ADVERTISEMENT

ಮಂಗಳೂರು | ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೂ ಕೋವಿಡ್‌–19

​ಪ್ರಜಾವಾಣಿ ವಾರ್ತೆ
Published 22 ಮೇ 2020, 14:49 IST
Last Updated 22 ಮೇ 2020, 14:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಮೂಡುಬಿದಿರೆ ತಾಲ್ಲೂಕಿನ ಕಡಂದಲೆಯಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದ 55 ವರ್ಷದ ವ್ಯಕ್ತಿಗೆ ಕೋವಿಡ್-19 ಸೋಂಕು ತಗಲಿರುವುದು ದೃಢವಾಗಿದೆ.

ಬುಧವಾರ ಮುಂಬೈನಿಂದ ಸಹೋದರರ ಜತೆಗೆ ಊರಿಗೆ ಬಂದಿದ್ದ ಈ ವ್ಯಕ್ತಿಯನ್ನು ಕಡಂದಲೆಯ ಜಿಲ್ಲಾ ಪಂಚಾಯಿತಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ, ಅವರು ಶಾಲೆಯ ಜಗುಲಿಯ ಪಕಾಸಿಗೆ ಬಟ್ಟೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮೃತರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿ ಶುಕ್ರವಾರ ಜಿಲ್ಲಾಡಳಿತದ ಕೈ ಸೇರಿದ್ದು, ವರದಿಯಲ್ಲಿ ಮೃತ ವ್ಯಕ್ತಿಗೆ ಕೋವಿಡ್ ಸೋಂಕು ಇದ್ದಿದ್ದು ದೃಢಪಟ್ಟಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಈ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಅವರ ಕುಟುಂಬದ ಸಮ್ಮತಿಯೊಂದಿಗೆ ಕೋವಿಡ್ ನಿಯಮಾವಳಿಗೆ ಅನುಗುಣವಾಗಿ ನಗರದ ಬೋಳೂರು ವಿದ್ಯುತ್ ಚಿತಾಗಾರದಲ್ಲಿ ವೈದ್ಯಕೀಯ ನಿಗಾ ಸಹಿತ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ADVERTISEMENT

ಬೆಳ್ತಂಗಡಿ ಯುವತಿಗೆ ಸೋಂಕು: ಮುಂಬೈ ಸಂಪರ್ಕದಿಂದ ಜಿಲ್ಲೆಯಲ್ಲಿ ಮತ್ತೊಂದು ಕೋವಿಡ್‌–19 ಪ್ರಕರಣ ದೃಢವಾಗಿದೆ. ಡೊಂಬಿವಿಲಿಯಿಂದ ಬಂದಿದ್ದ ಬೆಳ್ತಂಗಡಿ ತಾಲ್ಲೂಕಿನ ಅರಂಬೋಡಿ ಗ್ರಾಮದ 29 ವರ್ಷದ ಯುವತಿಯಲ್ಲಿ ಸೋಂಕು ಖಚಿತವಾಗಿದೆ.

ಸದ್ಯ ಯುವತಿ ಜಿಲ್ಲಾಡಳಿತದ ವತಿಯಿಂದ ಬೆಳ್ತಂಗಡಿಯಲ್ಲಿ ಸ್ಥಾಪಿಸಲಾಗಿರುವ ಕ್ವಾರಂಟೈನ್ ಕೇಂದ್ರದಲ್ಲಿದ್ದು, ಇವರ ಗಂಟಲು ದ್ರವದ ಪರೀಕ್ಷೆಗೆ ಒಳಪಡಿಸಲಾಗಿತ್ತು. ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಇದೀಗ 63ಕ್ಕೆ ಏರಿದೆ.

ಶುಕ್ರವಾರದವರೆಗೆ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 6,251 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 5,671 ಮಾದರಿಗಳ ವರದಿ ಬಂದಿದೆ. ಇವುಗಳಲ್ಲಿ 5,609 ವರದಿಗಳು ನೆಗೆಟಿವ್ ಬಂದಿದ್ದು, ಇನ್ನೂ 580 ಮಾದರಿಗಳ ವರದಿ ಬರಬೇಕಾಗಿದೆ. ಜಿಲ್ಲೆಯಲ್ಲಿ ಒಟ್ಟು 63 ಪ್ರಕರಣಗಳು ದೃಢವಾಗಿದ್ದು, ಇವುಗಳಲ್ಲಿ 8 ಪ್ರಕರಣಗಳು ಬೇರೆ ಜಿಲ್ಲೆಗೆ ಸಂಬಂಧಿಸಿದ್ದಾಗಿದೆ.

ಕಾಸರಗೋಡು: ಮತ್ತೆ 7 ಜನರಿಗೆ ಸೋಂಕು
ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 7 ಮಂದಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 26ಕ್ಕೆ ಏರಿದೆ.

ಪುತ್ತಿಗೆ ನಿವಾಸಿಯಾಗಿರುವ 57 ವರ್ಷದ ವ್ಯಕ್ತಿ, ಮುಳಿಯಾರು ನಿವಾಸಿ 42 ವರ್ಷದ ವ್ಯಕ್ತಿ, ಕುಂಬಳೆ ನಿವಾಸಿಗಳಾದ 36, 38, 42, 56 ವರ್ಷದ ವ್ಯಕ್ತಿಗಳಿಗೆ ಸೋಂಕು ದೃಢವಾಗಿದೆ. ಇವರಲ್ಲಿ 6 ಮಂದಿ ಪುರುಷರಾಗಿದ್ದಾರೆ. ಪುತ್ತಿಗೆ ನಿವಾಸಿ ಮಹಾರಾಷ್ಟ್ರದಿಂದ ಬಂದಿದ್ದು, ಕುಂಬಳೆ ನಿವಾಸಿಗಳು ಒಂದೇ ವಾಹನದಲ್ಲಿ ಸಂಚರಿಸಿದ್ದರಿಂದ ಸೋಂಕು ತಗಲಿದೆ. ಇವರಲ್ಲಿ ಇಬ್ಬರು ಸಹೋದರರಾಗಿದ್ದು, ಇವರೆಲ್ಲರೂ ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ 6,021 ಮಂದಿಯ ಮಾದರಿ ತಪಾಸಣೆಗೆ ಕಳುಹಿಸಲಾಗಿದ್ದು, 5,434 ಮಂದಿಯ ಫಲಿತಾಂಶ ನೆಗೆಟಿವ್ ಬಂದಿದೆ. 196 ಮಂದಿಯ ಫಲಿತಾಂಶ ಲಭಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.