ADVERTISEMENT

ಪುತ್ತೂರು | 'ಬೆಳೆವಿಮೆ ಪರಿಹಾರ ಪಾವತಿ: ಸಮಸ್ಯೆ ನಿವಾರಿಸಲು ಕ್ರಮ'

ಮೈಸೂರು ವಿಭಾಗ ಮಟ್ಟದ ಕೃಷಿಮೇಳದಲ್ಲಿ ಕೃಷಿ ಸಚಿವ ಎನ್‌.ಚಲುವರಾಯ ಸ್ವಾಮಿ ಭರವಸೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 6:12 IST
Last Updated 11 ಜನವರಿ 2026, 6:12 IST
ಪುತ್ತೂರಿನ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಶನಿವಾರ ಆರಂಭಗೊಂಡ 3 ದಿನಗಳ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ- ಸಸ್ಯಮೇಳವನ್ನು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಉದ್ಘಾಟಿಸಿದರು. ಶಾಸಕರಾದ ಅಶೋಕ್ ರೈ, ಭಾಗೀರಥಿ ಮುರುಳ್ಯ, ಮಂಜುನಾಥ ಭಂಡಾರಿ ಭಾಗವಹಿಸಿದ್ದರು
ಪುತ್ತೂರಿನ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಶನಿವಾರ ಆರಂಭಗೊಂಡ 3 ದಿನಗಳ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ- ಸಸ್ಯಮೇಳವನ್ನು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಉದ್ಘಾಟಿಸಿದರು. ಶಾಸಕರಾದ ಅಶೋಕ್ ರೈ, ಭಾಗೀರಥಿ ಮುರುಳ್ಯ, ಮಂಜುನಾಥ ಭಂಡಾರಿ ಭಾಗವಹಿಸಿದ್ದರು   

ಪುತ್ತೂರು (ದಕ್ಷಿಣ ಕನ್ನಡ): ‘ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯ ಪರಿಹಾರ ಮೊತ್ತ ಪಾವತಿಯಲ್ಲಿ ಆಗಿರುವ ಸಮಸ್ಯೆ ನಿವಾರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಪರಿಹಾರ ಪಾವತಿಯಲ್ಲಿ ಉಂಟಾದ ತಾರತಮ್ಯ ನಿವಾರಣೆಗೆ ತೋಟಗಾರಿಕೆ ಸಚಿವರು ಕ್ರಮ ಆರಂಭಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಅಳವಡಿಸಲಾದ ಮಳೆ ಮಾಪಕ, ಹವಾಮಾನ ಮಾಪಕಗಳನ್ನು ಮಳೆಗಾಲ ಆರಂಭಕ್ಕೂ ಮೊದಲು ಸರಿಪಡಿಸಲಾಗುವುದು’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ಪುತ್ತೂರಿನ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಶನಿವಾರ ಆರಂಭಗೊಂಡ 3 ದಿನಗಳ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ- ಸಸ್ಯಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಳೆ ವಿಮೆಯಲ್ಲಾದ ಅನ್ಯಾಯದ ಬಗ್ಗೆ ಪುತ್ತೂರು ಶಾಸಕ ಸದನದಲ್ಲಿ ಗಮನ ಸೆಳೆದಿದ್ದಾರೆ. ನಾನು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಜತೆ ಮಾತನಾಡಿದ್ದೇನೆ. ಸಮಸ್ಯೆ ಸರಿಯಾಗಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ವಿಮೆ ಯೋಜನೆಯಡಿ ರಾಜ್ಯದಲ್ಲಿ ಈಗಾಗಲೇ ₹ 5 ಸಾವಿರ ಕೋಟಿ ಪಾವತಿಸಲಾಗಿದೆ. ಹಿಂದಿನ ವರ್ಷಗಳಲ್ಲಿ ವಿಮೆ ಯೋಜನೆಯ ನೋಂದಣಿ 13 ಲಕ್ಷದಷ್ಟಿದ್ದರೆ, ಈಗ 23 ಲಕ್ಷ ದಾಟಿದೆ’ ಎಂದರು.

ADVERTISEMENT

ಕೃಷಿ ಇಲಾಖೆಯಿಂದ 31 ಜಿಲ್ಲೆಗಳಿಗೆ ₹ 2,500 ಕೋಟಿ ಸಹಾಯಧನ ನೀಡಿದ್ದೇವೆ. ರಾಜ್ಯದಲ್ಲಿ 83 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಕೃಷಿ ಇದ್ದು, 25 ಲಕ್ಷ ಹೆಕ್ಟೇರ್‌ನಲ್ಲಿ ಮಿಶ್ರ ಬೆಳೆಇದೆ. ವಿವಿಧ ಕಾರಣಗಳಿಂದ ಕೃಷಿ ಪ್ರದೇಶ ಕಡಿಮೆಯಾಗುತ್ತಿದ್ದು, ಈ ಹಂತದಲ್ಲಿ ರೈತರು ಯಾಂತ್ರಿಕ ಕೃಷಿ, ಸಮಗ್ರ ಕೃಷಿಗೆ ಆದ್ಯತೆ ನೀಡಬೇಕು. ‌ಬೆಳೆದ ಬೆಳೆಗಳನ್ನು ಸಂಸ್ಕರಣೆ ಮಾಡಿ ಮಾರುಕಟ್ಟೆಗೆ ನೀಡಿದರೆ ಐದಾರು ಪಟ್ಟು ಬೆಲೆ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ’ ಎಂದರು.

‘ನಮ್ಮ ಸರ್ಕಾರವು ಗೊಬ್ಬರ, ಬಿತ್ತನೆ ಬೀಜ ಸಮಸ್ಯೆಗಳನ್ನು ಕೇಂದ್ರದ ಅಸಹಕಾರದ ನಡುವೆಯೂ ನಿವಾರಿಸಿದೆ. ಕೆಲವೇ ತಾಲ್ಲೂಕುಗಳಲ್ಲಿದ್ದ ಕೃಷಿ ಭಾಗ್ಯ ಯೋಜನೆಯನ್ನು 224 ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಿಸಿದೆ. ಕರ್ನಾಟಕದ ಕೃಷಿ ಈಗ ಜಗತ್ತಿನ ಗಮನ ಸೆಳೆದಿದ್ದು, ದೇಶದಲ್ಲೇ ‘ನಂಬರ್ ವನ್ ಕೃಷಿ’ ಎಂಬ ಪುರಸ್ಕಾರವನ್ನು ಕೇಂದ್ರದಿಂದ ಪಡೆದುಕೊಂಡಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ರೈ ಮಾತನಾಡಿ, ಅಡಿಕೆ, ರಬ್ಬರ್ ಸೇರಿದಂತೆ 28 ಬೆಳೆಗಳನ್ನು ಕೃಷಿ ಬೆಳೆಗಳೆಂದು ಘೋಷಿಸಲು ಕೇಂದ್ರಕ್ಕೆ ರಾಜ್ಯದಿಂದ ಶಿಫಾರಸು ಮಾಡಲಾಗಿದೆ. ಇದರ ಅನುಷ್ಠಾನಕ್ಕೆ ಸರ್ಕಾರ ಶ್ರಮಿಸಬೇಕೆಂದು ಆಗ್ರಹಿಸಿದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮುಖಂಡ ಸಂಜೀವ ಮಠಂದೂರು ಜಿಲ್ಲೆಯ ರೈತರ ಬೇಡಿಕೆಗಳನ್ನು ಸಚಿವರ ಮುಂದಿಟ್ಟರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕರ್ನಾಟಕ ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ, ನಿಕಟಪೂರ್ವ ಅಧ್ಯಕ್ಷ ಮಂಜುನಾಥ ಗೌಡ ಎಸ್.ಆರ್., ಪುತ್ತೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ರಾಜ್ಯ ಬೀಜ ಮತ್ತು ಸಾವಯವ ನಿಗಮದ ಅಧ್ಯಕ್ಷೆ ಲಾವಣ್ಯ ಬಳ್ಳಾಲ್ ಭಾಗವಹಿಸಿದ್ದರು.

ಸಾಧಕ ಪ್ರಶಸ್ತಿ ಪ್ರದಾನ: ಪಂಜಿಗುಡ್ಡೆ ಈಶ್ವರ ಭಟ್ ಪುತ್ತೂರು, ಕಾಂತಪ್ಪ ಪೂಜಾರಿ ಬೆಳ್ತಂಗಡಿ, ಪ್ರತಿಭಾ ಹೆಗ್ಡೆ ಮಂಗಳೂರು, ಪ್ರೇಮನಾಥ ಶೆಟ್ಟಿ ಬಂಟ್ವಾಳ, ಅರವಿಂದ ಮುಳ್ಳಂಕೊಚ್ಚಿ ಕಡಬ, ಪ್ರಮಿಳಾ ಎಸ್.ಶೆಟ್ಟಿ ಮೂಲ್ಕಿ, ಜಿ.ಟಿ.ರಾಜಾರಾಂ ಭಟ್ ಉಳ್ಳಾಲ, ಡಿ.ಎನ್.ಚಂದ್ರಶೇಖರ್ ಸುಳ್ಯ, ನಾಗಪ್ಪ ಪೂಜಾರಿ ಮೂಡುಬಿದಿರೆ ಅವರಿಗೆ ಅತ್ಯುತ್ತಮ ಕೃಷಿ ಸಾಧಕ ಪುರಸ್ಕಾರ, ವೆಂಕಪ್ಪ ಜಿ.ಗೋಳ್ತಮಜಲು ಬಂಟ್ವಾಳ, ಶೀನಪ್ಪ ಪೂಜಾರಿ ಹೊಸಮಠ ಕಡಬ, ಲಿಂಗಪ್ಪ ಮಡಿವಾಳ ಬೆಳ್ತಂಗಡಿ, ತೀರ್ಥರಾಮ ಬೈತಡ್ಕ ಸುಳ್ಯ, ಮೋಹನದಾಸ್ ಕಾಮತ್ ಪುತ್ತೂರು ಅವರಿಗೆ ಅತ್ಯುತ್ತಮ ಕೃಷಿ ಕೂಲಿ ಕಾರ್ಮಿಕ ಪುರಸ್ಕಾರ, ಕೃಷಿ ಸಲಕರಣೆ ಉತ್ಪಾದಕ ಉದ್ಯಮಿ ಪುರಸ್ಕಾರವನ್ನು ಕೇಶವ ಗೌಡ ಅಮೈಗುತ್ತು, ಕೆ.ಪಿ.ಮಹಮ್ಮದ್ ಸಾದಿಕ್, ಪುರುಷೋತ್ತಮ ಬಿ.ಅವರಿಗೆ ಪ್ರದಾನ ಮಾಡಲಾಯಿತು.

ಬ್ರಹ್ಮಾವರದಲ್ಲಿ ಕೃಷಿ ಕಾಲೇಜು: ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಸ್ಥಾಪಿಸಲು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದರಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡು ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಸ್ಥಾಪಿಸಲಾಗುವುದು. ಈಗಾಗಲೇ ಕಾಲೇಜಿಗೆ ಮಂಜೂರಾತಿ ನೀಡಲಾಗಿದೆ ಎಂದು ಎನ್‌.ಚಲುವರಾಯಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.