ ಖಚಿತಪಟ್ಟಿದೆ. ಈ ಪೈಕಿ ನಾಲ್ವರು ಕಣ್ಣೂರು ಜಿಲ್ಲೆಯವರು. ಇಬ್ಬರು ಅಲಪ್ಪುಳ ಜಿಲ್ಲೆಯವರಾಗಿದ್ದು, ಕಾಸರಗೋಡು, ಪತ್ತನಂತಿಟ್ಟ ಮತ್ತು ತ್ರಿಶೂರ್‌ ಜಿಲ್ಲೆಯ ತಲಾ ಒಬ್ಬರಿಗೆ ಸೋಂಕು ತಗುಲಿದೆ’ ಎಂದು ಕೇರಳ ರಾಜ್ಯದ ಆರೋಗ್ಯ ಇಲಾಖೆ ತಿಳಿಸಿದೆ.

ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕಾಗಿ ಕಾಸರಗೋಡು ಜಿಲ್ಲೆಯಲ್ಲಿ 10,801 ಜನರ ಮೇಲೆ ನಿಗಾ ಇರಿಸಲಾಗಿದೆ. ಈ ಪೈಕಿ 10,547 ಜನರನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಶಂಕಿತ ರೋಗ ಲಕ್ಷಣಗಳು ಕಂಡುಬಂದ ಕಾರಣದಿಂದ 254 ಜನರನ್ನು ಆಸ್ಪತ್ರೆಗೆ ದಾಖಲಿಸಿ, ಐಸೋಲೇಷನ್‌ ವಾರ್ಡ್‌ಗಳಲ್ಲಿ ಇಡಲಾಗಿದೆ. ಬುಧವಾರ 40 ಜನರನ್ನು ಐಸೋಲೇಷನ್‌ ವಾರ್ಡ್‌ಗಳಿಗೆ ದಾಖಲು ಮಾಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ADVERTISEMENT

150ಕ್ಕೂ ಹೆಚ್ಚು ಕೋವಿಡ್‌–19 ಪ್ರಕರಣಗಳು ಪತ್ತೆಯಾಗಿರುವುದರಿಂದ ಕಾಸರಗೋಡು ಜಿಲ್ಲೆಯನ್ನು ಅಪಾಯಕಾರಿ ವಲಯ ಎಂದು ಕೇರಳ ಸರ್ಕಾರ ಗುರುತಿಸಿದೆ. ಕಾಸರಗೋಡು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಟ್ಟೆಚ್ಚರಕ್ಕೆ ಆದೇಶಿಸಲಾಗಿದೆ. ಕೋವಿಡ್‌–19 ರೋಗಿಗಳ ವಸತಿ ಪ್ರದೇಶಗಳಲ್ಲಿ ಸಂಪೂರ್ಣ ಬಂದ್‌ ಜಾರಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.