
ಸೈಬರ್ ವಂಚನೆ
ಮಂಗಳೂರು: ಸೈಬರ್ ಅಪರಾಧ ಕೃತ್ಯಕ್ಕೆ 300ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹಾಗೂ 250 ಕ್ಕೂ ಹೆಚ್ಚು ಸಿಮ್‌ಗಳನ್ನು ಬಳಸಿ ಹಲವಾರು ಮಂದಿಗೆ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿನ ಸೆನ್ ಅಪರಾಧ ಠಾಣೆಯ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ತ್ರಿಪುರ ರಾಜ್ಯದ ಧಾಲಾಯ್ ದಮೆಂಜಯ್ ರಿಯಾಂಗ್ (27) ಹಾಗೂ ಮಣಿಪುರ ರಾಜ್ಯದ ಕಂಗ್‌ಪೋಕ್ಪಿ ಜಿಲ್ಲೆಯ ಹಮ್‌ಗ್ಟೆ ರಿಯೆಯ್ಲ್ ಕೋಮ್ ಅಲಿಯಾದ್ ಮಂಗ್ಟೆ ಅಮೋಶ್ (33) ಬಂಧಿತರು. ಆರೋಪಿ ಹಮ್‌ಗ್ಟೆ ರಿಯೆಯ್ಲ್ ಕೋಮ್ 300ಕ್ಕೂ ಹೆಚ್ಚೂ ಬ್ಯಾಂಕ್ ಖಾತೆಗಳನ್ನು ಹಾಗೂ 250ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಸೈಬರ್ ವಂಚನೆ ಕೃತ್ಯಕ್ಕೆ ಬಳಸಿದ್ದು ಕಂಡುಬಂದಿದೆ. ಆತನಿಂದ 8 ಮೊಬೈಲ್, 20 ಬ್ಯಾಂಕ್‌ಗಳ ಡೆಬಿಟ್ ಕಾರ್ಡ್‌ಗಳು, 18 ಬ್ಯಾಂಕ್‌ಗಳ ಪಾಸ್‌ಬುಕ್‌ಗಳು, 11 ಬ್ಯಾಂಕ್‌ಗಳ ಚೆಕ್ ಬುಕ್‌ಗಳು ಹಾಗೂ 7 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ನಗರ ಪೊಲೀಸ್ ಕಮಿನಷರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ವ್ಯಕ್ತಿಯೊಬ್ಬರಿಗೆ ಸೇರಿದ ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ₹ 7.27 ಲಕ್ಷ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿದ ಬಗ್ಗೆ ಸಂತ್ರಸ್ತ ವ್ಯಕ್ತಿಯೊಬ್ಬರು ನಗರದ ಸೆನ್ ಅಪರಾಧ ಠಾಣೆಗೆ 2024ರಲ್ಲಿ ದೂರು ನೀಡಿದ್ದರು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 (ಸಿ) ಮತ್ತು (ಡಿ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420ರ ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.
‘ಈ ಪ್ರಕರಣದಲ್ಲಿ ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದು ಪರಿಶೀಲಿಸಿದಾಗ ಆರೋಪಿಗಳಿಬ್ಬರು ಕೃತ್ಯದಲ್ಲಿ ಕೈಜೋಡಿಸಿದ್ದು ಗೊತ್ತಾಗಿದೆ. ಆರೋಪಿ ದಮೆಂಜಯ್ ರಿಯಾಂಗ್ ಎಂಬಾತನನ್ನು ನ.13ರಂದು ಹಾಗೂ ಆರೋಪಿ ಹಮ್‌ಗ್ಟೆ ರಿಯೆಯ್ಲ್ ಕೋಮ್‌ನನ್ನು ನ15ರಂದು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.