ವಿಟ್ಲ: ಕಲೆ, ಸಾಹಿತ್ಯ, ಸಂಗೀತ ದೇಶದ ಮೌಲ್ಯವಾಗಿದ್ದು, ಭಾರತವು ಆಧ್ಯಾತ್ಮಿಕತೆಯಿಂದ ಸಂಪದ್ಭರಿತವಾಗಿದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಸಂಸ್ಥಾನದಲ್ಲಿ ಶನಿವಾರ ನಡೆದ ಲಲಿತಾಪಂಚಮಿ ಮಹೋತ್ಸವ, ಶ್ರೀಒಡಿಯೂರು ಕಲಾಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಭಾಷೆಗೂ ಸಂಸ್ಕಾರಕ್ಕೂ ಹತ್ತಿರವಾದ ಸಂಬಂಧವಿದೆ. ಧರ್ಮ ಸಂಸ್ಕೃತಿ ಶ್ರೇಷ್ಠವಾಗಿದ್ದು, ಅವುಗಳು ಜೊತೆಜೊತೆಯಾಗಿ ಸಾಗಿದಾಗ ಬದುಕು ಹಸನಾಗುತ್ತದೆ. ಈ ಮೂಲಕ ಬದುಕಿನಲ್ಲಿ ಸಂಸ್ಕಾರ ಅಳವಡಿಸಿಕೊಳ್ಳಬೇಕು. ಪರಿಶ್ರಮ, ಆದರ್ಶ ಬದುಕಿಗೆ ಮುಖ್ಯವಾಗಿದೆ ಎಂದರು.
ನಿವೃತ್ತ ಶಿಕ್ಷಕ ದಾಸಪ್ಪ ಶೆಟ್ಟಿ ಎಸ್.ಪಂತಡ್ಕ, ಮಂಗಳೂರು ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್, ಯಕ್ಷಗಾನ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಪತ್ರಕರ್ತ ಅಚ್ಯುತ ಚೇವಾರು, ರಂಗಭೂಮಿ ಕಲಾವಿದ ಸುಂದರ ರೈ ಮಂದಾರ ಅವರಿಗೆ ಶ್ರೀ ಒಡಿಯೂರು ಕಲಾಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಯಕ್ಷಗಾನ ಚೆಂಡೆ ವಾದಕ ಅದ್ವೈತ್ ಕನ್ಯಾನ, ಭರತನಾಟ್ಯ ಕಲಾವಿದೆ ಪ್ರತೀಕ್ಷಾ ಶೆಟ್ಟಿ ವಾಮದಪದವು ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಸಾಧ್ವೀ ಮಾತಾನಂದಮಯೀ ಸಾನ್ನಿಧ್ಯ ವಹಿಸಿದ್ದರು. ಒಡಿಯೂರುಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎ.ಸುರೇಶ್ ರೈ, ಮುಂಬೈನ ಉದ್ಯಮಿ ವಾಮಯ್ಯ ಬಿ.ಶೆಟ್ಟಿ ಚೆಂಬೂರು, ರೇವತಿ ವಾಮಯ್ಯ ಶೆಟ್ಟಿ ಭಾಗವಹಿಸಿದ್ದರು.
ಒಡಿಯೂರುಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕಿ ಅನಿತಾ, ಶಿಕ್ಷಕ ಶೇಖರ ಶೆಟ್ಟಿ ಬಾಯಾರು, ಒಡಿಯೂರು ಗುರುದೇವ ಐಟಿಐನ ಪ್ರಾಂಶುಪಾಲ ಪ್ರವೀಣ್, ಗ್ರಾಮ ವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ಗ್ರಾಮ ವಿಕಾಸ ಯೋಜನೆಯ ಕಡಬ ಮೇಲ್ವಿಚಾರಕಿ ಕಾವ್ಯಾಮಧು ಸನ್ಮಾನ ಪತ್ರ ವಾಚಿಸಿದರು.
ಸಂಸ್ಥಾನದ ಮಾಹಿತಿ, ಚಟುವಟಿಕೆ ಒಳಗೊಂಡ ಪರಿಚಯ ದರ್ಪಣ -2025 ಪುಸ್ತಕವನ್ನು ಸ್ವಾಮೀಜಿ ಬಿಡುಗಡೆ ಮಾಡಿದರು. ಬಳಿಕ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ತಾಲ್ಲೂಕಿನ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಿಸಲಾಯಿತು.
ರೇಣುಕಾ ಎಸ್.ರೈ ಪ್ರಾರ್ಥಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ಸ್ವಾಗತಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಭಂಡಾರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.