ADVERTISEMENT

ಸಂತ್ರಸ್ತೆ ಪರ ಹೋರಾಟ ಹತ್ತಿಕ್ಕುವ ಯತ್ನ

ಪೊಲೀಸ್ ಇಲಾಖೆ ವಿರುದ್ಧ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಆರೋಪ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 11:23 IST
Last Updated 7 ಡಿಸೆಂಬರ್ 2021, 11:23 IST

ಮಂಗಳೂರು: ಕಾನೂನು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ವಕೀಲ ಕೆ.ಎಸ್‌.ಎನ್. ರಾಜೇಶ್ ಭಟ್ ವಿರುದ್ಧ ಪ್ರಕರಣ ದಾಖಲಾಗಿ 50 ದಿನ ಕಳೆದರೂ, ಪೊಲೀಸ್ ಇಲಾಖೆ ಆರೋಪಿಯನ್ನು ಬಂಧಿಸಿಲ್ಲ. ಬದಲಾಗಿ, ಸಂತ್ರಸ್ತೆ ಪರವಾಗಿ ನಡೆಯುವ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಆರೋಪಿಸಿದರು.

ಮಂಗಳವಾರ ಇಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಪದಾಧಿಕಾರಿಗಳ ಜತೆಗೂಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೋಪಿ ರಾಜೇಶ್ ಭಟ್ ವಿರುದ್ಧ ಅಕ್ಟೋಬರ್ 18ರಂದು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ನ್ಯಾಯಾಲಯವು ಆರೋಪಿಯ ನಿರೀಕ್ಷಣಾ ಜಾಮೀನು ವಜಾಗೊಳಿಸಿದೆ. ಹೈಕೋರ್ಟ್‌ನಲ್ಲಿ ಕೂಡ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಇಷ್ಟು ದಿನಗಳು ಕಳೆದರೂ ಪೊಲೀಸ್ ಇಲಾಖೆ ಆರೋಪಿಯನ್ನು ಬಂಧಿಸಿಲ್ಲ’ ಎಂದರು.

‘ಈ ಸಂಬಂಧ ನಾವು ಪ್ರತಿಭಟನೆಗೆ ಮುಂದಾದರೆ, ಇಲಾಖೆ ಅನುಮತಿ ನಿರಾಕರಿಸುತ್ತದೆ. ಈಗ ನೀತಿ ಸಂಹಿತೆಯ ಕಾರಣ ನೀಡುವ ಇಲಾಖೆ, ಬೇರೆ ಸಂಘಟನೆಗಳಿಗೆ ಪ್ರತಿಭಟನೆ ನಡೆಸಲು ಅನುಮತಿ ನೀಡುತ್ತಿದೆ. ಪ್ರಕರಣದ ತನಿಖಾಧಿಕಾರಿ, ಸಂತ್ರಸ್ತ ಯುವತಿಗೆ ಕರೆ ಮಾಡಿ ಮಾನಸಿಕ ಹಿಂಸೆ ನೀಡುವ ಜತೆಗೆ ನೈತಿಕ ಧೈರ್ಯ ಕುಗ್ಗಿಸುತ್ತಿದ್ದಾರೆ. ಆಕೆಗೆ ಪದೇ ಪದೇ ಠಾಣೆಗೆ ಬರುವಂತೆ ತಿಳಿಸಿದರೂ, ವಾಹನ ವ್ಯವಸ್ಥೆ, ಜೊತೆಗೆ ಒಬ್ಬರು ಮಹಿಳಾ ಪೊಲೀಸ್ ಒದಗಿಸುವ ಕಾರ್ಯ ಆಗುತ್ತಿಲ್ಲ’ ಎಂದು ದೂರಿದರು.

ADVERTISEMENT

‘ಆರೋಪಿ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಿ, ಲುಕ್ ಔಟ್ ನೋಟಿಸ್ ಜಾರಿಗೊಳಿಸುವುದಾಗಿ ಪೊಲೀಸ್ ಕಮಿಷನರ್ ಹೇಳಿದ್ದಾರೆ. ಆರೋಪಿಯು ಜಿಲ್ಲೆಯಲ್ಲಿ ಇರುವ ಬಗ್ಗೆ ಮಾಹಿತಿ ನೀಡಿದಾಗ, ಆತನನ್ನು ಬಂಧಿಸುವ ಕೆಲಸವನ್ನು ಇಲಾಖೆ ಮಾಡಿಲ್ಲ. ಪೊಲೀಸ್ ಕಮಿಷನರ್ ಭೇಟಿಗೆ ಹಲವಾರು ಬಾರಿ ಪ್ರಯತ್ನಿಸಿದರೂ ಅವಕಾಶ ಸಿಗಲಿಲ್ಲ. ಆರೋಪಿಗೆ ಸುಪ್ರೀಂ ಕೋರ್ಟ್‌ಗೆ ಹೋಗಿ ಜಾಮೀನು ಪಡೆಯಲು ಅನುಕೂಲ ಕಲ್ಪಿಸುತ್ತಿರುವಂತೆ ಭಾಸವಾಗುತ್ತಿದೆ. ಈ ಪ್ರಕರಣದ ತನಿಖೆಯನ್ನು ಡಿಸಿಪಿ ಹರಿರಾಂ ಶಂಕರ್ ಅವರಿಗೆ ಹಸ್ತಾಂತರಿಸಬೇಕು. ಆರೋಪಿಯನ್ನು ಶೀಘ್ರ ಬಂಧಿಸದಿದ್ದಲ್ಲಿ ಸಂತ್ರಸ್ತೆ ಜತೆ ಸೇರಿ ಆಮರಣಾಂತ ಧರಣಿ ನಡೆಸುತ್ತೇವೆ’ ಎಂದು ಎಚ್ಚರಿಸಿದರು.

ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಧನುಷ್ ಶೆಟ್ಟಿ, ವಿಖ್ಯಾತ್ ಉಳ್ಳಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.