ADVERTISEMENT

ಮಂಗಳೂರು | ಎಲ್ಲರ ಗಂಟಲು ದ್ರವದ ಮಾದರಿ ಪರೀಕ್ಷೆಗೆ

ದುಬೈನಿಂದ ಬಂದ 110 ಮಂದಿಗೆ ಜಿಲ್ಲೆಯಲ್ಲಿ ಕ್ವಾರಂಟೈನ್‌

​ಪ್ರಜಾವಾಣಿ ವಾರ್ತೆ
Published 19 ಮೇ 2020, 14:54 IST
Last Updated 19 ಮೇ 2020, 14:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ದುಬೈನಿಂದ ಸೋಮವಾರ ಸಂಜೆ ಇಲ್ಲಿನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕನ್ನಡಿಗರ ಪೈಕಿ 110 ಜನರನ್ನು ಜಿಲ್ಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

ಒಟ್ಟು 178 ಪ್ರಯಾಣಿಕರು ಸೋಮವಾರ ದುಬೈನಿಂದ ಬಂದಿದ್ದು, ಈ ಪೈಕಿ 48 ಮಂದಿ ಉಡುಪಿಗೆ ಹಾಗೂ 20 ಮಂದಿ ಇತರೆ ಜಿಲ್ಲೆಗಳಿಗೆ ತೆರಳಿದ್ದಾರೆ. ಜಿಲ್ಲೆಯಲ್ಲಿರುವ 110 ಜನರಲ್ಲಿ 24 ಮಂದಿ ಉಚಿತ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡುವಂತೆ ಕೋರಿದ್ದು, ಜಿಲ್ಲಾಡಳಿತ ನಿಗದಿಪಡಿಸಿರುವ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಗಂಟಲು ದ್ರವದ ಮಾದರಿ ಸಂಗ್ರಹ: ಇದೇ 12 ರಂದು ದುಬೈನಿಂದ ಬಂದಿದ್ದ ಪ್ರಯಾಣಿಕರ ಪೈಕಿ 15 ಜನರಲ್ಲಿ ಕೋವಿಡ್–19 ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲಾಡಳಿತದ ವತಿಯಿಂದ ಅಗತ್ಯ ಮುಂಜಾಗ್ರತಾ ವಹಿಸಲಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಿ, ಶ್ರೇಣಿಗೆ ಅನುಗುಣವಾಗಿ ಕ್ವಾರಂಟೈನ್‌ ಮಾಡಲಾಗಿದೆ.

ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳಿದಿರುವ ಎಲ್ಲ 110 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ರವಾನಿಸಲಾಗಿದೆ. ಇದರಿಂದಾಗಿ ಮಂಗಳವಾರ ಒಟ್ಟು 267 ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಕಂಟೈನ್‌ಮೆಂಟ್‌ ಝೋನ್‌: ಇದೇ 18 ರಂದು ಕೋವಿಡ್‌–19 ಸೋಂಕು ದೃಢಪಟ್ಟಿರುವ 55 ವರ್ಷದ ಮಹಿಳೆ ವಾಸಿಸುತ್ತಿದ್ದ ಯೆಯ್ಯಾಡಿ ಗುಂಡಳಿಕೆ ಗ್ರಾಮವನ್ನು ಕಂಟೈನ್‌ಮೆಂಟ್‌ ವಲಯವಾಗಿ ಘೋಷಣೆ ಮಾಡಲಾಗಿದೆ. ಕಂಟೈನ್‌ಮೆಂಟ್‌ ವಲಯದ ವ್ಯಾಪ್ತಿಯಲ್ಲಿ ಒಟ್ಟು 14 ಮನೆಗಳಿದ್ದು, 48 ಜನರು ವಾಸವಾಗಿದ್ದಾರೆ.

5 ಕಿ.ಮೀ. ವ್ಯಾಪ್ತಿಯನ್ನು ಬಫರ್ ಝೋನ್‌ ಆಗಿ ಘೋಷಿಸಲಾಗಿದ್ದು, 22,600 ಮನೆಗಳು, 4,650 ಅಂಗಡಿಗಳು, 98 ಕಚೇರಿಗಳು ಇವೆ. ಒಟ್ಟು 1.24 ಲಕ್ಷ ಜನರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಈ ಪ್ರದೇಶಕ್ಕೆ ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌–1 ಅವರನ್ನು ಇನ್ಸಿಡೆಂಟ್‌ ಕಮಾಂಡರ್‌ ಆಗಿ ನೇಮಿಸಲಾಗಿದ್ದು, ಅಲ್ಲಿನ ವ್ಯವಸ್ಥೆಗಳ ಬಗ್ಗೆ ನೋಡಿಕೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.