ADVERTISEMENT

ಮಂಗಳೂರು: ಕಾಲೇಜು ವಿದ್ಯಾರ್ಥಿಗಳ ನಡುವೆ ಘರ್ಷಣೆ, 9 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 7:11 IST
Last Updated 3 ಡಿಸೆಂಬರ್ 2021, 7:11 IST
ಗುಜ್ಜರಕೆರೆ ಪ್ರದೇಶಕ್ಕೆ ಭೇಟಿ ನೀಡಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಜನರ ಅಹವಾಲು ಆಲಿಸಿದರು.
ಗುಜ್ಜರಕೆರೆ ಪ್ರದೇಶಕ್ಕೆ ಭೇಟಿ ನೀಡಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಜನರ ಅಹವಾಲು ಆಲಿಸಿದರು.   

ಮಂಗಳೂರು: ನಗರದ ಗುಜ್ಜರಕೆರೆಯ ಹಾಸ್ಟೆಲ್‌ನಲ್ಲಿ ವಾಸವಿದ್ದ ಕಾಲೇಜಿನ ವಿದ್ಯಾರ್ಥಿಗಳ ಎರಡು ತಂಡಗಳ ನಡುವೆ ಘರ್ಷಣೆ ನಡೆದಿದೆ. ವೈಯಕ್ತಿಕ ದ್ವೇಷವೇ ಈ ಘಟನೆಗೆ ಕಾರಣ ಎನ್ನಲಾಗಿದ್ದು, 9 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹೊಡೆದಾಟ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಹಾಗೂ ಐದು ಮಂದಿ ಪೊಲೀಸರು ಗಾಯಗೊಂಡಿದ್ದಾರೆ.

ಆದಿತ್ಯ, ಕೆನ್ ಜಾನ್ಸನ್, ಮುಹಮ್ಮದ್, ಅಬ್ದುಲ್ ಶಾಹಿದ್, ವಿಮಲ್, ಫಹದ್, ಅಬುತಹರ್, ಮುಹಮ್ಮದ್ ನಾಸಿಫ್, ಆದರ್ಶ ಬಂಧಿತ ವಿದ್ಯಾರ್ಥಿಗಳು. ಒಟ್ಟು 16 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರುದಾರ ಆದರ್ಶ ಪ್ರೇಮಕುಮಾರ್ (21)ಮೂಲತಃ ಕೇರಳದ ಕೊಲ್ಲಂ ನಿವಾಸಿಯಾಗಿದ್ದು ನಗರದ ಕಾಲೇಜು ಒಂದರಲ್ಲಿ 3 ನೇ ವರ್ಷದ ಬಿಎಸ್ಸಿ ಹಾಸ್ಪಿಟಾಲಿಟಿ ಸೈನ್ಸ್ ವಿದ್ಯಾರ್ಥಿಯಾಗಿದ್ದಾರೆ. ಈತ ನಗರದ ಲೈಟ್ ಹೌಸ್ ಹಿಲ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ.

ಆದರ್ಶ್ ಡಿ. 2 ರಂದು ಸಂಜೆ 7 ಗಂಟೆಗೆ ತನ್ನ ಸ್ನೇಹಿತ ಅಭಿರಾಮಿ ಜೊತೆ ಮಾತನಾಡುತ್ತಿದ್ದಾಗ, ಸಿನಾನ್ ಮತ್ತು ಅದೇ ಕಾಲೇಜಿನ ಇತರ ಎಂಟು ವಿದ್ಯಾರ್ಥಿಗಳು ಇಂಟರ್ಲಾಕ್ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಆದರ್ಶ್ ಹಾಗೂ ಮೊಹಮ್ಮದ್ ನಾಸಿಫ್ ಗಾಯಗೊಂಡಿದ್ದಾರೆ. ಗಲಾಟೆ ಬಿಡಿಸಲು ಬಂದಿದ್ದ ಸ್ನೇಹಿತರಾದ ಶನಿನ್ ಮತ್ತು ಶ್ರವಣ್ ಅವರಿಗೆ ಜೀವ ಬೆದರಿಕೆ ಇದೆ ಎಂದು ದೂರುದಾರರು ತಿಳಿಸಿದ್ದಾರೆ.

ಈ ಸಂಬಂಧ ಆದಿತ್ಯ, ಕೆನ್ ಜಾನ್ಸನ್, ಮೊಹಮ್ಮದ್, ಅಬ್ದುಲ್ ಶಾಹಿದ್ ಮತ್ತು ವಿಮಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಗಲಾಟೆ ಬಿಡಿಸಲು ಬಂದಿದ್ದ ತನ್ನ ಸ್ನೇಹಿತರಾದ ಶನಿನ್ ಮತ್ತು ಶ್ರವಣ್ ಅವರು ಗುಜ್ಜರಕರೆ ಬಳಿ ಹಾಸ್ಟೆಲ್ ನಲ್ಲಿ ವಾಸವಾಗಿದ್ದು, ಅವರಿಗೆ ಅಪಾಯ ಇರುವುದರಿಂದ ರಕ್ಷಣೆ ನೀಡುವಂತೆ ಆದರ್ಶ ಪೊಲೀಸರಿಗೆ‌ ಮನವಿ‌ ಮಾಡಿದ್ದರು.

ರಾತ್ರಿ 10 ಗಂಟೆ ಸುಮಾರಿಗೆ ಪಿಎಸ್‌ಐ ಶೀತಲ್ ಹಾಗೂ ಸಿಬ್ಬಂದಿ ಹಾಸ್ಟೆಲ್ ಬಳಿ ಹೋದಾಗ, ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿಗಳು ಇಂಟರ್ ಲಾಕ್, ಕಲ್ಲು ಹಾಗೂ ಕುರ್ಚಿಗಳನ್ನು ಎಸೆದು ಪೊಲೀಸರ ಮೇಲೆ‌ ಹಲ್ಲೆ ನಡೆಸಿದ್ದಾರೆ. ದಾಳಿಯಲ್ಲಿ ಐವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಅಬ್ದುಲ್ ಸಿನಾನ್, ಆದರ್ಶ್ ಮತ್ತು ಅವರ ಸ್ನೇಹಿತರ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪೊಲೀಸರು ಫಹಾದ್, ಅಬು ತಾಹರ್, ಮೊಹಮ್ಮದ್ ನಾಸಿಫ್ ಮತ್ತು ಆದರ್ಶ್ ಅವರನ್ನು ಬಂಧಿಸಿದ್ದಾರೆ.

ಈ ಘಟನೆ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪ್ರಸಕ್ತ ಪರಿಸ್ಥಿತಿ ಶಾಂತವಾಗಿದೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಘಟನೆಯಿಂದ ಆತಂಕಗೊಂಡಿರುವ ಗುಜ್ಜರಕೆರೆ ಪ್ರದೇಶದ ನಿವಾಸಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT