ADVERTISEMENT

ಕೋವಿಡ್: ಇನ್ನೂರರ ಗಡಿ ದಾಟಿದ ಸಾವು

ಜಿಲ್ಲೆಯಲ್ಲಿ 173 ಜನರಿಗೆ ಸೋಂಕು: 107 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 15:36 IST
Last Updated 6 ಆಗಸ್ಟ್ 2020, 15:36 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮತ್ತೆ 11 ಮಂದಿಯ ಮರಣ ಘೋಷಿಸಲಾಗಿದ್ದು, ಇವರಿಗೆ ಕೋವಿಡ್–19 ಇರುವುದು ದೃಢವಾಗಿದೆ. ಇದರಿಂದಾಗಿ ಸಾವಿನ ಸಂಖ್ಯೆ ಇನ್ನೂರರ ಗಡಿ ದಾಟಿದ್ದು, ಜಿಲ್ಲೆಯಲ್ಲಿ ಒಟ್ಟು 201 ಮಂದಿ ಮೃತಪಟ್ಟಿದ್ದಾರೆ.

ಮಂಗಳೂರು ತಾಲ್ಲೂಕಿನ ಆರು ಮಂದಿ, ಬಂಟ್ವಾಳದ ಇಬ್ಬರು, ಬೇರೆ ಜಿಲ್ಲೆಗಳ ಮೂರು ಜನರು ಮೃತಪಟ್ಟಿದ್ದಾರೆ. ವಿವಿಧ ಕಾಯಿಲೆಗಳಿಂದಾಗಿ ನಗರದ ಖಾಸಗಿ ಹಾಗೂ ವೆನ್ಲಾಕ್‌ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಮೃತಪಟ್ಟವರಲ್ಲಿ ಕೋವಿಡ್‌–19 ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಐಎಲ್‌ಐ ಪ್ರಕರಣವೇ ಹೆಚ್ಚು: ಜಿಲ್ಲೆಯಲ್ಲಿ ಗುರುವಾರ 173 ಮಂದಿಗೆ ಕೋವಿಡ್–19 ಇರುವುದು ದೃಢವಾಗಿದ್ದು, ಈ ಪೈಕಿ ಐಎಲ್‌ಐ ಪ್ರಕರಣಗಳ ಸಂಖ್ಯೆ 83 ಆಗಿದೆ. ಇನ್ನು ಪ್ರಾಥಮಿಕ ಸಂಪರ್ಕದಿಂದ 23 ಜನರಿಗೆ ವಿದೇಶದಿಂದ 4 ಮಂದಿಗೆ ಕೋವಿಡ್–19 ಪತ್ತೆಯಾಗಿದೆ. 13 ಎಸ್‌ಎಆರ್‌ಐ ಪ್ರಕರಣಗಳು ವರದಿಯಾಗಿದ್ದು, 50 ಮಂದಿಯ ಸೋಂಕಿನ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ.

ADVERTISEMENT

ಜಿಲ್ಲೆಯಲ್ಲಿ ಮಂಗಳೂರು ತಾಲ್ಲೂಕಿನಲ್ಲಿಯೇ ಅತ್ಯಧಿಕ ಪ್ರಕರಣಗಳು ಪತ್ತೆಯಾಗಿವೆ. ಗುರುವಾರ ಒಟ್ಟು 173 ಮಂದಿಯ ಪೈಕಿ ಮಂಗಳೂರು ತಾಲ್ಲೂಕಿನಲ್ಲಿ 119 ಮಂದಿಗೆ ಸೋಂಕು ಖಚಿತವಾಗಿದೆ. ಮೂಡುಬಿದಿರೆಯಲ್ಲಿ 4, ಮೂಲ್ಕಿ 1, ಬಂಟ್ವಾಳ 21, ಬೆಳ್ತಂಗಡಿ 4, ಪುತ್ತೂರು 13, ಕಡಬ 2, ಸುಳ್ಯ ತಾಲ್ಲೂಕಿನಲ್ಲಿ 5 ಪ್ರಕರಣಗಳು ಪತ್ತೆಯಾಗಿದ್ದು, ಬೇರೆ ಜಿಲ್ಲೆಯ ನಾಲ್ಕು ಪ್ರಕರಣಗಳಿವೆ.

ಇದುವರೆಗಿನ ಒಟ್ಟು ಪ್ರಕರಣಗಳಲ್ಲಿಯೂ ಮಂಗಳೂರು ತಾಲ್ಲೂಕಿನದ್ದೇ ಹೆಚ್ಚಿನ ಪಾಲಿದೆ. ಇದುವರೆಗೆ ಮಂಗಳೂರು ತಾಲ್ಲೂಕಿನಲ್ಲಿ 4,739 ಮಂದಿಗೆ ಸೋಂಕು ಖಚಿತವಾಗಿದೆ. ಮೂಡುಬಿದಿರೆಯಲ್ಲಿ 98, ಮೂಲ್ಕಿ 91, ಬಂಟ್ವಾಳ 627, ಬೆಳ್ತಂಗಡಿ 314, ಪುತ್ತೂರು 316, ಕಡಬ 55, ಸುಳ್ಯ ತಾಲ್ಲೂಕಿನಲ್ಲಿ 82 ಮಂದಿಗೆ ಕೋವಿಡ್–19 ದೃಢವಾಗಿದ್ದು, ಬೇರೆ ಜಿಲ್ಲೆಯ 393 ಮಂದಿಗೆ ಸೋಂಕು ತಗಲಿದೆ.

107 ಮಂದಿ ಗುಣಮುಖ: ಈ ಮಧ್ಯೆ ನಗರದ ವಿವಿಧ ಖಾಸಗಿ ಆಸ್ಪತ್ರೆ, ವೆನ್ಲಾಕ್‌ ಆಸ್ಪತ್ರೆ ಹಾಗೂ ಕೋವಿಡ್ ಕೇರ್‌ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 107 ಜನರು ಗುಣಮುಖರಾಗಿದ್ದಾರೆ.

ರೋಗ ಲಕ್ಷಣ ಇಲ್ಲದ ಬಹುತೇಕ ಮಂದಿ ಶೀಘ್ರ ಚೇತರಿಕೆ ಆಗುತ್ತಿದ್ದಾರೆ. ಕೋವಿಡ್‌ ಕೇರ್ ಸೆಂಟರ್ ಹಾಗೂ ಹೋಂ ಐಸೋಲೇಷನ್‌ನಲ್ಲಿ ಇರುವವರೇ ಅಧಿಕ ಸಂಖ್ಯೆಯಲ್ಲಿ ಗುಣಮುಖರಾಗಿದ್ದಾರೆ. ಅವರಿಗೆ 14 ದಿನಗಳ ಹೋಂ ಕ್ವಾರಂಟೈನ್‌ ಕಡ್ಡಾಯವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಸರಗೋಡು; 153 ಮಂದಿಗೆ ಸೋಂಕು
ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ ಮತ್ತೆ 153 ಮಂದಿಗೆ ಕೋವಿಡ್‌–19 ದೃಢವಾಗಿದೆ. ಈ ಪೈಕಿ 139 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಈ ಮಧ್ಯೆ ಜಿಲ್ಲೆಯಲ್ಲಿ 61 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 977 ಸಕ್ರಿಯ ಪ್ರಕರಣಗಳಿವೆ.

ಕೋವಿಡ್– 19 ಹರಡುವುದನ್ನು ತಡೆಗಟ್ಟಲು ಮುಂದಿನ 14 ದಿನಗಳವರೆಗೆ ನಾವು ಮತ್ತು ನಮ್ಮ ಕುಟುಂಬದವರು ಸಾರ್ವಜನಿಕ ಆಚರಣೆ ಮತ್ತು ಖಾಸಗಿ ಸಮಾರಂಭಗಳಿಗೆ ಹಾಜರಾಗುವುದಿಲ್ಲ ಎಂದು ಕಾಸರಗೋಡು ಜಿಲ್ಲೆಯ ಸರ್ಕಾರಿ ನೌಕರರು ಗುರುವಾರ ಪ್ರತಿಜ್ಞೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.